ಪುನೀತ್ ರಾಜ್ ಕುಮಾರ್ ಕರುನಾಡಿನ ಆದರ್ಶ ವ್ಯಕ್ತಿ

ರಾಮನಗರ: ಅಕಾಲಿಕ ಮರಣಕ್ಕೀಡಾದ ದಿವಂಗತ ನಾಯಕ ನಟ ಪುನೀತ್ ರಾಜ್ ಕುಮಾರ್ ಅವರ ಸ್ಮರಣಾರ್ತ ಮಕ್ಕಳಿಗೆ ನೋಟ್ ಪುಸ್ತಕ ವಿತರಣೆ ಕಾರ್ಯಕ್ರಮವನ್ನು ನಗರದ ಮಾಗಡಿ ರಸ್ತೆ ರಾಯರದೊಡ್ಡಿ ವೃತ್ತದಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಅಪ್ಪು ಭಾವಚಿತ್ರಕ್ಕೆ ಗಣ್ಯರು ಪುಷ್ಪ ನಮನ ಸಲ್ಲಿಸಿ ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್ ವಿತರಿಸಲಾಯಿತು. ನಂತರ ನೆರೆದಿದ್ದ ಅಪಾರ ಸಂಖ್ಯೆಯ ಪುನೀತ್ ಅಭಿಮಾನಿಗಳಿಗೆ ಊಟದ ವ್ಯವಸ್ಥೆಯನ್ನು ಏರ್ಪಡಿಸಲಾಗಿದ್ದು, ಸುಮಾರು 700 ಅಧಿಕ ಮಂದಿ ಮಾಂಸದೂಟ ಸವಿದರು.

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ನಗರಸಭೆ ಮಾಜಿ ಅಧ್ಯಕ್ಷ ಚಿಕ್ಕವೀರೇಗೌಡ ಅವರು, ದಿವಂಗತ ಪುನೀತ್ ರಾಜ್ ಕುಮಾರ್ ಅವರು ನಾಡಿನ ಯುವ ಪೀಳಿಗೆಗೆ ಆದರ್ಶ ವ್ಯಕ್ತಿಯಾಗಿದ್ದಾರೆ ಎಂದರು.

ಅಪ್ಪು ಅವರು ಕೇವಲ ಚಲನಚಿತ್ರಗಳಲ್ಲಿ ನಾಯಕ ನಟರಾಗಿರಲಿಲ್ಲ, ನಿಜ ಜೀವನದಲ್ಲೂ ನಾಯಕರಾಗಿ ಹೊರಹೊಮ್ಮಿದ್ದರು. ಇವರು ಇಡೀ ದೇಶದಲ್ಲೇ ಮಾದರಿ ನಾಯಕ ನಟ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಅವರ ಅಕಾಲಿಕ ನಿಧನದಿಂದ ಕರುನಾಡಿನಲ್ಲಿ ಶೋಕದ ವಾತಾವರಣ ಆವರಿಸಿದೆ. ಅವರ ಸ್ಮರಣಾರ್ಥ ಇಂದು ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ವಿತರಣೆ ಹಾಗೂ ಅಭಿಮಾನಿಗಳಿಗೆ ಊಟದ ವ್ಯವಸ್ಥೆಯನ್ನು ಏರ್ಪಡಿಸಲಾಗಿದೆ‌.

ಅಪ್ಪು ಅವರು ಅಳವಡಿಸಿಕೊಂಡಿದ್ದ ಆದರ್ಶಗಳನ್ನು ಯುವ ಪೀಳಿಗೆ ತಮ್ಮ ಜೀವನದಲ್ಲೂ ಅಳವಡಿಸಿಕೊಂಡರೆ ಸಾಕಷ್ಟು ಸಾಮಾಜಿಕ ಸಮಸ್ಯೆಗಳಿಗೆ ತೀಲಾಂಜಲಿ ಇಡಬಹುದು ಎಂದು ಪುನೀತ್ ರಾಜ್ ಕುಮಾರ್ ಅವರ ಸಾಮಾಜಿಕ ಚಟುವಟಿಕೆಗಳನ್ನು ಸ್ಮರಿಸಿಕೊಂಡರು.

ಅವರು ಸದ್ದಿಲ್ಲದೆ ಕೈಗೊಂಡಿದ್ದ ಸಾಮಾಜ ಸೇವಾ ಕಾರ್ಯಗಳು ಅವರು ಬದುಕಿದ್ದಾಗ ಬೆಳಕಿಗೆ ಬರದಂತೆ ನೋಡಿಕೊಂಡಿದ್ದರು. ಆದರೆ ಅವರು ಅಗಲಿದ ನಂತರ ಅವರು ಕೈಗೊಂಡಿದ್ದ ಬೃಹತ್ ಸಾಮಾಜಿಕ ಚಟುವಟಿಕೆಗಳು ಬೆಳಕಿಗೆ ಬಂದಿವೆ. ಇದು ಅವರ ಮೇರು ವ್ಯಕ್ತಿತ್ವಕ್ಕೆ ನಿದರ್ಶನ ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕೆ.ರಾಜು, ನಗರಸಭೆ ಅಧ್ಯಕ್ಷೆ ಪಾರ್ವತಮ್ಮ, ಉಪಾಧ್ಯಕ್ಷೆ ಪಾರ್ವತಮ್ಮ, ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಚೂಡ ಲಿಂಗೇಶ್ವರ್, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ರಾಜಶೇಖರ್, ಸರ್ಕಲ್ ಇನ್ಸ್ ಪೆಕ್ಟರ್ ನರಸಿಂಹಮೂರ್ತಿ, ಶಿವಸ್ವಾಮಿ, ಕುಮಾರ್ ಗೂಳಿಗೌಡ, ಪ್ರಸನ್ನ ಮತ್ತಿತರರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *