ನವಚೇತನ ಚಾರಿಟಬಲ್ ಟ್ರಸ್ಟ್ ಫಾರ್ ಡಿಸೇಬಲ್ಸ್ ಸಂಸ್ಥೆ ವತಿಯಿಂದ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ
ರಾಮನಗರ : ದಾನ ದಾನಕ್ಕಿಂತ ವಿದ್ಯಾದಾನವೇ ಶ್ರೇಷ್ಠ ಎಂಬ ನಾಣ್ಣುಡಿಯಂತೆ ಸೇವಾ ಟ್ರಸ್ಟ್‍ಗಳು, ಸಮಾಜ ಸೇವಾ ಸಂಸ್ಥೆಗಳು, ದಾನಿಗಳು ವಿದ್ಯಾರ್ಥಿಗಳಿಗೆ ನೀಡುತ್ತಿರುವ ಕೊಡುಗೆ ಶ್ಲಾಘನೀಯ ಎಂದು ಕೂಟಗಲ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೂಲಿಯುರಮ್ಮ ತಿಳಿಸಿದರು.
ನವಚೇತನ ಚಾರಿಟಬಲ್ ಟ್ರಸ್ಟ್ ಫಾರ್ ಡಿಸೇಬಲ್ಸ್ ಸಂಸ್ಥೆ ತಾಲ್ಲೂಕಿನ ಕೂಟಗಲ್ ಹೋಬಳಿಯ ಯರೇಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ ಮಾಡಿ ಅವರು ಮಾತನಾಡಿದರು.
ಆರ್ಥಿಕವಾಗಿ ಸಬಲರಾದವರು, ಸಂಘ ಸಂಸ್ಥೆಗಳು ಹೆಚ್ಚು ಹೆಚ್ಚಾಗಿ ದಾನ ಧರ್ಮಗಳನ್ನು ಕೈಗೊಂಡು ಶಾಲಾ ವಿದ್ಯಾರ್ಥಿಗಳಿಗೆ ಸಹಾಯ ಹಸ್ತವನ್ನು ಚಾಚುವುದರ ಮೂಲಕ ಗ್ರಾಮೀಣ ಪ್ರದೇಶದ ಮಕ್ಕಳ ಕಲಿಕೆಗೆ ಪೂರಕ ವಾತಾವರಣ ಸೃಷ್ಟಿಸಲು ಮುಂದಾಗಬೇಕಾಗಿದೆ ಈ ನಿಟ್ಟಿನಲ್ಲಿ ಮಾರುತಿ ಮೆಡಿಕಲ್ಸ್‍ನವರು ನೀಡುತ್ತಿರುವ ಕೊಡುಗೆ ಅಪಾರವಾದುದು ಎಂದರು.
ನವಚೇತನ ಚಾರಿಟಬಲ್ ಟ್ರಸ್ಟ್ ಫಾರ್ ಡಿಸೇಬಲ್ಸ್ ಸಂಸ್ಥೆಯ ಅಧ್ಯಕ್ಷ ಕೆ.ಎಸ್. ಮಂಜುನಾಥ್ ಮಾತನಾಡಿ ಗ್ರಾಮೀಣ ಪ್ರದೇಶದ ಮಕ್ಕಳು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಓದಿನಲ್ಲಿ ಪೈಪೋಟಿ ನೀಡಲು ಮುಂದಾಗಬೇಕು. ವಿದ್ಯಾರ್ಥಿಗಳ ಕಲಿಕೆಗೆ ತಕ್ಕ ಪುಸ್ತಕ, ಪರಿಕರಗಳನ್ನು ಮಕ್ಕಳ ಪಾಲಕರು ಒದಗಿಸಿ ಅವರ ವಿದ್ಯಾರ್ಜನೆಗೆ ಸಹಕರಿಸಬೇಕು ಜೊತೆಗೆ ಸಂಘ ಸಂಸ್ಥೆಗಳು ದಾನಿಗಳು ಕೈ ಜೋಡಿಸಬೇಕು ಎಂದು ತಿಳಿಸಿದರು.
ಆದಿವಾಸಿ ಹೋರಾಟಗಾರ ಕೃಷ್ಣಮೂರ್ತಿ ಇರುಳಿಗ ಮಾತನಾಡಿ ದಾನಿಗಳು, ಸಂಘ ಸಂಸ್ಥೆಗಳು ಕೊಟ್ಟಂತಹ ನೆರವನ್ನು ಪಡೆದುಕೊಂಡು ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನ ನೀಡಿ ಬಸವಣ್ಣ, ಕುವೆಂಪು, ಕನಕದಾಸರು, ಅಂಬೇಡ್ಕರ್ ಮುಂತಾದ ಮಹನೀಯರ ಆದರ್ಶಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರಾದ ಎಸ್. ಹೊಂಬಾಳಯ್ಯ, ಕೆ.ಎಚ್. ಸುಜಾತಮ್ಮ, ಮಹಮದ್ ಸಲ್ಮಾನ್, ಎಂ. ಶೋಭ, ಎಚ್. ಹರೀಶ್, ಸುವರ್ಣ, ಎಂ. ಶ್ರೀನಿವಾಸಮೂರ್ತಿ, ಯೂತ್ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾಧ್ಯಕ್ಷ ಎಸ್. ರುದ್ರೇಶ್ವರ, ಮುಖಂಡರಾದ ಎಸ್. ರಾಜು, ಶಿವಣ್ಣ ಇತರರು ಇದ್ದರು.
