ಕಾರ್ಯಕ್ರಮ ಒಂದು; ಆಹ್ವಾನಪತ್ರಿಕೆ ಎರಡು – ಸೋಗಾಲ ಪಿಎಸಿಎಸ್‍ನ ತುಘಲಕ್ ನೀತಿ : ಒಂದೇ ಕಾರ್ಯಕ್ರಮಕ್ಕೆ ಎರಡೆರಡು ಆಹ್ವಾನ ಪತ್ರಿಕೆ ಮುದ್ರಿಸಿ ಗೊಂದಲ
ಚನ್ನಪಟ್ಟಣ: ಒಂದೇ ಕಾರ್ಯಕ್ರಮಕ್ಕೆ ಎರಡೆರಡು ಆಹ್ವಾನ ಪತ್ರಿಕೆ ಮುದ್ರಿಸುವ ಮೂಲಕ ತಾಲೂಕಿನ ಸೋಗಾಲ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ತನ್ನ ತೊಘಲಕ್ ನೀತಿಯನ್ನು ಬಿಂಬಿಸಿದೆ.
ಹೌದು.., ಸೋಮವಾರ ಸೋಗಾಲ ಪಿಎಸಿಎಸ್ ನೂತನ ಕಟ್ಟಡದ ಉದ್ಘಾಟನಾ ಸಮಾರಂಭವಿತ್ತು. ಈ ಕಾರ್ಯಕ್ರಮಕ್ಕೆ ಈ ಹಿಂದೆಯೇ ಒಂದು ಆಹ್ವಾನ ಪತ್ರಿಕೆಯನ್ನು ಮುದ್ರಿಸಲಾಗಿತ್ತು. ಮುಂದುವರೆದಂತೆ ಇದೇ ಕಾರ್ಯಕ್ರಮಕ್ಕೆ ಮತ್ತೊಂದು ಆಹ್ವಾನ ಪತ್ರಿಕೆಯನ್ನು ಮುದ್ರಿಸುವ ಮೂಲಕ ಸದಸ್ಯರು ಹಾಗೂ ಗ್ರಾಮಸ್ಥರಲ್ಲಿ ಗೊಂದಲ ಮೂಡಿಸಿದೆ.
ಎರಡೆರಡು ಆಹ್ವಾನ ಪತ್ರಿಕೆ ಯಾಕೆ?: ಒಂದೇ ಕಾರ್ಯಕ್ರಮಕ್ಕೆ ಎರಡು ರೀತಿಯ ಆಹ್ವಾನ ಪತ್ರಿಕೆ ಮುದ್ರಿಸಿರುವುದು ಯಾಕೆ? ಇದರ ಜರೂರತ್ತಾದರೂ ಏನಿತ್ತು? ಒಂದೇ ಆಹ್ವಾನ ಪತ್ರಿಕೆಯನ್ನು ಮುದ್ರಿಸಿದ್ದರೆ ಸಂಘಕ್ಕೆ ಉಳಿತಾಯವಾಗುತ್ತಿರಲಿಲ್ಲವೇ ಎಂಬಿತ್ಯಾಧಿ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಮೂಡುವುದು ಸಹಜ. ಆದರೆ, ಈರೀತಿ ಎರಡೆರಡು ಆಹ್ವಾನ ಪತ್ರಿಕೆ ಮುದ್ರಿಸುವುದಕ್ಕೆ ಮೂಲಕಾರಣ ಆಡಳಿತ ಮಂಡಳಿ ಅಧ್ಯಕ್ಷರು ಮತ್ತು ಕೆಲ ಪದಾಧಿಕಾರಿಗಳ ಪ್ರತಿಷ್ಟೆಯೇ ಕಾರಣ ಎಂಬುದು ಇದೀಗ ಎಲ್ಲರಿಗೂ ಸ್ಪಷ್ಟವಾಗಿದೆ.
ಪಿಎಸಿಎಸ್‍ನ ಅಧ್ಯಕ್ಷರು ಮತ್ತು ಕೆಲ ಆಡಳಿತ ಮಂಡಲಿ ನಿರ್ದೇಶಕರು ಸಂಘದ ನೂತನ ಕಟ್ಟಡ ಉದ್ಘಾಟನಾ ಸಮಾರಂಭದ ಆಹ್ವಾನ ಪತ್ರಿಕೆಯನ್ನು ಶಿಷ್ಟಾಚಾರದಂತೆ ಮುದ್ರಿಸದೆ, ತಮಗೆ ಬೇಕಾದಂತೆ ಮುದ್ರಿಸಿ, ರಾಜಕೀಯ ಪಕ್ಷವೊಂದರ ಕಾರ್ಯಕ್ರಮದ ರೀತಿ ಕಾರ್ಯಕ್ರಮ ಮಾಡಲು ಮುಂದಾಗಿದ್ದು, ಇದೀಗ ಸಮಸ್ಯೆಯಾಗಿ ಪರಿಣಮಿಸಿದೆ.
ಈ ಹಿಂದೆ ಮುದ್ರಿಸಿದ್ದ ಆಹ್ವಾನ ಪತ್ರಿಕೆಯಲ್ಲಿ ಸಹಕಾರಿ ಸಚಿವರದ್ದಾಗಲಿ, ತಾಲೂಕನ್ನು ನೋಡೆಲ್ ಆಗಿಸಿಕೊಂಡಿರುವ ವಿಧಾನಪರಿಷತ್‍ಸದಸ್ಯ ಯೋಗೇಶ್ವರ್ ಅವರ ಹೆಸರಾಗಲಿ, ಮೇಲ್ಮನೆ ಸದಸ್ಯ ಎಸ್.ರವಿ ಅವರ ಹೆಸರಾಗಲಿ ಇರಲಿಲ್ಲ. ಶಿಷ್ಟಾಚಾರವನ್ನು ಪಾಲಿಸದೆ ಆಹ್ವಾನ ಪತ್ರಿಕೆಯನ್ನು ಮುದ್ರಿಸಿ ಹಂಚಿಕೆ ಮಾಡಿದ ಆಡಳಿತ ಮಂಡಳಿ ಕಾರ್ಯದ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ಕಾನೂನನ್ನು ಗಾಳಿಗೆ ತೂರಿ ಆಹ್ವಾನ ಪತ್ರಿಕೆಯನ್ನು ಮುದ್ರಿಸಿದ್ದ ಪಿಎಸಿಎಸ್ ಆಡಳಿತ ಮಂಡಳಿಯ ಕೆಲಸ ಬಗ್ಗೆ ಸಾಕಷ್ಟು ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಆಡಳಿತ ಮಂಡಳಿ ಪ್ರತ್ಯೇಕ ಕರಪತ್ರ ಮುದ್ರಣಕ್ಕೆ ಮುಂದಾಗಿದೆ. ಹೊಸ ಆಹ್ವಾನದ ಪತ್ರಿಕೆಯಲ್ಲಿ ಹಿಂದೆ ಇದಲ್ಲದವರ ಹೆಸರನ್ನು ಮುದ್ರಿಸಲಾಗಿದೆ.
ಒಟ್ಟಾರೆ, ಸೋಗಾಲ ಪಿಎಸಿಎಸ್ ಅಧ್ಯಕ್ಷರು ಮತ್ತು ಕೆಲ ಆಡಳಿತ ಮಂಡಳಿ ನಿರ್ದೇಶಕರು ಮಾಡಿದ ಎಡವಟ್ಟಿನಿಂದಾಗಿ ಒಂದೇ ಕಾರ್ಯಕ್ರಮಕ್ಕೆ ಎರಡೆರಡು ಆಹ್ವಾನ ಪತ್ರಿಕೆ ಮುದ್ರಿಸುವಂತಾಗಿದ್ದು, ಇವರ ಕೆಲಸವನ್ನು ನೋಡಿ ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ವರದಿ : ಬಿ.ಪಿ. ಚಿನ್ನಗಿರಿಗೌಡ
ಸಂಪಾದಕರು,
ಭೂಮಿಪುತ್ರ ದಿನಪತ್ರಿಕೆ,
ರಾಮನಗರ ಜಿಲ್ಲೆ.
ಮೊ: 9538745438




