ರಾಮನಗರದಲ್ಲಿ ಶ್ರದ್ಧೆ ಭಕ್ತಿಯಿಂದ ಹನುಮ ಜಯಂತಿ ಆಚರಣೆ : ಪಂಚಮುಖಿ ಗೆಳೆಯರ ಬಳಗದ ಕಾರ್ಯಕರ್ತರಿಂದ ಬೈಕ್ ರ್ಯಾಲಿ
ರಾಮನಗರ: ಜಿಲ್ಲಾದ್ಯಂತ ಗುರುವಾರ ಹನುಮ ಜಯಂತಿಯನ್ನು ಅತ್ಯಂತ ಶ್ರದ್ದೆ ಮತ್ತು ಭಕ್ತಿಯಿಂದ ಆಚರಿಸಿದರು.
ದೇವಾಲಯಗಳಲ್ಲಿ ಹೋಮ, ಹವನ, ಅಭಿಷೇಕ, ಅಲಂಕಾರ, ವಿಶೇಷ ಪೂಜೆ, ಪ್ರಸಾದ ವಿನಿಯೋಗ ಕಾರ್ಯಕ್ರಮಗಳು ನಡೆದವು. ರಾಮನಗರ ತಾಲೂಕು ಬಿಡದಿ ಹೋಬಳಿ ಮಂಚನಾಯ್ಕನಹಳ್ಳಿಯ ಕೋತಿ ಆಂಜನೇಯಸ್ವಾಮಿ ದೇವಾಲಯ, ಸಂಗಬಸವನದೊಡ್ಡಿಯ ಹುನುಮ ದೇವಾಲಯ, ರಾಮನಗರ ನಗರದ ಅಗ್ರಹಾರದಲ್ಲಿರುವ ಅಭಯ ಆಂಜನೇಯ ಸ್ವಾಮಿ ದೇವಾಲಯ, ಐಜೂರಿನ ಪಂಚಮುಖಿ ಆಂಜನೇಯ ದೇಗುಲ, ಶ್ರೀರಾಮ ದೇವರ ಬೆಟ್ಟದ ಆರ್ಚ್‍ನ ಹನುಮನ ದೇಗುಲ, ಜೀಗೇನಹಳ್ಳಿ ಅಭಯ ಆಂಜನೇಯಸ್ವಾಮಿ ದೇಗುಲ, ಪೇಟೆ ಕುರುಬರಹಳ್ಳೀಯಲ್ಲಿರುವ 16 ಅಡಿ ಎತ್ತರದ ಏಕಶಿಲಾ ಆಂಜನೇಯ ಸ್ವಾಮಿ ದೇಗುಲ, ಬಿಡದಿಯ ವೀರಾಂಜನೇಯಸ್ವಾಮಿ ದೇಗುಲ, ಚನ್ನಪಟ್ಟಣದ ಕೆಂಗಲ್ ಆಂಜನೇಯ ಸ್ವಾಮಿ ದೇಗುಲ, ಚನ್ನಪಟ್ಟಣ ನಗರದ ಕೋದಂಡರಾಮ ಬಡಾವಣೆಯ ಆಂಜನೇಯ ಸ್ವಾಮಿ ದೇವಾಲಯ, ಕನಕಪುರ ನಗರದ ಹನುಮ ದೇವಾಲಯಗಳು, ಮಾಗಡಿಯಲ್ಲಿ ಹನುಮದೇವಾಗಳಲ್ಲಿ ಹನುಮ ಜಯಂತಿ ಆಚರಣೆಯ ಪ್ರಯುಕ್ತ ಧಾರ್ಮಿಕ ಕೈಂಕರ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು. ಆಸ್ತಿಕರು ತಮ್ಮ ಕುಟುಂಬ ಸಮೇತ ಬೆಳಿಗ್ಗೆಯಿಂದಲೇ ದೇವಾಲಯಗಳಿಗೆ ಭೇಟಿ ಕೊಟ್ಟು ತಮ್ಮ ಭಕ್ತಿ ಸಮರ್ಪಿಸಿಕೊಂಡರು.
ಜಿಲ್ಲಾ ಕೇಂದ್ರದಲ್ಲಿನ ಅಗ್ರಹಾರದಲ್ಲಿ ವ್ಯಾಸರಾಯರು ಸ್ಥಾಪಿಸಿದ ಶ್ರೀ ಅಭಯ ಆಂಜನೇಯಸ್ವಾಮಿ ದೇವಾಲಯದಲ್ಲಿ ಹನುಮಜಯಂತಿ ಪ್ರಯುಕ್ತ ವಿಶೇಷ ಹೋಮ, ಅಭಿಷೇಕ, ಅಲಂಕಾರ, ಪ್ರಸಾದ ವಿನಿಯೋಗ ಮುಂತಾದ ಸೇವೆಗಳು ಯಶಸ್ವಿಯಾಗಿ ನೆರೆವೇರಿದವು. ಗುರುವಾರ ಮುಂಜಾನೆ ಸುಪ್ರಭಾತ ಸೇವೆಯ ನಂತರ ಹನುಮಜಯಂತಿ ಪ್ರಯುಕ್ತ ಧಾರ್ಮಿಕ ಕೈಂಕರ್ಯಗಳು ನೆರೆವೇರಿದವು. ಹೋವ, ಹವನ ನಡೆಯಿತು. ಮಧ್ಯಾಹ್ನ ನೂರಾರು ಭಕ್ತರು ತಮ್ಮ ಕುಟುಂಬ ಸಮೇತರಾಗಿ ಆಗಮಿಸಿ ರಾಮನ ಭಂಟ ಹನುಮನಿಗೆ ತಮ್ಮ ಭಕ್ತಿ ಸಮರ್ಪಿಸಿಕೊಂಡರು.
ನಗರದ ಐಜೂರಿನ ಜಾಲಮಂಗಲ ರಸ್ತೆಯಲ್ಲಿರುವ ಪಂಚಮುಖಿ ಆಂಜನೇಯ ದೇವಾಲಯದಲ್ಲಿ ಹನುಮ ಜಯಂತಿ ಪ್ರಯುಕ್ತ ಡ್ರೈ ಪ್ರೂಟ್ಸ್ ಅಲಂಕಾರ ಏರ್ಪಡಿಸಲಾಗಿತ್ತು. ಅರ್ಚಕರಹಳ್ಳಿಯ ಬಾಲ ಹನುಮ ಮೂರ್ತಿಗಳಿಗೆ ವಿಶೇಷ ಅಲಂಕಾರ ನೆರೆವೇರಿಸಲಾಗಿತ್ತು. ಈ ದೇವಾಲಯದ ವತಿಯಿಂದಲೂ ಅನ್ನ ಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು. ಹನುಮಜಯಂತಿ ಪ್ರಯುಕ್ತ ಪಂಚಮುಖಿ ಗೆಳೆಯರ ಬಳಗದ ಕಾರ್ಯಕರ್ತರು ನಗರದಲ್ಲಿ ಬೈಕ್ ರ್ಯಾಲಿ ಹಮ್ಮಿಕೊಂಡಿದ್ದರು. ಐಜೂರಿನ ಪಂಚಮುಖಿ ಆಂಜನೇಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ನೆರೆವೇರಿಸಿದ ಕಾರ್ಯಕರ್ತರು ನಂತರ ಬೈಕ್ ಜಾಥದ ಮೂಲಕ ನಗರದ ವಿವಿಧ ಹನುಮ ದೇವಾಲಯಗಳಿಗೆ ಭೇಟಿ ಕೊಟ್ಟು ಪ್ರಾರ್ಥಿಸಿದರು.
ನಗರದ ಶ್ರೀರಾಮ ಬೆಟ್ಟದ ರಸ್ತೆಯ ಆರಂಭದಲ್ಲಿರುವ ಆರ್ಚ್‍ನಲ್ಲಿ ಹನುಮ ದೇವಾಲಯದಲ್ಲಿಯೂ ವಿಶೇಷ ಪೂಜೆ ನಡೆಯಿತು. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಇಕ್ಬಾಲ್ ಹುಸೇನ್ ಭೇಟಿ ಕೊಟ್ಟು ಪ್ರಾರ್ಥಿಸಿದರು. ಇದೇ ವೇಳೆ ಭಕ್ತರು ಹಮ್ಮಿಕೊಂಡಿದ್ದ ಅನ್ನ ಸಂತರ್ಪಣೆಯಲ್ಲಿ ಖುದ್ದು ಭಕ್ತರಿಗೆ ಪ್ರಸಾದ ವಿತರಿಸಿದರು.



