ನಾಟಕಗಳಿಂದ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ : ಎಸ್. ರುದ್ರೇಶ್ವರ
ಚನ್ನಪಟ್ಟಣ : ಅಸ್ಪøಶ್ಯತೆ ನಿವಾರಣೆ ಜಾಗೃತಿ ಮೂಡಿಸುವಲ್ಲಿ ಬೀದಿ ನಾಟಕಗಳ ಪಾತ್ರ ಪ್ರಮುಖವಾಗಿದೆ ಎಂದು ಸಂಶೋಧಕ ಎಸ್. ರುದ್ರೇಶ್ವರ ತಿಳಿಸಿದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ 2021-22ನೇ ಸಾಲಿನ ಗಿರಿಜನ ಉಪಯೋಜನೆ ಅಡಿಯಲ್ಲಿ ತಾಲ್ಲೂಕಿನ ಮಾಕಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇರುಳಿಗರದೊಡ್ಡಿಯಲ್ಲಿ ಆಯೋಜಿಸಿದ್ದ ಅಸ್ಪøಶ್ಯತಾ ನಿವಾರಣೆ ಅರಿವು ಬೀದಿ ನಾಟಕಗಳ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಒಳ್ಳೆಯ ನಾಟಕಗಳು ಮನುಷ್ಯನ ಮನಸ್ಸಿನ ಮೇಲೆ ತುಂಬಾ ಪರಿಣಾಮ ಬೀರುತ್ತವೆ. ನಾಟಕಗಳು ಮನೋರಂಜನೆಗೆ ಪೂರಕವಾಗಿವೆ. ಹೀಗಾಗಿ ಮೊಬೈಲ್ ಗಳಲ್ಲಿ ಹೆಚ್ಚು ಸಮಯ ಕಳೆಯುವುದನ್ನು ಬಿಟ್ಟು ನಾಟಕಗಳತ್ತ ಒಲವು ತೋರಬೇಕು ಎಂದರು.
ನಾಟಕದಿಂದ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಿದೆ. ಸಮಾಜದಲ್ಲಿ ಎರಡೇ ಜಾತಿಗಳು ಇವೆ. ಒಂದು ಹೆಣ್ಣು, ಇನ್ನೊಂದು ಗಂಡು. ಹೀಗಾಗಿ ಯಾರೂ ಮೇಲು-ಕೀಳಲ್ಲ. ಸರ್ವರೂ ಸಮಾನರು ಎಂದು ಅವರು ಹೇಳಿದರು.
ಆದಿವಾಸಿ ಹೋರಾಟಗಾರ ಕೃಷ್ಣಮೂರ್ತಿ ಇರುಳಿಗ ಮಾತನಾಡಿ ಜಿಲ್ಲೆಯಲ್ಲಿ ವಾಸಿಸುತ್ತಿರುವ ಇರುಳಿಗ ಸಮುದಾಯದ ಜನರು ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಚುನಾಯಿತ ಪ್ರತಿನಿಧಿಗಳು ಹಾಗೂ ಸರ್ಕಾರ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು. ಬುಡಕಟ್ಟು ಜನರು ಜಾಗೃತರಾಗಿ ತಮಗೆ ಇರುವ ಸರ್ಕಾರಿ ಸವಲತ್ತುಗಳನ್ನು ಬಳಸಿಕೊಂಡು ಉತ್ತಮವಾದ ಜೀವನ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.
ಎಸ್‍ಡಿಎಂಸಿ ರಾಜ್ಯ ಘಟಕದ ಉಪಾಧ್ಯಕ್ಷ ಶಂಭುಲಿಂಗೇಗೌಡ ಮಾತನಾಡಿ ಬುಡಕಟ್ಟು ಸಮುದಾಯದ ಮಕ್ಕಳು ಶಿಕ್ಷಣವನ್ನು ಪಡೆದುಕೊಂಡರೆ ಮಾತ್ರ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ. ಎಲ್ಲರೂ ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಾಲೆಗೆ ಸೇರಿಸಬೇಕು ಎಂದು ತಿಳಿಸಿದರು.
ಇರುಳಿಗರದೊಡ್ಡಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಡಿ.ವಿ. ಮಹದೇವಪ್ಪ ಮಾತನಾಡಿ ಬುಡಕಟ್ಟು ಸಮುದಾಯದ ಜನರು ತಮ್ಮ ಮಕ್ಕಳಿಗೆ ಬಾಲ್ಯ ವಿವಾಹವನ್ನು ಮಾಡಬಾರದು. ತಾವು ಶುಚಿತ್ವವನ್ನು ಕಾಪಾಡಿಕೊಳ್ಳುವ ಜತೆಗೆ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಎಂದು ತಿಳಿಸಿದರು.
ಕನಕಪುರದ ಮುತ್ತುರಾಜ್ ಸಾಂಸ್ಕøತಿಕ ಕಲಾ ತಂಡದವರು ಬೀದಿ ನಾಟಕದ ಪ್ರದರ್ಶನ ನಡೆಸಿಕೊಟ್ಟರು. ಮುಖಂಡರಾದ ಮಹೇಶ್, ನಿಂಗಯ್ಯ, ಪಾರ್ವತಮ್ಮ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಉದಯ್, ಕಲಾವಿದರಾದ ಸಿದ್ದರಾಜು, ವಿಶ್ವನಾಥ್, ಸಿಂಚನ, ಕುಮಾರ್, ಹೊನ್ನೇಶ್, ಕೃಷ್ಣ, ಮುತ್ತುರಾಜು, ರೋಜ್ ಮೇರಿ, ಎನ್. ಶೇಖರ್, ವೀರಸ್ವಾಮಿ, ಶ್ರೀನಿವಾಸ್ ಇದ್ದರು.




