ಬನ್ನಿಕುಪ್ಪೆ : ಶ್ರೀ ದತ್ತ ಕ್ಷೇತ್ರದಲ್ಲಿ ದತ್ತ ಜಯಂತಿ ಅಂಗವಾಗಿ ನಡೆದ ಧಾರ್ಮಿಕ ಕೈಂಕರ್ಯಗಳು

ರಾಮನಗರ : ತಾಲ್ಲೂಕಿನ ಕೈಲಾಂಚ ಹೋಬಳಿಯ ಬನ್ನಿಕುಪ್ಪೆ ಗ್ರಾಮದ ಶ್ರೀ ಕ್ಷೇತ್ರ ದತ್ತಪೀಠದಲ್ಲಿ ಶ್ರೀ ದತ್ತ ಜಯಂತಿ ಅಂಗವಾಗಿ ವಿಶೇಷ ಪೂಜೆ, ಹೋಮ, ಅಲಂಕಾರ, ಉತ್ಸವ ಮೂರ್ತಿಯ ಮೆರವಣಿಗೆ ಮತ್ತು ಮಹಾ ಪ್ರಸಾದ ವಿನಿಯೋಗ ಕಾಯಕ್ರಮಗಳು ನಡೆದವು.
ಶ್ರೀ ಕ್ಷೇತ್ರ ದತ್ತಪೀಠದಲ್ಲಿರುವ ಪುರಾತನ ದೇವಾಲಯವನ್ನು ವಿವಿಧ ಬಗೆಯ ಹೂಗಳಿಂದ ಅಲಂಕೃತಗೊಳಿಸಲಾಗಿತ್ತು. ಜಯಂತಿ ಅಂಗವಾಗಿ ಧಾರ್ಮಿಕ ಕೈಂಕರ್ಯಗಳು ನಡೆದವು. ಶನಿವಾರ ಬೆಳಿಗ್ಗೆಯಿಂದಲೇ ಅಭ್ಯಂಜನ ಸ್ನಾನ, ಮಹಾನ್ಯಾಸ ಪೂರ್ವಕ ಶತರುದ್ರ ಅಭಿಷೇಕ, ಸಾರ್ವತ್ರಿಕ ಮಹಾ ಸಂಕಲ್ಪ, ಗಣಪತಿ ಹೋಮ, ರುದ್ರಹೋಮ, ದೇವಿ ಹೋಮ, ಸುಬ್ರಹ್ಮಣ್ಯ ಹೋಮ, ಆಂಜನೇಯ ಹೋಮ ಮತ್ತು ನವಗ್ರಹ ಹೋಮಗಳನ್ನು ಋತ್ವಿಕರು ಶಾಸ್ತ್ರೋಕ್ತವಾಗಿ ನಡೆಸಿಕೊಟ್ಟರು. ನಂತರ ಔದುಂಬರ ಪೂಜೆ, ಗೋಪೂಜೆ ನಡೆಯಿತು. ತದನಂತರ ನಡೆದ ದತ್ತ ಪಾದುಕಾ ವಿಶೇಷ ಪೂಜೆಯಲ್ಲಿ ಬೆಂಗಳೂರು ಸೇರಿದಂತೆ ಹಲವೆಡೆಯಿಂದ ಆಗಮಸಿದ್ದ ದಂಪತಿಗಳು ಪಾಲ್ಗೊಂಡಿದ್ದರು. ಕನ್ನಿಕಾ ಪೂಜೆ, ಸುಮಂಗಲಿ ಪೂಜೆ, ದಂಪತಿ ಪೂಜೆಗಳು ನಡೆದವು.
ನಂತರ ಬಗೆಬಗೆಯ ಹೂಗಳಿಂದ ಸಿಂಗರಿಸಿದ್ದ ಶ್ರೀ ದತ್ತಾತ್ರೇಯರ ಮೂರ್ತಿಯ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದಾಗ ಗ್ರಾಮಸ್ಥರು ತಮ್ಮ ಭಕ್ತಿ ಸಮರ್ಪಿಸಿಕೊಂಡರು. ಈ ಸಂದರ್ಭದಲ್ಲಿ ನಾದಸ್ವರ, ಚಂಡೆ ವಾದನ, ವೇದಘೋಷ ಮೆರವಣಿಗೆಯ ವೈಭವವನ್ನು ಹೆಚ್ಚಿಸಿದವು. ಪೂರ್ಣಾಹುತಿ, ಊಂಛ ವೃತ್ತಿಯ ನಂತರ ಮಹಾಮಂಗಳಾರತಿ, ಮಹಾ ನೈವೇದ್ಯ ಮತ್ತು ಮಹಾ ಪ್ರಸಾದ ವಿನಿಯೋಗ ಕಾರ್ಯಕ್ರಮಗಳು ನೆಡೆದವು.
ದೇವಾಲಯವನ್ನು ನಿರ್ವಹಿಸುತ್ತಿರುವ ಪ್ರಭಾಕರ್ ಮತ್ತು ಕುಟುಂಬ ಮತ್ತು ಅವ ಬಳಗ ವ್ಯವಸ್ಥೆಯ ಭಾಗವಾಗಿದ್ದರು. ಪ್ರಧಾನ ಅರ್ಚಕ ದತ್ತಿ, ದತ್ತ ಉಪಾಸಕರಾದ ಅನಂತ ಸತ್ಯಂ, ರಾಧಾಕೃಷ್ಣ ಮತ್ತು ಬೆಂಗಳೂರಿನಿಂದ ಆಗಮಿಸಿದ್ದ ಋತ್ವಿಕರ ತಂಡ ಧಾರ್ಮಿಕ ಕೈಂಕರ್ಯಗಳನ್ನು ನಡೆಸಿಕೊಟ್ಟರು.

Leave a Reply

Your email address will not be published. Required fields are marked *