ಊರಿಗೆ ಉಪಕಾರಿಯಾಗಿದ್ದ ಡಿ.ವಿ. ದೊಡ್ಡವೀರಯ್ಯ

ಸ್ವಾತಂತ್ರ್ಯ ಹೋರಾಟಗಾರರು, ಶಿಕ್ಷಣ ಪ್ರೇಮಿಗಳು ಆದ ಡಿ.ವಿ. ದೊಡ್ಡವೀರಯ್ಯ ಅವರು ನಿಧನರಾಗಿ ಇಂದಿಗೆ ಹತ್ತು ವರ್ಷ (ನಿಧನ: 13/09/2011). ಇವರು ನಿಧನರಾದಾಗ 97 ವರ್ಷ ವಯಸ್ಸಾಗಿತ್ತು.
ರಾಮನಗರ ತಾಲ್ಲೂಕಿನ ಕೂಟಗಲ್ ಹೋಬಳಿಯ ದೊಡ್ಡಗಂಗವಾಡಿ ಗ್ರಾಮದಲ್ಲಿ ಅಪ್ಪಾಜಯ್ಯ ಮತ್ತು ವೀರಮ್ಮ ದಂಪತಿಗಳ ಸುಪುತ್ರರಾಗಿ ಜನಿಸಿದ ಡಿ.ವಿ. ದೊಡ್ಡವೀರಯ್ಯ ಅವರಿಗೆ ಮೂರು ಜನ ಪುತ್ರರು, ನಾಲ್ವರು ಪುತ್ರಿಯರು. ಈಚೆಗೆ ಅವರ ದ್ವಿತೀಯ ಪುತ್ರ ರಾಜಶೇಖರಯ್ಯ ನಿಧನರಾದರು. ದೊಡ್ಡವೀರಯ್ಯನವರ ಪತ್ನಿ ಅರ್ಚಕರಹಳ್ಳಿಯ ವೀರಭದ್ರೇಗೌಡರ ಪುತ್ರಿ ಶಿವಲಿಂಗಮ್ಮ. ಅವರು ಈ ಮೊದಲೆ ನಿಧನರಾಗಿದ್ದಾರೆ.
ರಾಮನಗರದಲ್ಲಿ ಅಂದಿನ ವಿವಿದೋದ್ದೇಶ ಪ್ರೌಢಶಾಲೆ (ಮಲ್ಟಿ ಪರ್ಪಸ್ ಸ್ಕೂಲ್) ಯಲ್ಲಿ ವಿದ್ಯಾಭ್ಯಾಸ ಪಡೆದಿದ್ದ ಅವರು ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಪ್ರಭುತ್ವ ಹೊಂದಿದ್ದರು. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ್ದ ಅವರು ಶಿವಪುರ ಧ್ವಜ ಸತ್ಯಾಗ್ರಹ ಹೋರಾಟದಲ್ಲಿ ಪಾಲ್ಗೊಂಡಿದ್ದರು.
ಗ್ರೂಪ್ ಪಂಚಾಯಿತಿಯ ಛೇರ್ಮನ್ ಆಗಿದ್ದರು. ದೊಡ್ಡಗಂಗವಾಡಿಯಲ್ಲಿರುವ ಶ್ರೀ ಸಿದ್ದಗಂಗಾ ಪ್ರೌಢಶಾಲೆಯ ಕಟ್ಟಡ ನಿರ್ಮಾಣಕ್ಕೆ ಸಂಸತ್ ಸದಸ್ಯರಾಗಿದ್ದ ರಾಜಶೇಖರಮೂರ್ತಿ ಅವರ ಸಂಸತ್ ನಿಧಿಯಿಂದ 6 ಲಕ್ಷ ಅನುದಾನವನ್ನು ತಂದು ಸುಸಜ್ಜಿತ ಪ್ರೌಢಶಾಲಾ ಕಟ್ಟಡವನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಅಂದಿನ ಕಾಲಘಟ್ಟದ ಹಿರಿಯರಾದ ಅಂಜನಾಪುರದ ಭದ್ರಯ್ಯ, ಸುಗ್ಗನಹಳ್ಳಿಯ ರೇವಣಸಿದ್ದಪ್ಪ, ಹನುಮಂತೇಗೌಡನದೊಡ್ಡಿಯ ಎಚ್. ಕೆಂಪಯ್ಯ, ಕೂಟಗಲ್ ನ ಹೇಮಗಿರಿಗೌಡ, ಚಿಕ್ಕೇಗೌಡರ ಸಮಕಾಲೀನರಾಗಿ ವೀರಶೈವ ಲಿಂಗಾಯತ ಜನಾಂಗದ ಅಭಿವೃದ್ಧಿಗೆ ದುಡಿದವರಲ್ಲಿ ಪ್ರಮುಖರಾಗಿದ್ದಾರೆ.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಎಸ್. ನಿಜಲಿಂಗಪ್ಪ, ವೀರೇಂದ್ರ ಪಾಟೀಲ್, ರಾಮಕೃಷ್ಣ ಹೆಗಡೆ ಹಾಗೂ ಇನ್ನಿತರ ಹಿರಿಯ ರಾಜಕಾರಣಿಗಳ ಜೊತೆ ಉತ್ತಮವಾದ ಒಡನಾಟವನ್ನು ಹೊಂದಿದ್ದರು.
ಊರಿಗೆ ಉಪಕಾರಿಯಾಗಿದ್ದ ಡಿ.ವಿ. ದೊಡ್ಡವೀರಯ್ಯನವರು ನ್ಯಾಯ ಪಂಚಾಯಿತಿಯ ಮೂಲಕ ಜನರ ಹಲವಾರು ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಯಶಸ್ವಿಯಾಗಿದ್ದರು.
ತಾಲ್ಲೂಕ್ ರೂರಲ್ ಇಂಡಸ್ಟ್ರೀಯಲ್ ಕೊ-ಆಪ್ ರೇಟಿವ್ ಸೊಸೈಟಿ, ಜನರಲ್ ಬಾಡಿ, ರಾಮನಗರಂ.
ಎಡಗಡೆಯಿಂದ ಕುಳಿತಿರುವವರು : ಡಿ.ವಿ. ದೊಡ್ಡವೀರಯ್ಯ ಡೈರಕ್ಟರು, ಜಿ.ವಿ. ಸಂಜೀವಯ್ಯ ಡೈರಕ್ಟರು, ಕೆ.ವಿ. ಹೇಮಣ್ಣಗೌಡರು ಪ್ರೆಸಿಡೆಂಟರು, ಎಸ್.ಎಲ್. ಮುದ್ದಬಸವಯ್ಯ ಡೈರಕ್ಟರು, ಕೆ.ಎಂ. ಸಿಂಗ್ರೇಗೌಡ ಸೆಕ್ರೆಟರಿ, ವಿ. ಸೋಮಯ್ಯರೆಡ್ಡಿ ಡೈರಕ್ಟರು, ಸಿ. ರಾಮಯ್ಯ ಡೈರಕ್ಟರು.
ಎಡಗಡೆಯಿಂದ ನಿಂತಿರುವವರು : ಕೃಷ್ಣಪ್ಪ ಡೈರಕ್ಟರು, ಕೆ.ಎಂ. ಬೈರಶೆಟ್ಟಿ ಡೈರಕ್ಟರು, ಗ್ರೂಪ್ ಇನ್ ಸ್ಪೆಕ್ಟರ್ ಬಿ.ಎಲ್. ಲಿಂಗಪ್ಪ ಡೈರಕ್ಟರು, ಜಿ.ಎಂ. ಅಣ್ಣಯ್ಯಸ್ವಾಮಿ ಕೈ ಕಾಗದದ ಸೂಪರ್ ವೈಸರ್, ಶಿವಶಂಕರಯ್ಯ, ಶಿವಣ್ಣ ಕೆಲಸಗಾರರು.
ಲೇಖನ : ಎಸ್. ರುದ್ರೇಶ್ವರ ಸಾಹಿತ್ಯ ಸಂಶೋಧನಾ ವಿದ್ಯಾರ್ಥಿ

Leave a Reply

Your email address will not be published. Required fields are marked *