ಕುರುಬರಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಸಭೆ
ರಾಮನಗರ: ಕೃಷಿ ಸಾಲ ಹಾಗೂ ಇನ್ನಿತರೆ ಸಾಲ ಸವಲತ್ತುಗಳನ್ನು ಪಡೆದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರು ಸಕಾಲದಲ್ಲಿ ಸಾಲ ಪಾವತಿ ಮಾಡುವ ಮೂಲಕ ಸಹಕಾರ ಸಂಘದ ಪ್ರಗತಿಯ ಜೊತೆಗೆ ತಮ್ಮ ವಯಕ್ತಿಕ ಬೆಳವಣಿಗೆಯನ್ನೂ ಕಾಣಬಹುದಾಗಿದೆ ಎಂದು ರಾಮನಗರ ಶಾಖೆ ಬಿಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಬಿ.ಪಿ.ನವೀನ್ ಕುಮಾರ್ ಕಿವಿಮಾತು ಹೇಳಿದರು.
ತಾಲ್ಲೂಕಿನ ಕರುಬರಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2020-21ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
“ಒಬ್ಭರಿಗಾಗಿ ಎಲ್ಲರೂ, ಎಲ್ಲರಿಗಾಗಿ ಒಬ್ಬರು” ಎಂಬ ತತ್ವದಡಿ ಕೆಲಸ ನಿರ್ವಹಿಸುತ್ತಿರುವ ಸಹಕಾರ ಸಂಘದ ಅಭಿವೃದ್ಧಿಗೆ ಸದಸ್ಯರು, ನಿರ್ದೇಶಕರು, ಅಧ್ಯಕ್ಷ- ಉಪಾಧ್ಯಕ್ಷರು ಹಾಗೂ ಸಿಬ್ಬಂದಿಗಳ ಸಮನ್ವಯ ಹಾಗೂ ಸಹಕಾರ ಬಹಳ ಮುಖ್ಯವಾಗಿದೆ ಎಂದು ಮನವಿ ಮಾಡಿದರು.
ಕೆಲವು ನಿರ್ದೇಶಕರು ಮಾತನಾಡಿ, ರೈತರಿಗೆ ರಸಗೊಬ್ಬರ ಹಾಗೂ ಮಾವಿನ ಮರಗಳಿಗೆ ಔಷಧ ಸಿಂಪಡಣೆ ಮಾಡುವ ನಿಟ್ಟಿನಲ್ಲಿ ಸಹಕಾರ ಸಂಘವು ಸಕಾಲದಲ್ಲಿ ನೆರವು ನೀಡಬೇಕು ಎಂದು ಆಗ್ರಹಿಸಿದರು.
ಸಿಇಒ ಸಿ.ನಂದೀಶ್ ಕುಮಾರ್ ಪ್ರಸಕ್ತ ವರ್ಷದ ಆಯವ್ಯಯ ಮಂಡಿಸಿ, ನಿರ್ದೇಶಕರು- ಸದಸ್ಯರಿಂದ ಅನುಮೋದನೆ ಪಡೆದುಕೊಂಡರು.
ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವೈ.ಎಚ್.ಮಂಜು, ಬಿಡಿಸಿಸಿ ಬ್ಯಾಂಕ್ ರಾಮನಗರ ಶಾಖೆ ವ್ಯವಸ್ಥಾಪಕ ಜಿ.ಆರ್.ಕಿರಣ್ ಕುಮಾರ್, ಸಂಘದ ಅಧ್ಯಕ್ಷೆ ನೀಲಮ್ಮ, ಉಪಾಧ್ಯಕ್ಷ ಸಿದ್ದರಾಮಯ್ಯ, ನಿರ್ದೇಶಕರಾದ ಕೆ.ಶಿವಣ್ಣ, ಕುಮಾರ್, ಚಂದ್ರು, ಪಿ.ಮೋಹನ್ ಕುಮಾರ್, ಎಚ್.ಪ್ರಸಾದ್, ಮೋಹನ್ ಕುಮಾರ್, ಶಿವರಾಜಾಚಾರ್, ಭಾಗ್ಯಮ್ಮ, ಚಿಕ್ಕಣ್ಣ,ಸಹಾಯಕ ಗುಮಾಸ್ತೆ ಕೆ.ಶೃತಿ, ಮಾರಾಟ ಗುಮಾಸ್ತ ಆರ್. ಯೋಗಾನಂದ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.