ಕನ್ನಡ ಬಾವುಟ ಸುಟ್ಟಿರುವ ಎಂಇಎಸ್ ಪುಂಡರನ್ನು ಗಡಿಪಾರು ಮಾಡಿ : ಎಲ್. ರಮೇಶ್ ಗೌಡ
ಚನ್ನಪಟ್ಟಣ: ಬೆಳಗಾವಿಯಲ್ಲಿ ಕನ್ನಡದ ಬಾವುಟವನ್ನು ಸುಟ್ಟಿರುವ ಎಂಇಎಸ್ ಪುಂಡರನ್ನು ಗಡಿಪಾರು ಮಾಡಬೇಕು ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷ ಎಲ್. ರಮೇಶ್‍ಗೌಡ ಆಗ್ರಹಿಸಿದರು.
ಪಟ್ಟಣದ ಕಾವೇರಿ ಸರ್ಕಲ್‍ನಲ್ಲಿ ಆಯೋಜಿಸಲಾಗಿದ್ದ ಪ್ರತಿಭಟನೆಯಲ್ಲಿ ಎಂಇಎಸ್ ಪುಂಡರ ಪ್ರತಿಕೃತಿ ದಹನ ಮಾಡಿ ಮಾತನಾಡಿದ ಅವರು, ಬೆಳಗಾವಿಯಲ್ಲಿ ಎಂಇಎಸ್ ಕಾಟ ಹೆಚ್ಚಾಗುತ್ತಿದ್ದು, ಸರ್ಕಾರವು ಬೆಳಗಾವಿ ಜಿಲ್ಲೆಯ ರಾಜಕೀಯ ನಾಯಕರಿಗೆ ಹೆದರಿ ಎಂಇಎಸ್ ಪುಂಡರ ವಿರುದ್ಧ ಕ್ರಮಕ್ಕೆ ಮುಂದಾಗಲು ಮೀನಾಮೇಷ ಏಣಿಸುತ್ತಿದ್ದಾರೆ. ಈ ನಿಟ್ಟಿನಲ್ಲೇ ಅವರು ಇದೀಗ ಕನ್ನಡ ಬಾವುಟವನ್ನು ಸುಡುವ ದುಷ್ಕøತ್ಯ ಮಾಡಿದ್ದಾರೆ. ಇವರನ್ನು ಹೀಗೆ ಬಿಟ್ಟರೆ ಬೆಳಗಾವಿಯೇ ನಮ್ಮದೆನ್ನುತ್ತಾರೆ. ಈ ನಿಟ್ಟಿನಲ್ಲಿ ಇಂತಹ ಪುಂಡರ ವಿರುದ್ಧ ಸರ್ಕಾರ ಕೂಡಲೆ ಕಾನೂನು ಕ್ರಮ ಕೈಗೊಂಡು ಅವರನ್ನು ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.
ಈ ಹಿಂದೆ ಕನ್ನಡ ರಾಜ್ಯೋತ್ಸದ ವೇಳೆ ಸರ್ಕಾರಿ ಕಚೇರಿಗಳ ಮೇಲೆ ಕನ್ನಡ ಬಾವುಟ ಹಾರಿಸಲು ಬಿಡದೆ ಕಿತಾಪತಿ ಮಾಡಿದ್ದರು. ಇದೀಗ ನಡು ರಸ್ತೆಯಲ್ಲಿ ಕನ್ನಡ ಧ್ವಜವನ್ನು ಸುಟ್ಟಿದ್ದಾರೆ. ಇಂತಹವರನ್ನು ಸುಮ್ಮನೆ ಬಿಟ್ಟರೆ ಮುಂದೆ ನಾಡನ್ನು ಆಕ್ರಮಿಸಿಕೊಳ್ಳುತ್ತಾರೆ. ಈ ನಿಟ್ಟಿನಲ್ಲಿ ಎಂಇಎಸ್ ಪುಂಡರನ್ನು ಕೂಡಲೇ ಬಂದಿಸಿ ಕ್ರಿಮಿನಲ್ ಪ್ರಕರಣ ದಾಖಲಿಸಿ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.
ವೇದಿಕೆ ಜಿಲ್ಲಾಧ್ಯಕ್ಷ ಬೇವೂರು ಯೋಗೇಶ್‍ಗೌಡ ಮಾತನಾಡಿ, ಬೆಳಗಾವಿಯಲ್ಲಿ ಮಹಾಮೇಳ ಮಾಡಲು ಮುಂದಾಗಿದ್ದವರಿಗೆ ಮಸಿ ಬಳಿದ ನಾಡಪ್ರೇಮಿಗಳ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ವಾಪಸ್ ಪಡೆಯಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಕನ್ನಡ ನಾಡಿನಲ್ಲಿ ಕನ್ನಡಿಗನಿಗೆ ಶಿಕ್ಷಕಿ ನೀಡುವುದು ಸರ್ಕಾರದ ಧೋರಣೆಯಾಗಿದೆ. ಈ ನಿಟ್ಟಿನಲ್ಲಿ ಕೂಡಲೇ ಪ್ರಕರಣ ವಾಪಸ್ ಪಡೆದು ಎಂಇಎಸ್ ಪುಂಡರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ವೇದಿಕೆ ಜಿಲ್ಲಾಧ್ಯಕ್ಷ ರಂಜಿತ್‍ಗೌಡ, ಕಾರ್ಯದರ್ಶಿ ಕೃಷ್ಣೇಗೌಡ, ಡಾ. ರಾಜ್ ಕಲಾಬಳಗದ ಎಲೇಕೇರಿ ಮಂಜುನಾಥ್, ರಂಗಭೂಮಿ ಕಲಾವಿದ ಎಂಟಿಆರ್ ತಿಮ್ಮರಾಜು, ರೈತಸಂಘದ ಸುಜೀವನ್‍ಕುಮಾರ್, ವಿಧಾನಸೌಧ ರಮೇಶ್, ಶ್ಯಾಂ, ಕಡ್ಲೆಪುರಿ ಸಿದ್ದಪ್ಪ, ಪಾನಿಪುರಿ ಚನ್ನಪ್ಪ, ಕೇಶವ, ಅನಿಲ್‍ಗೌಡ, ಎಲೆಕೇರಿ ರೇಣುಕ ಇತರರು ಇದ್ದರು.
