ಚನ್ನಪಟ್ಟಣಕ್ಕೂ ಬರಲಿದೆ ಬುಲೆಟ್‍ಟ್ರೈನ್ : ಚೆನೈ-ಮೈಸೂರು ನಡುವೆ ಬುಲೆಟ್ ಟ್ರೈನ್ ಮಾರ್ಗ| ಚನ್ನಪಟ್ಟಣ ಸೇರಿದಂತೆ ರಾಜ್ಯದ 5 ಕಡೆ ನಿಲುಗಡೆ | ಗಂಟೆಗೆ 350 ಕಿ.ಮೀ ವೇಗದಲ್ಲಿ ಸಂಚರಿಸಲಿರುವ ರೈಲು| ತಾಲೂಕಿನ ಬ್ರಹ್ಮಣೀಪುರ-ತಗಚಗೆರೆ ಮಧ್ಯೆ ರೈಲ್ವೆ ನಿಲ್ದಾಣ
ಚನ್ನಪಟ್ಟಣ: ಪ್ರಧಾನಿ ಮೋದಿ ಅವರ ಮಹತ್ವಾಕಾಂಕ್ಷಿ ಬುಲೆಟ್‍ಟ್ರೈನ್ ಯೋಜನೆಯ ಲಾಭ ಬೊಂಬೆನಗರಿ ಚನ್ನಪಟ್ಟಣಕ್ಕೂ ದೊರೆಯಲಿದೆಯೇ..? ಹೌದು.. ಎನ್ನುತ್ತಿದೆ. ಎನ್‍ಎಚ್‍ಎಸ್‍ಆರ್‍ಸಿ ಮೂಲಗಳು.
ಭಾರತದಲ್ಲಿ ಸ್ವದೇಶಿ ನಿರ್ಮಿತ ಬುಲೆಟ್ ಟ್ರೈನ್ ಸೇವೆಯನ್ನು ಪ್ರಾರಂಭಿಸುವ ಉದ್ದೇಶ ಹೊಂದಿರುವ ಕೇಂದ್ರ ಸರ್ಕಾರ ಇದಕ್ಕಾಗಿ ನ್ಯಾಷನಲ್ ಹೈಸ್ಪೀಡ್ ರೈಲ್ವೆ ಕಾರ್ಪೋರೇಷನ್ ಲಿಮಿಟೆಡ್ ಅನ್ನು ಸ್ಥಾಪಿಸಿದೆ. ಈ ಸಂಸ್ಥೆಯ ಮೂಲಕ ದೇಶದಲ್ಲಿ 8 ಬುಲೆಟ್ ರೈಲು ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಈ ಯೋಜನೆಯಲ್ಲಿ ಚನ್ನಪಟ್ಟಣ ಮಾರ್ಗದಲ್ಲೂ ಒಂದು ಬುಲೆಟ್ ಟ್ರೈನ್ ಸೇವೆ ಲಭ್ಯವಾಗಲಿದೆ.
ಚೆನೈ – ಮೈಸೂರು ಮಾರ್ಗದ ರೈಲು: ಎನ್‍ಎಚ್‍ಆರ್‍ಸಿ ಕೈಗೊಂಡಿರುವ ರೈಲ್ವೆ ಯೋಜನೆಗಳ ಪೈಕಿ ಚೆನೈ-ಬೆಂಗಳೂರು-ಮೈಸೂರು ಮಾರ್ಗದಲ್ಲಿ ಸಂಚರಿಸುವ ರೈಲು ಸಹ ಒಂದಾಗಿದೆ. ಈ ಮೂರು ಪ್ರಮುಖ ನಗರಗಳ ನಡುವೆ ಸುಮಾರು 435 ಕಿಮೀ ದೂರ ಬುಲೆಟ್ ರೈಲು ಸಂಚಾರ ಮಾಡಲಿದ್ದು, ಇದಕ್ಕಾಗಿ ಪ್ರತ್ಯೇಕ ರೈಲ್ವೆ ಮಾರ್ಗ ಹಾಗೂ ರೈಲ್ವೆ ನಿಲ್ದಾಣಗಳ ನಿರ್ಮಾಣಕ್ಕೆ ಸಂಸ್ಥೆ ಮುಂದಾಗಿದೆ.
ಉದ್ದೇಶಿತ ಬುಲೆಟ್‍ರೈಲು 320 ರಿಂದ 350 ಕಿ.ಮೀ ವೇಗದಲ್ಲಿ ಸಂಚರಿಸಲಿದ್ದು, ಮೂರು ನಗರವನ್ನು ಶೀಘ್ರದಲ್ಲಿ ಸಂಪರ್ಕಿಸಲು ಸಾಧ್ಯವಾಗುತ್ತದೆ. ಅಲ್ಲದೆ ಬುಲೆಟ್ ರೈಲು 9 ಕಡೆಗಳಲ್ಲಿ ನಿಲುಗಡೆ ಮಾಡಲಿದ್ದು, ಈ ಮೂರು ಮಹಾನಗರಗಳ ನಡುವಿನ ಸಂಪರ್ಕ ಮತ್ತಷ್ಟು ಸುಲಭವಾಗಲಿದೆ. ಈ ಮಹತ್ವಾಕಾಂಕ್ಷಿ ರೈಲ್ವೆ ಯೋಜನೆ ಸಾರಿಗೆ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ಮಾಡಲಿದೆ ಎಂದು ನಿರೀಕ್ಷಿಸಲಾಗಿದೆ.
9 ಕಡೆ ನಿಲುಗಡೆ: ಉದ್ದೇಶಿತ ಬುಲೆಟ್ ರೈಲು ತಮಿಳುನಾಡಿನಲ್ಲಿ 131 ಕಿ.ಮೀ ಆಂಧ್ರ ಪ್ರದೇಶದಲ್ಲಿ 92 ಕಿಮೀ ಮತ್ತು ಕರ್ನಾಟಕದಲ್ಲಿ 223 ಕಿ.ಮೀ ಸಂಚರಿಸಲಿದೆ. ಈ ರೈಲಿನ ಸೇವೆ ಕರ್ನಾಟಕಕ್ಕೆ ಅತಿ ಹೆಚ್ಚು ದೊರೆಯಲಿದೆ. ಇನ್ನು ಬುಲೆಟ್ ರೈಲು ತಮಿಳುನಾಡಿನಲ್ಲಿ 3 ಕಡೆ, ಆಂಧ್ರದಲ್ಲಿ ಒಂದು ಕಡೆ ಮತ್ತು ಕರ್ನಾಟಕದಲ್ಲಿ 5 ಕಡೆ ನಿಲುಗಡೆ ಮಾಡಲಿದೆ. ಈ ಸಂಬಂಧ ಈಗಾಗಲೇ ಡಿಪಿಆರ್ ಸಿದ್ದಪಡಿಸಿರುವ ಎನ್‍ಎಚ್‍ಎಸ್‍ಆರ್‍ಸಿ ಕಾಮಗಾರಿ ಆರಂಭಿಸಲು ಸಿದ್ದತೆ ಮಾಡಿಕೊಂಡಿದೆ.
ತಮಿಳುನಾಡಿನಲ್ಲಿ ಚೆನೈ, ಪೊನಮಲೈ ಮತ್ತು ಅರಕೋಣಮ್ ನಲ್ಲಿ ನಿಲುಗಡೆ ಮಾಡಲಿದ್ದು, ಆಂಧ್ರದಲ್ಲಿ ಚಿತ್ತೂರಿನಲ್ಲಿ ನಿಲುಗಡೆ ಮಾಡಲಿದೆ. ಕರ್ನಾಟಕದಲ್ಲಿ ಬಂಗಾರಪೇಟೆ, ಬೆಂಗಳೂರು, ಚನ್ನಪಟ್ಟಣ, ಮಂಡ್ಯ ಮತ್ತು ಮೈಸೂರಿನಲ್ಲಿ ನಿಲುಗಡೆ ಮಾಡಲಿದೆ.
ಹೊಸ ರೈಲ್ವೆ ಹಾದಿ ನಿರ್ಮಾಣ: ಹೈಸ್ಪೀಡ್ ರೈಲು ಸಂಚರಿಸುವುದಕ್ಕೆ ಹಾಲಿ ಇರುವ ರೈಲು ಮಾರ್ಗದಲ್ಲಿ ಸಾಧ್ಯವಿಲ್ಲ. ಹಾಲಿ ಚೆನೈ-ಬೆಂಗಳೂರು-ಮೈಸೂರು ರೈಲ್ವೆ ಮಾರ್ಗ ಸಾಕಷ್ಟು ತಿರುವುಗಳಿಂದ ಕೂಡಿರುವ ಹಿನ್ನೆಲೆಯಲ್ಲಿ 320 ರಿಂದ 350 ಕಿಮೀ ವೇಗದಲ್ಲಿ ರೈಲು ಸಂಚರಿಸಲು ಸಾಧ್ಯವಾಗುವುದಿಲ್ಲ ವಾದ ಕಾರಣ ಬುಲೆಟ್‍ರೈಲಿಗಾಗಿ ಹೊಸ ಮಾರ್ಗವನ್ನು ನಿರ್ಮಾಣ ಮಾಡಲಾಗುತ್ತಿದೆ.
ನೂತನ ರೈಲು ಮಾರ್ಗ ಎಲಿವೇಟೆಡ್ ರಸ್ತೆ ಮತ್ತು ಸುರಂಗಮಾರ್ಗದಲ್ಲಿ ಸಂಚರಿಸುವಂತೆ ಯೋಜನೆಯನ್ನುರೂಪಿಸಲಾಗಿದ್ದು, ನೂತನ ರೈಲು ನಿಲ್ದಾಣಗಳು ಹಾಗೂ ರೈಲ್ವೆ ಮಾರ್ಗವನ್ನು ನಿರ್ಮಾಣಮಾಡಲಾಗುವುದು. ಒಟ್ಟಾರೆ ಬೆಂಗಳೂರು ಮೈಸೂರು ಮಧ್ಯೆ ಮತ್ತೊಂದು ರೈಲ್ವೆ ಮಾರ್ಗ ಆರಂಭ ಗೊಳ್ಳುತ್ತಿದೆ.
ಚನ್ನಪಟ್ಟಣದಲ್ಲಿ ಎಲ್ಲಿ: ನೂತನ ಬುಲೆಟ್ ರೈಲು ಮಾರ್ಗಕ್ಕೆ ಸಂಬಂಧಿಸಿದಂತೆ ಡಿಪಿಆರ್ ಸಿದ್ದಪಡಿಸಲಾಗಿದ್ದು, ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಇನ್ನು ಈಗಾಗಲೇ ರೈಲು ಸಾಗುವ ಮಾರ್ಗವನ್ನು ಸಿದ್ದಪಡಿಸಲಾಗಿದ್ದು, ಚನ್ನಪಟ್ಟಣ ರೈಲು ನಿಲ್ದಾಣ ಬ್ರಹ್ಮಣ್ಯಪುರ ಮತ್ತು ತಗಚಗೆರೆ ಗ್ರಾಮದ ನಡುವೆ ನಿರ್ಮಾಣ ವಾಗಲಿದೆ ಎಂದು ಮೂಲಗಳು ಮಾಹಿತಿ ಇತ್ತಿವೆ.
ಈ ಸಂಬಂಧ ಎನ್‍ಎಚ್‍ಎಸ್‍ಆರ್‍ಸಿ ಅಧಿಕಾರಿಗಳು ಈಮಾರ್ಗದಲ್ಲಿ ಬರುವ ಬೆಸ್ಕಾಂ ಹಾಗೂ ಬಿಎಸ್‍ಎನ್‍ಎನ್‍ಎಲ್ ಸೇರಿದಂತೆ ಕೆಲ ಇಲಾಖೆಗಳಿಗೆ ಸೂಚನೆ ನೀಡಿ ಈ ಮಾರ್ಗದಲ್ಲಿ ಯಾವುದೇ ಹೊಸ ಕಾಮಗಾರಿಗಳನ್ನು ಕೈಗೊಳ್ಳದಂತೆ ಹಾಗೂ ಹಾಲಿ ಇರುವ ವೈಯರ್ ಮಾರ್ಗಗಳನ್ನು ಬದಲಾಯಿಸುವಂತೆ ಸೂಚಿಸಲಾಗಿದೆ.
ವರದಿ : ಬಿ.ಪಿ. ಚಿನ್ನಗಿರಿಗೌಡ
ಸಂಪಾದಕರು,
ಭೂಮಿಪುತ್ರ ದಿನಪತ್ರಿಕೆ,
ರಾಮನಗರ ಜಿಲ್ಲೆ.
ಮೊ: 9538745438

