ಸಂಗೊಳ್ಳಿರಾಯಣ್ಣನವರ ಪುತ್ಥಳಿಯನ್ನು ಜಖಂ ಮಾಡಿರುವುದು ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತರುವ ಘಟನೆ : ಎಲ್. ರಮೇಶ್ ಗೌಡ

ಚನ್ನಪಟ್ಟಣ: ಬೆಳಗಾವಿಯಲ್ಲಿ ರಾಜ್ಯ ಸರ್ಕಾರದ ಅಧಿವೇಶನ ನಡೆಯುವ ವೇಳೆಯೇ ಎಂಇಎಸ್ ಮತ್ತು ಶಿವಸೇನೆಯ ಪುಂಡರು ಭಯೋತ್ಪಾದಕರಂತೆ ವರ್ತಿಸಿ ಪೊಲೀಸ್ ವಾಹನಗಳು ಮತ್ತು ಸರ್ಕಾರಿ ಕಚೇರಿ ಮತ್ತು ವೀರಸೇನಾನಿ ಸಂಗೊಳ್ಳಿರಾಯಣ್ಣನವರ ಪುತ್ಥಳಿಯನ್ನು ಜಖಂ ಮಾಡಿರುವುದು ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತರುವ ಘಟನೆಯಾಗಿದ್ದು, ಮುಖ್ಯಮಂತ್ರಿ ಬೊಮ್ಮಾಯಿಅವರು ಕೂಡಲೇ ಎರಡು ಸಂಘಟನೆಗಳನ್ನು ರಾಜ್ಯದಲ್ಲಿ ನಿಷೇಧ ಮಾಡಬೇಕು ಎಂದು ಕಕಜ ವೇದಿಕೆ ರಾಜ್ಯಾಧ್ಯಕ್ಷ ರಮೇಶ್‍ಗೌಡ ಆಗ್ರಹಿಸಿದರು.
ಬೆಳಗಾವಿಯಲ್ಲಿ ಶನಿವಾರ ಬೆಳಿಗ್ಗೆ ನಡೆದಿರುವ ಎಂಇಎಸ್ ಮತ್ತು ಶಿವಸೇನೆಯ ಪುಂಡಾಟವನ್ನು ಖಂಡಿಸಿ ಪಟ್ಟಣದ ಕಾವೇರಿ ಸರ್ಕಲ್ ಬಳಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಹಾರಾಷ್ಟ್ರ ಸಿಎಂ ಉದ್ಬವ್‍ಠಾಕ್ರೆಅವರ ಭಾವಚಿತ್ರಕ್ಕೆ ಮಸಿ ಬಳಿದು ಪ್ರತಿಭಟನೆ ಮಾಡಿ ಮಾತನಾಡಿದ ಅವರು, ಬೆಳಗಾವಿ ಕೆಲದಿನಗಳಿಂದ ಜಮ್ಮುಕಾಶ್ಮೀರದಂತೆ ಭಯೋತ್ಪದಕರ ತಾಣವಾಗುತ್ತಿರುವುದು ನಾಚಿಕೆ ಗೇಡಿನ ಸಂಗತಿಯಾಗಿದೆ. ಇದಕ್ಕೆ ಶಶಿಕಲಾ ಜೊಲ್ಲೆಯಂತಹ ಶಾಸಕರು ನೇರ ಹೊಣೆಯಾಗುತ್ತಾರೆ. ಇವರ ಸಹಕಾರದಿಂದಲೇ ಮಹಾರಾಷ್ಟ್ರದ ಪುಂಡರು ಎಂಇಎಸ್ ಸಂಘಟನೆಯನ್ನು ಬೆಳೆಸಿ ಬೆಳಗಾವಿಯನ್ನು ಕಬಳಿಸುವ ತಂತ್ರ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಬೆಳಗಾವಿಯಲ್ಲಿ ಶಿವಸೇನೆಯ ಜೊತೆಗೆ ಸೇರಿ ಪೊಲೀಸ್ ವಾಹನಗಳನ್ನು ಜಖಂ ಮಾಡಿದ್ದಾರೆ, ಸರ್ಕಾರಿ ಕಚೇರಿಗಳನ್ನು ಧ್ವಂಸ ಮಾಡಿದ್ದಾರೆ. ವೀರಸೇನಾನಿ ಸಂಗೊಳ್ಳಿ ರಾಯಣ್ಣನ ಪುತ್ಥಳಿಯನ್ನು ಜಖಂ ಮಾಡಿದ್ದಾರೆ. ಬೆಳಗಾವಿಯ ಅಧಿವೇಶನದಲ್ಲಿರುವ ವೇಳೆ ರಾಜ್ಯದ ಮುಖ್ಯಮಂತ್ರಿಗಳು ಸೇರಿದಂತೆ ಸರ್ಕಾರವೇ ಇರುವ ವೇಳೆ ಮಹಾರಾಷ್ಟ್ರದ ಎಂಇಎಸ್ ಸಂಘಟನೆಯ ಪುಂಡರು ಮತ್ತು ಶಿವಸೇನೆಯವರು ಈ ರೀತಿ ಕೃತ್ಯ ಮಾಡಿರುವುದು ಖಂಡನೀಯವಾಗಿದೆ. ಈ ನಿಟ್ಟಿನಲ್ಲಿ ಎರಡು ಸಂಘಟನೆಯನ್ನು ನಿಷೇಧ ಮಾಡಿ ಅವರನ್ನು ಗಡಿಪಾಡು ಮಾಡಬೇಕು ಎಂದು ಆಗ್ರಹಿಸಿದರು.
ಸರ್ಕಾರವು ಮೂರು ದಿನಲ್ಲಿ ಎಂಇಎಸ್ ಮತ್ತು ಶಿವಸೇನೆ ಸಂಘಟನೆಗಳನ್ನು ನಿಷೇಧ ಮಾಡಿ, ಸಂಘಟಕರನ್ನು ಗಡಿಪಾರು ಮಾಡಬೇಕು. ಜೊತೆಗೆ ಕನ್ನಡಿಗರ ಮೇಲೆ ಹೂಡಿರುವ ಕೊಲೆ ಮೊಕ್ಕದಮ್ಮೆಗಳನ್ನು ವಾಪಸ್ ಪಡೆಯಬೇಕು. ಇಲ್ಲವಾದಲ್ಲಿ ವೇದಿಕೆವತಿಯಿಂದ ರಾಜ್ಯಾದ್ಯಂತ ಹೋರಾಟಕ್ಕೆ ಚಾಲನೆ ನೀಡಲಾಗುತ್ತದೆ ಎಂದು ರಮೇಶ್‍ಗೌಡ ಎಚ್ಚರಿಕೆ ನೀಡಿದರು.
ಸಂರ್ದಭದಲ್ಲಿ ವೇದಿಕೆ ಜಿಲ್ಲಾಧ್ಯಕ್ಷ ಬೇವೂರು ಯೋಗೇಶ್‍ಗೌಡ, ಜಗದಾಪುರ ಕೃಷ್ಣೇಗೌಡ, ಮಮತಾ, ಡಾ. ರಾಜ್‍ಕಲಾಬಳಗದ ಎಲೇಕೇರಿ ಮಂಜುನಾಥ್, ಬ್ಯಾಟರಿ ಶಿವಣ್ಣ, ಬಾಳೆಮಂಡಿ ಕುಮಾರ್, ಕುಮಾರ್, ಬಾಬ್‍ಜಾನ್, ಅಕ್ರಂಖಾನ್ ಉಸ್ಮಾನಿ, ವಿ. ವಿವೇಕ್, ಟೆಂಪೋ ಕೇಶವ ಸೇರಿದಂತೆ ಹಲವರು ಇದ್ದರು.

Leave a Reply

Your email address will not be published. Required fields are marked *