ಭೂ ಸುಧಾರಣೆ, ಗೋಹತ್ಯೆ ನಿಷೇಧ ಕಾಯ್ದೆ ವಾಪಸ್ ಪಡೆಯಲು ಚೀಲೂರು ಮುನಿರಾಜು ಒತ್ತಾಯ

ಕನಕಪುರ: ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಕೇಂದ್ರ ಸರ್ಕಾರವು ವಾಪಸ್ ಪಡೆದಿರುವ ರೀತಿಯಲ್ಲೇ ರಾಜ್ಯ ಸರ್ಕಾರವು ಕೃಷಿ ಕಾಯ್ದೆ, ಭೂ ಸುಧಾರಣೆ ಕಾಯ್ದೆ, ಗೋಹತ್ಯೆ ನಿಷೇಧ ಕಾಯ್ದೆಯನ್ನು ವಾಪಸ್ ಪಡೆಯಬೇಕು ಎಂದು ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷ ಚೀಲೂರು ಮುನಿರಾಜು ಒತ್ತಾಯಿಸಿದರು.
ಕೃಷಿ ಕಾಯ್ದೆಯನ್ನು ವಾಪಸ್ ಪಡಯುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಸೋಮವಾರ ತಹಶೀಲ್ದಾರ್ ವಿ.ಆರ್.ವಿಶ್ವನಾಥ್ ಅವರಿಗೆ ಮನವಿ ಪತ್ರ ಸಲ್ಲಿಸಿದ ನಂತರ ಅವರು ಮಾತನಾಡಿದರು.
‘ರೈತರಿಗೆ ಮಾರಕವಾಗಿರುವ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವ ವಿಚಾರದಲ್ಲಿ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರು ಚಳಿಗಾಲದ ಅಧಿವೇಶನದಲ್ಲಿ ಕಾಯ್ದೆಗಳನ್ನು ವಾಪಸ್ ಪಡೆಯುವುದಿಲ್ಲವೆಂದು ರೈತ ವಿರೋಧಿ ಹೇಳಿಕೆಯನ್ನು ನೀಡಿದ್ದಾರೆ. ಅವರು ಈ ಕೂಡಲೆ ರಾಜ್ಯದಲ್ಲಿನ ರೈತರ ಕ್ಷಮೆಯಾಚಿಸಬೇಕು’ ಎಂದು ಆಗ್ರಹಿಸಿದರು.
‘ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ರೈತ ವಿರೋಧಿ ಕಾಯ್ದೆಗಳನ್ನು ವಾಪಸ್ ಪಡೆಯುಬೇಕು. ಇಲ್ಲವಾದಲ್ಲಿ ದೆಹಲಿ ಮಾದರಿಯಲ್ಲೇ ಸಂಯುಕ್ತ ಕರ್ನಾಟಕ ಹೋರಾಟ ಅಡಿಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲಾಗುತ್ತದೆ’ ಎಂದು ಎಚ್ಚರಿಸಿದರು.
ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಕುಮಾರ್, ಹಿರಿಯ ಮುಖಂಡ ಸಿದ್ದೇಗೌಡ, ತಾಲ್ಲೂಕು ಕಾರ್ಯಾಧ್ಯಕ್ಷ ಬಸವರಾಜು, ಹೋಬಳಿ ಅಧ್ಯಕ್ಷ ರಾಜಕುಮಾರ್, ರೈತ ಮುಖಂಡರಾದ ಕಾಮಯ್ಯ, ಅರಸು, ಮರಿಯಪ್ಪ, ಕೆಂಪರಾಜು, ಸೋಮಯ್ಯ, ನೀಲಕಂಠ, ರಾಘವೇಂದ್ರ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *