ಅಕ್ಕೂರು ಗ್ರಾಪಂ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಸದಸ್ಯ ಎ.ಪಿ.ಹರೀಶ್ ಅವಿರೋಧ ಆಯ್ಕೆ
ರಾಮನಗರ: ತಾಲ್ಲೂಕಿನ ಕೂಟಗಲ್ ಹೋಬಳಿ ಅಕ್ಕೂರು ಗ್ರಾಮ ಪಂಚಾಯತಿ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಸದಸ್ಯ ಎ.ಪಿ.ಹರೀಶ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಿಕಟಪೂರ್ವ ಅಧ್ಯಕ್ಷ ದೊಡ್ಡವೀರಯ್ಯ ಅವರ ರಾಜೀನಾಮೆಯಿಂದ ತೆರವಾಗಿದ್ದ ಅಕ್ಕೂರು ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಎ.ಪಿ.ಹರೀಶ್ ಅವರನ್ನು ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ, ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ತಾಲ್ಲೂಕು ಪಂಚಾಯತಿ ಇಒ ಶಿವಕುಮಾರ್ ಅವರು ಹರೀಶ್ ಅವರ ಅವಿರೋಧ ಆಯ್ಕೆಯನ್ನು ಘೋಷಿಸಿದರು.
ಎಂಟು ಸದಸ್ಯ ಬಲದ ಗ್ರಾಮ ಪಂಚಾಯತಿಯಲ್ಲಿ ಐವರು ಕಾಂಗ್ರೆಸ್ ಬೆಂಬಲಿತರು ಹಾಗೂ ಮೂವರು ಜೆಡಿಎಸ್ ಬೆಂಬಲಿತ ಸದಸ್ಯರಿದ್ದಾರೆ.
ಗ್ರಾಪಂ ನಿಕಟಪೂರ್ವ ಅಧ್ಯಕ್ಷ ದೊಡ್ಡವೀರಯ್ಯ, ಉಪಾಧ್ಯಕ್ಷೆ ಪುಷ್ಪಲತಾ, ಸದಸ್ಯರಾದ ಬೋರಮ್ಮ, ಮಂಜುಳಾ, ಗೌರಮ್ಮ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು.
ಪಿಡಿಒ ಮಹೇಶ್ವರಯ್ಯ, ಕಾರ್ಯದರ್ಶಿ ಶಾರದಮ್ಮ ಹಾಗೂ ಗ್ರಾಪಂ ಸಿಬ್ಬಂದಿ ಚುನಾವಣೆ ಸುಗಮವಾಗಿ ನಡೆಯಲು ಸಹಕಾರ ನೀಡಿದರು.
ಗ್ರಾಪಂ ಮಾಜಿ ಅಧ್ಯಕ್ಷೆ ವಸಂತ ಹನುಮಯ್ಯ, ಮುಖಂಡರಾದ ಪುಟ್ಟಸ್ವಾಮಯ್ಯ,ಎಚ್.ನಂಜೇಗೌಡ, ಬೆಟ್ಟಸ್ವಾಮಿಗೌಡ, ಬಿ.ರವಿ, ಬಸವಯ್ಯ, ಹುಲ್ಲೂರಯ್ಯ, ಎ.ಬಿ.ದೇವರಾಜು ಹಾಗೂ ಗ್ರಾಮಸ್ಥರು ಅಕ್ಕೂರು ಗ್ರಾಪಂ ನೂತನ ಅಧ್ಯಕ್ಷ ಎ.ಪಿ.ಹರೀಶ್ ಅವರನ್ನು ಅಭಿನಂದಿಸಿದರು.
ಅಭಿವೃದ್ಧಿಗೆ ಆದ್ಯತೆ : ಅಕ್ಕೂರು ಗ್ರಾಪಂ ನೂತನ ಅಧ್ಯಕ್ಷ ಎ.ಪಿ.ಹರೀಶ್ ಮಾತನಾಡಿ, ತಾವು ಗ್ರಾಪಂ ಅಧ್ಯಕ್ಷನಾಗಿ ಅವಿರೋಧ ಆಯ್ಕೆಯಾಗಲು ಸಹಕರಿಸಿದ ಗ್ರಾಪಂ ಸದಸ್ಯರು, ಮುಖಂಡರು ಹಾಗೂ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ.
ಮಾಜಿ ಅಧ್ಯಕ್ಷೆ ವಸಂತ ಹನುಮಯ್ಯ ಅವರ ಹಾದಿಯಾಗಿ ಈ ಹಿಂದಿನ ಅಧ್ಯಕ್ಷರು ಹಾಕಿ ಕೊಟ್ಟ ಅಭಿವೃದ್ಧಿ ಮಂತ್ರವನ್ನು ಸ್ಫೂರ್ತಿಯಾಗಿಟ್ಟುಕೊಂಡು ಅಕ್ಕೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದರ ಜೊತೆಗೆ, ಸರ್ವತೋಮುಖ ಬೆಳವಣಿಗೆಗೆ ಕಾಯಾ ವಾಚ ಮನಸಾ ಶ್ರಮವಹಿಸುವುದಾಗಿ ಭರವಸೆ ನೀಡಿದರು.
ರಾಮನಗರ ತಾಲ್ಲೂಕು ಅಕ್ಕೂರು ಗ್ರಾಮ ಪಂಚಾಯತಿ ನೂತನ ಅಧ್ಯಕ್ಷ ಎ.ಪಿ.ಹರೀಶ್ ಅವರು ಮಾಗಡಿ ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಅವರಿಗೆ ಅಭಿನಂದನೆ ಸಲ್ಲಿಸಿದರು. ಮಾಜಿ ಶಾಸಕ ಕೆ.ರಾಜು, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಕೆ.ರಮೇಶ್, ಚನ್ನಪಟ್ಟಣ ಒಕ್ಕಲಿಗರ ಸಾರ್ವಜನಿಕ ವಿದ್ಯಾರ್ಥಿ ನಿಲಯದ ನಿರ್ದೇಶಕ ಚಕ್ಕೆರೆ ವೆಂಕಟರಾಮೇಗೌಡ ಉಪಸ್ಥಿತರಿದ್ದರು.
