ಕನ್ನಡ ನಾಮಫಲಕ ಅಳವಡಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಕಾರ್ಯಕರ್ತರ ಪ್ರತಿಭಟನೆ

ರಾಮನಗರ: ಕನ್ನಡ ನಾಮಫಲಕ ಅಳವಡಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಕಾರ್ಯಕರ್ತರು ನಗರದ ಅಟ್ಟಿಕಾ ಗೋಲ್ಡ್ ಕಂಪನಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ನಗರದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣ ಸಮೀಪವಿರುವ ಅಟ್ಟಿಕಾ ಗೋಲ್ಡ್ ಕಂಪೆನಿಯ ನಾಮಫಲಕದ ಮೇಲೆ ಕಪ್ಪು ಬಟ್ಟೆ ಹೊದಿಸಿದ ಕಾರ್ಯಕರ್ತರು ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಅಟ್ಟಿಕಾ ಗೋಲ್ಡ್ ಕಂಪನಿ ಆಂಗ್ಲ ಭಾಷೆಯ ನಾಮಫಲಕ ಅಳವಡಿಸಿದೆ. 15 ದಿನದೊಳಗೆ ಅದನ್ನು ತೆರವುಗೊಳಿಸಿ, ಕಡ್ಡಾಯವಾಗಿ ಕನ್ನಡದಲ್ಲಿ ಬರೆದ ನಾಮಫಲಕ ಅಳವಡಿಸಬೇಕು. ಇಲ್ಲವಾದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಬಣದ ರಾಜ್ಯ ಉಸ್ತುವಾರಿ ಅಧ್ಯಕ್ಷ ಶಿವುಗೌಡ ಮಾತನಾಡಿ, ಜಿಲ್ಲೆಯಲ್ಲಿ ಇತ್ತೀಚೆಗೆ ಪರಭಾಷೆ ನಾಮÀಲಕಗಳ ಹಾವಳಿ ಹೆಚ್ಚಾಗಿದೆ. ಉದ್ದಿಮೆದಾರರು ತಮಗಿಷ್ಟ ಬಂದ ಭಾಷೆಗಳಲ್ಲಿ ನಾಮಫಲಕ ಹಾಕುವ ಮೂಲಕ ಕನ್ನಡವನ್ನು ಕಡೆಗಣಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ವ್ಯಾಪರಸ್ಥರಿಗೆ ಹಣದ ದಾಹ ಮುಖ್ಯವಾಗಿದಿಯೇ ಹೊರತು ಭಾಷೆಯಲ್ಲ. ಬಹುತೇಕ ಅಂಗಡಿಗಳ ಮಾಲೀಕರು ಆಂಗ್ಲ ಭಾಷೆಯಲ್ಲಿಯೇ ನಾಮಫಲಕಗಳನ್ನು ಅಳವಡಿಸಿದ್ದಾರೆ. ಅಂಗಡಿ ಮಾಲೀಕರು ಎಚ್ಚೆತ್ತುಕೊಂಡು ಕನ್ನಡ ನಾಮಫಲಕ ಅಳವಡಿಸದಿದ್ದರೆ ಹೋರಾಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಎಂಇಎಸ್ ಪುಂಡರನ್ನು ಗಡಿಪಾರು ಮಾಡಿ : ಎಂಇಎಸ್ ಪುಂಡರು ಗೂಂಡಾಗಿರಿ ಮಾಡುತ್ತಿದ್ದಾರೆ. ಕನ್ನಡಿಗರ ಸ್ವಾಭಿಮಾನ ಕೆರಳಿಸುತ್ತಿದ್ದಾರೆ. ಪುಂಡಾಟಿಕೆ ಮಾಡುತ್ತಿರುವ ಎಂಇಎಸ್ ಪುಂಡರನ್ನು ಕೂಡಲೇ ಬಂದಿಸಿ ಗಡಿಪಾರು ಮಾಡಬೇಕು. ಇಲ್ಲದಿದ್ದರೆ ಸರ್ಕಾರ ಕನ್ನಡಿಗರ ಆಕ್ರೋಶ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮಹಾರಾಷ್ಟ್ರದಲ್ಲಿ ಕನ್ನಡ ಬಾವುಟ ಸುಟು ವಿಕೃತಿ ಮೆರೆದಿದ್ದ ಬೆನ್ನಲ್ಲೆ ಎಂಇಎಸ್ ಪುಂಡರು ಸಂಗೊಳ್ಳಿ ರಾಯಣ್ಣನ ಪ್ರತಿಮೆ ವಿರೂಪಗೊಳಿಸಿ, ಸರ್ಕಾರಿ ವಾಹನಗಳ ಮೇಲೆ ಕಲ್ಲು ತೂರಿದ್ದಾರೆ. ಎಂಇಎಸ್ ಕಿಡಿಗೇಡಿಗಳನ್ನು ಬಂದಿಸಿ ಗಡಿಪಾರು ಮಾಡುವಂತೆ ಶಿವುಗೌಡ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಬಣದ ಯುವ ಘಟಕ ಜಿಲ್ಲಾಧ್ಯಕ್ಷ ಬೆಟ್ಟೇಗೌಡ, ತಾಲೂಕು ಅಧ್ಯಕ್ಷ ಹುನುಮಾನ್ ದಾಸ್, ವಿದ್ಯಾರ್ಥಿ ಘಟಕ ಜಿಲ್ಲಾಧ್ಯಕ್ಷ ಸಂಜಯ, ಪದಾದಿಕಾರಿಗಳಾದ ರಾಜೀವ್, ಪ್ರತಾಪ, ಗುರುಪ್ರಸಾದ್, ಮಧು, ಎಂ.ಎಚ್. ಅಭಿ ಮತ್ತಿತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *