ಸಂಗೊಳ್ಳಿ ರಾಯಣ್ಣನ ಪ್ರತಿಮೆ ಅಪಮಾನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ಟಿ. ನಾಗೇಶ್ ಖಂಡನೆ
ರಾಮನಗರ: ಬ್ರಿಟಿಷರ ವಿರುದ್ಧ ಕಾದಾಡಿ ಕರುನಾಡಿನ ಕೀರ್ತಿ ಪತಾಕೆಯನ್ನು ಉತ್ತುಂಗಕ್ಕೇರಿಸಿದ ದೇಶಭಕ್ತ ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಅಪಮಾನವೆಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಟಿ. ನಾಗೇಶ್ ಖಂಡಿಸಿದ್ದಾರೆ.
ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ದುಷ್ಕರ್ಮಿಗಳು ವಿಕೃತ ಗೊಳಿಸಿರುವ ಮತ್ತು ಸರಕಾರಿ ವಾಹನಗಳನ್ನು ಜಖಂ ಮಾಡಿರುವ ಘಟನೆ ನಾಗರೀಕ ಸಮಾಜ ತಲೆತಗ್ಗಿಸುವಂತಹದ್ದು, ಇದು ಖಂಡನಾರ್ಹ. ಅಪ್ರತಿಮ ದೇಶಭಕ್ತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ವೀರಮರಣವನ್ನಪ್ಪಿ ದೇಶಕ್ಕೆ ತಮ್ಮನ್ನು ತಾವು ಸಮರ್ಪಣೆ ಮಾಡಿಕೊಂಡ ವೀರಯೋಧ ಸಂಗೊಳ್ಳಿ ರಾಯಣ್ಣ ಇಂತಹ ನಾಡಿನ ಸ್ವಾಭಿಮಾನಿ ಸ್ವತಂತ್ರ್ಯ ಸೇನಾನಿಗೆ ಮಾಡಿದ ಅಪಮಾನವೆಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಕೃತ್ಯಕ್ಕೆ ಕಾರಣರಾದವರ ಮೇಲೆ ಕಠಿಣ ಕ್ರಮವನ್ನು ಸರ್ಕಾರ ತೆಗೆದುಕೊಳ್ಳಬೇಕು.
ಕರ್ನಾಟಕದ ಜನತೆ ಸಹನಾ ಪ್ರೀಯರೆಂದು ಎಂಇಎಸ್ ಪುಂಡರು ಮೇಲಿಂದ ಮೇಲೆ ಇಂತಹ ದುಂಡಾವರ್ತನೆ ಮಾಡುತ್ತಾ ಬರುತ್ತಿದ್ದು, ಸರ್ಕಾರ ಈ ವಿಷಯದಲ್ಲಿ ಸಹನೆಯಿಂದ ವರ್ತಿಸದೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಬೇಕೆಂದು ಆಗ್ರಹಿಸಿದ್ದಾರೆ.
ಈ ವಿಷಯದಲ್ಲಿ ಎಲ್ಲಾ ಪಕ್ಷಗಳು ರಾಜಕೀಯ ಮಾಡದೇ ಕನ್ನಡಿಗರ ಕರ್ನಾಟಕದ ಸ್ವಾಭಿಮಾನವನ್ನು ಉಳಿಸಲು ಮುಂದಾಗಬೇಕು. ರಾಜ್ಯ ಸರ್ಕಾರ ಯಾವುದೇ ಧರ್ಮ, ಜಾತಿ ಎಂದು ವಿಂಗಡಣೆ ಮಾಡಿದೇ ಮುಂದಡಿಯಿಡಬೇಕಿದೆ. ರಾಜ್ಯದಲ್ಲಿ ಎಂಇಎಸ್ ಅನ್ನು ನಿಷೇಧ ಮಾಡಬೇಕೆಂದು ಒತ್ತಾಯಿಸಿದ್ದಾರೆ.