ಮಾರುತಿ ಡಗೆಣ್ಣವರ್ ಮತ್ತವರ ಕುಟುಂಬ

ನಮ್ಮ ಗೆಳೆಯರ ಬಳಗದ, ಹೋರಾಟಗಳ ಒಡನಾಡಿ ಬೆಳಗಾಂವದ ಮಾರುತಿ ಡಗೆಣ್ಣವರ್ ಕುಟುಂಬಕ್ಕೆ ಈಗ ಪುತ್ರಿಶೋಕ.
ನಾವೆಲ್ಲ ಬಲ್ಲ ನೇಮಿಚಂದ್ರ ಅಕಾಲಿಕವಾಗಿ ಮೃತಪಟ್ಟಿರುವುದು ಎಲ್ಲರಲ್ಲೂ ಬಹಳ ವೇದನೆ , ಸಂಕಟ ಉಂಟು ಮಾಡಿದೆ.
ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಕೇಳಿಬರುವ ನೇಮಚಂದ್ರನ ಹೆಸರು ತಮ್ಮ ಮಗಳಿಗಿರಿಸಿದ್ದರೆನ್ನುವುದೇ ಡಗೆಣ್ಣವರ್ ರವರ ವ್ಯಕ್ತಿತ್ವದ ಒಂದಂಶ ತೋರುವಂತಿದೆ.
ಈಗ್ಗೆ ಮುವತ್ತು ವರ್ಷಗಳ ಹಿಂದೆಯೇ ಬೆಳಗಾಂವದಲ್ಲಿ ನೇಕಾರರ ಸಂಘಟನೆಯ ಮೂಲಕ ಸಾಮಾಜಿಕ ಹೋರಾಟಗಳಿಗೆ ಬಂದ ಮಾರುತಿ ಡಗೆಣ್ಣವರ್ ನಂತರ ನಮ್ಮೊಂದಿಗೆ ಕರ್ನಾಟಕ ವಿಮೋಚನಾ ರಂಗದಲ್ಲೂ ಸಕ್ರಿಯರಾಗಿದ್ದರು.
ಅವರ ಸಾಮಾಜಿಕ ಬದ್ದತೆ ಅದೆಷ್ಟಿತ್ತೆಂದರೆ ತಮ್ಮ ವೈಯಕ್ತಿಕ ಬೇಕುಗಳನ್ನು ಲೆಕ್ಕಿಸದೆ, ಕುಟುಂಬದ ಸೌಖ್ಯವನ್ನೂ ಬದಿಗಿರಿಸಿ ಸಮಾಜದ ಒಳಿತಿಗಾಗಿಯೇ ಬದುಕು ಸವೆಸಿದರು, ಗಂಧ ತೈದಂತೆ ತೇದು, ಸವೆದು ದಣಿದರು. ಅವರ ಕುಟುಂಬ ಇದರಿಂದ ನಲುಗಿ ಹೋಯಿತು. ಅವರ ಬದ್ದತೆ ಅಂತದ್ದು.
ನಾನು ಈ ಇಪ್ಪತೈದು ವರ್ಷಗಳ ಸಾರ್ವಜನಿಕ ಚಟುವಟಿಕೆಗಳಲ್ಲಿ ಹಲವು ರೀತಿಯ ಜನರನ್ನು ನೋಡಿರುವೆ.
ಪೂರ್ಣ ಅರ್ಪಣಾ ಮನೋಭಾವದಿಂದ ಹೋರಾಟಕ್ಕಿಳಿಯುವವರು,
ತಮ್ಮ ಕೈಲಾದಷ್ಟು ಕೆಲಸ ಮಾಡುವವರು,
ತೆಳ್ಳಗೆ-ಬೆಳ್ಳಗೆ ಓಡಾಡಿಕೊಂಡು ಹವಾ ಮೈಂಟೇನ್ ಮಾಡಿಕೊಂಡಿರುವವರು….
ಸುಳ್ಸುಳ್ಳೇ ಹೋರಾಟದ ಭ್ರಮೆ ಮೂಡಿಸುವವರು ಹೀಗೆ……
ಡಗೆಣ್ಣವರ್ ಆಗಲಿ , ಮಗಳು ನೇಮಿಚಂದ್ರ ಆಗಲಿ ಅಥವಾ ಹೊರವಲಯದಲ್ಲಿ ಅಷ್ಟಾಗಿ ಪರಿಚಯವಿರದ ಅವರ ಕುಟುಂಬದ ಇತರ ಸದಸ್ಯರಾಗಲಿ ಯಾವುದನ್ನೂ ಹಗುರವಾಗಿ ಭಾವಿಸದೆ ಪೂರ್ಣಮನದಿಂದ ತಾವು ನಂಬಿದ ಆಶಯಗಳಿಗಾಗಿ ಶ್ರಮಿಸಿದವರು. ಆ ಹಾದಿಯಲ್ಲಿ ಎದುರಾದ ಕಷ್ಟನಷ್ಟಗಳಿಗೆ ಎದೆಗುಂದದೆ ಮುನ್ಸಾಗಿದವರು.
ನೇಮಿಚಂದ್ರಗೆ , ತನ್ನ ತಂದೆ ತಮ್ಮನ್ನೆಲ್ಲ ಗಮನಿಸಿಕೊಳ್ಳದೆ,ಕುಟುಂಬದ ಹಿತ ಕಡೆಗಣಿಸಿದರೆಂಬ ಆಕ್ಷೇಪ ಮತ್ತು ನೋವಿತ್ತು. ನಮ್ಮ ಲಂಕೇಶ್ ಪತ್ರಿಕಾ ಕಚೇರಿಗೆ ಬಂದಾಗೆಲ್ಲ ಆ ಬಗ್ಗೆ ವ್ಯಥೆಯಿಂದ ಮಾತನಾಡಿದ್ದುಂಟು.
ಆದರೆ ಡಗೆಣ್ಣವರ್ ಓರ್ವ ಸಾಧಾರಣ ಹೋರಾಟಗಾರರಾಗಿರಲಿಲ್ಲ, ಕರ್ನಾಟಕದ ರಾಜಕೀಯ, ಅಸ್ಮಿತೆ, ಇತಿಹಾಸ, ಆರ್ಥಿಕತೆ, ರಾಷ್ಟ್ರೀಯತೆಯ ಪರಿಕಲ್ಪನೆಗಳ ಬಗ್ಗೆ ಅಥೆಂಟಿಕ್ಕಾಗಿ ಮಾತಾಡುವಷ್ಟು ಅಧ್ಯಯನವಿತ್ತು. ಗ್ರಹಿಕೆ, ತಿಳಿವಳಿಕೆ, ಬದ್ಧತೆಯಲ್ಲಿ ಅವರೊಬ್ಬ ಉತ್ತಮ ನಾಯಕರಾಗಿದ್ದವರು. ಅಷ್ಟು ತಯಾರಿರುವವರ ಬದುಕಿನಲ್ಲಿ ಹಣ, ಕೀರ್ತಿ, ಸ್ಥಾನಮಾನಗಳ ವಿಚಾರಗಳು ಕ್ರಮೇಣ ಗೌಣವಾಗುತ್ತಾ ಹೋಗುತ್ತವೆ. ಅದು ಅರ್ಥವಾದ ಕಾರಣ ನಾನವರನ್ನು ಆಕ್ಷೇಪಿಸಲಾರೆ.
ಒಬ್ಬರ ಹೋರಾಟದ ಬದ್ಧತೆಯು ಜೊತೆಗಿರುವವರನ್ನೂ ಸುಡುತ್ತದೆ. ಅದೊಂದು ಪ್ಯಾಕೇಜ್ ಅಷ್ಟೆ. ಅಂತವರನ್ನು ಬಲ್ಲವರು ಅವರ ನೆರವಿಗೆ ಹೋಗಬೇಕು. ಕೆಲ ತಿಂಗಳ ಹಿಂದೆ ಡಗೆಣ್ಢವರ್ ನಮ್ಮ ಕಚೇರಿಗೆ ಬಂದವರು ಒಂದು ಕೆಲಸ ಬೇಕೆಂದು ಕೇಳಿದ್ದರು, ಮಕ್ಕಳ ಕ್ಷೇಮ ಗಮನಿಸಿಕೊಳ್ಳದ ಬಗ್ಗೆ ಅವರಿಗೆ ಪಶ್ಚಾತಾಪವಿತ್ತು. ನಂತರ ಒಂದೆಡೆ ಸೆಕ್ಯೂರಿಟಿ ಗಾರ್ಡಾದರು. ಕುಟುಂಬ ಮತ್ತು ತಮ್ಮನ್ನು ಸಲಹಿಕೊಳ್ಳಲು ಯತ್ನಿಸಿದರು, ಬಹಳ ಸ್ವಾಭಿಮಾನಿ, ದುಡಿದು ಬದುಕುವ ಛಲದವರು.
ನನಗೀಗಲೂ ಹೊಸಬರನ್ನು ಸಾಮಾಜಿಕ ಹೋರಾಟಗಳಿಗೆ ಕರೆತರುವಾಗ, ಪ್ರೇರಣೆ ನೀಡುವಾಗ ಒಂದು ರೀತಿಯ ಅಳುಕು, ಹಿಂಜರಿಕೆ ಇದ್ದೇ ಇರುತ್ತದೆ. ಹೊಸಬರು ಬರಬಾರದೆಂದಲ್ಲ, ಅದರ ಹಲವು ಪರಿಣಾಮಗಳನ್ನು ಕಂಡವನಾದ್ದರಿಂದ ಸ್ವಲ್ಪ ಹಿಂಜರಿಕೆಯಷ್ಟೆ.
ನೇಮಿಚಂದ್ರರಂತಹ ಯುವಜನರಲ್ಲಿ ಎದ್ದು ಕಾಣುವುದು ಪ್ರಾಮಾಣಿಕತೆ. ಅದು ಒಬ್ಬೊಬ್ಬರನ್ನು ಒಂದೊಂದು ದಿಕ್ಕಿಗೆ ತಳ್ಳಿ, ಹಲವು ಪರಿಣಾಮಗಳಿಗೆ ಈಡು ಮಾಡುವಂತದು.
ನಮ್ಮ ಜೊತೆಯಲ್ಲೆ ಹೋರಾಟಗಳಿಗೆ ಬಂದವರನೇಕರು ಈಗ ಬದುಕಿಲ್ಲ, ಕೆಲವರು ಜೈಲಾದರು, ನೊಂದು ಬೆಂದರು. ಸಹಿಸಲಸಾಧ್ಯವಾದ ಕಷ್ಟಗಳು ಎದುರಾದಾಗಲೂ ಹಿಂಜರಿಯದೆ ಜೊತೆಗಿರುತ್ತಿದ್ದರು.
ಇನ್ನು ದುಡುಕು, ಆವೇಶಗಳ ಮನೋಭಾವದವರು.
ಕೆಲವರು ಶಾಣ್ಯರು, ಲೆಕ್ಕಾಚಾರದವರು,…ಹೀಗೆ
ಸಾಮಾಜಿಕ ಚಳವಳಿಗಳ ಕ್ಯಾನ್ವಾಸ್ ನಲ್ಲಿ ಇಂತಹ ಹಲವು ವಿಭಿನ್ನ ರೇಖೆಗಳಿರಲು ಸಾಧ್ಯ ನಮ್ಮ ನೇಮಿಚಂದ್ರ ಓರ್ವ ಮುಗ್ಧೆ. ತನ್ನ ಬದುಕು, ಕೆರಿಯರ್, ಆರೋಗ್ಯ ಇವೆಲ್ಲಕ್ಕಿಂತ ನಾಳೆ ನಾಳಿದ್ದರಲ್ಲಿ ಘಟಿಸಲಿದೆ ಎಂದು ನಂಬಿಸಲಾದ ಕ್ರಾಂತಿಗಾಗಿ ಜೀವ ತೇಯುತ್ತಿದ್ದ ಭಾವುಕ ಮನಸ್ಸಿನ ಕಾರ್ಯಕರ್ತೆಯಂತಿದ್ದರು.
ಇಂತಹ ಯುವಜನರು ಚಳವಳಿಗಳಿಗೆ ಖಂಡಿತಾ ಬೇಕು ನಿಜ, ಆದರೆ ಅಂತಹ ಕಷ್ಟಗಳನ್ನು ಹಾದುಬಂದ ಕುಟುಂಬಗಳ ಕಾರ್ಯಕರ್ತರನ್ನು ನಿಭಾಯಿಸುವಾಗ, ಜೊತೆಗಿರಿಸಿಕೊಂಡಾಗ ಸ್ವಲ್ಪ ಹೆಚ್ಚಿನ ಕಾಳಜಿ, ಮುತುವರ್ಜಿ ನೀಡಬೇಕಾಗುತ್ತದೆ. ಒಂದು ದಿನ ನೀನು ಪ್ರತಿಭಟನೆಗೆ ಬರದಿದ್ದರೂ ಪರವಾಗಿಲ್ಲ, ಮೊದಲು ನಿನ್ನ ಲಾ ಪರೀಕ್ಷೆ ಅಟೆಂಡಾಗು ಎಂದು ಬುದ್ದಿವಾದ ಹೇಳಬಲ್ಲ ವಿವೇಕಿಗಳು ಇರಬೇಕಾಗುತ್ತದೆ. ಅನೇಕ ಯುವಜನರಿಗೆ ಹೋರಾಟದ ಜಗತ್ತನ್ನು ಪ್ರವೇಶಿಸುವಾಗ ಅದು ಮುಂದೊಂದು ದಿನ ತಮ್ಮನ್ನೂ ಆಪೋಶನ ತೆಗೆದುಕೊಳ್ಳಬಹುದೆಂಬ ಖಬರಿರುವುದಿಲ್ಲ. ಜೀವ ತೆರಲು ಎನ್ ಕೌಂಟರ್ರೇ ಆಗಬೇಕೆಂದಿಲ್ಲ, ಉಡಾಫೆ, ನಿರ್ಲಕ್ಷ, ದುಡುಕು ತೀರ್ಮಾನಗಳೂ ಕೆಲವೊಮ್ಮೆ ಜೀವಬಲಿ ಕೇಳಬಲ್ಲವು.
ನೇಮಿಚಂದ್ರ ಮೃತಪಡುವ ಮುನ್ನಿನ ದಿನದಲ್ಲಿ ಚಿಕಿತ್ಸೆಯ ಯಾವುದೋ ಮಾತ್ರೆಗಳನ್ನು ಹೆಚ್ಚಾಗಿ ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದರೆಂದು ಅವರ ತಂದೆ ಡಗೆಣ್ಣವರ್ ನೆನ್ನೆ ಬಹಳ ನೋವಿನಿಂದ ನನಗೆ ತಿಳಿಸಿದರು. ಆಕೆಯ ಬದುಕಿನ ಆ ಸನ್ನಿವೇಶದ ಬಗ್ಗೆ ಯೋಚಿಸಿದಷ್ಟೂ ನೋವೇ ಆಯಿತು. ಬಹುಶ ಆಕೆ ಹಿಂಧೆಂದಿಗಿಂತಲೂ ಹೆಚ್ಚು ಒಂಟಿತನ, ಅಸಹಾಯಕತೆ ಅನುಭವಿಸಿರಬೇಕು.
ನನಗಿದು ಇನ್ನೊಂದು ರೋಹಿತ್ ವೇಮುಲಾ ದುರಂತ ಘಟನೆಯಂತೆ ಭಾಸವಾಗುತ್ತಿದೆ.
ನೇಮಿಚಂದ್ರ ನಿಮಗೆ ಗೌರವದ ದುಖಃದ ವಿದಾಯ.
ಡಗೆಣ್ಣವರ್ ಸರ್,
ಅಪಾರ ಇಚ್ಚಾಶಕ್ತಿ,ಮನೋಬಲವಿರುವ ನಿಮಗೂ ಇದು ಸಂಕಟದ ಗಳಿಗೆ. ನಾವು ನಿಮ್ಮೊಂದಿಗಿದ್ದೇವೆ, ನೀವೂ ನಮ್ಮೊಂದಿಗಿರಿ…ಈ ಹಿಂದಿನಂತೆ.

ಲೇಖನ : ಪಾರ್ವತೀಶ ಬಿಳಿದಾಳೆ
ಲೇಖಕರು, ಹಿರಿಯ ಪತ್ರಕರ್ತರು
ಮೊ: 9448380637

Leave a Reply

Your email address will not be published. Required fields are marked *