ಹೆಚ್ಚುವರಿ ಲೈನ್ ಅಳವಡಿಸಲು ಮುಂದಾದ ಕೆಪಿಟಿಸಿಎಲ್ ವಿರುದ್ಧ ರೈತರ ಆಕ್ರೋಶ
ಚನ್ನಪಟ್ಟಣ: ರೈತರಿಗೆ ಯಾವುದೇ ಪರಿಹಾರ ನೀಡದೆ ಹಾಗೂ ಸೂಚನೆ ನೀಡದೆ ಏಕಾಏಕಿ 66/11 ಕೆವಿ ವಂದಾರಗುಪ್ಪೆ ಬೇವೂರು ಎಸ್.ಸಿ.ಲೈನ್ ಮಾರ್ಗದಲ್ಲಿ ಹೆಚ್ಚುವರಿ ಲೈನ್ ಅಳವಡಿಸಲು ಮುಂದಾದ ಕೆಪಿಟಿಸಿಎಲ್ ಕ್ರಮಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿ, ಕಾಮಗಾರಿ ಸ್ಥಗಿತಗೊಳಿಸಿದ ಘಟನೆ ದೇವರಹೊಸಹಳ್ಳಿ ಬಳಿ ಮಂಗಳವಾರ ನಡೆಯಿತು.
ಈಗಾಗಲೇ 2005ರಲ್ಲಿ ಈ ಮಾರ್ಗದಲ್ಲಿ ಹೈಟೆನ್ಷನ್ ಲೈನ್ ಹಾದುಹೋಗಿದ್ದು, ಅದೇ ಮಾರ್ಗಕ್ಕೆ ಮತ್ತೆ ಹೆಚ್ಚುವರಿ ಲೈನ್ ಅಳವಡಿಸಲಾಗುತ್ತಿದೆ, ಇದಕ್ಕೆ ಯಾವುದೇ ಪರಿಹಾರವನ್ನು ನೀಡಿಲ್ಲ, ಲೈನ್ ಹಾದುಹೋಗಿರುವ ಜಾಗ ರೈತರಿಗೆ ಸೇರಿದೆ, ಯಾವುದೇ ಮುನ್ಸೂಚನೆ ನೀಡದೆ ಇನ್ನೊಂದು ಲೈನ್ ಅಳವಡಿಸುತ್ತಿರುವುದು ಸರಿಯಲ್ಲ, ರೈತರಿಗೆ ಪರಿಹಾರ ನೀಡಿ ಕಾಮಗಾರಿ ಆರಂಭಿಸಬೇಕೆಂದು ರೈತರು ಪಟ್ಟುಹಿಡಿದರು.
ಲೈನ್ ಹಾದುಹೋಗಿರುವ ಮಾರ್ಗದಲ್ಲಿ ಸಣ್ಣ ರೈತರುಗಳ ಜಮೀನಿದೆ, ಕೆಲವರಿಗೆ ಕೇವಲ ನಿವೇಶನ ಆಗುವಷ್ಟು ಜಾಗವಿದೆ, ಲೈನ್ ಕೆಳಗೆ ಮನೆ ಕಟ್ಟಿಕೊಳ್ಳಲು ಆಗುವುದಿಲ್ಲ, ಮನೆ ಕಟ್ಟಲು ಹೋದರೆ ಇವರ ಅನುಮತಿ ಕೇಳಬೇಕು, ಇರುವ ಜಾಗವನ್ನು ಇವರಿಗೇ ಬಿಟ್ಟುಕೊಟ್ಟರೆ, ನಾವು ಎಲ್ಲಿಗೆ ಹೋಗಬೇಕು, ರೈತರ ಮೇಲೆ ಧಮನಕಾರಿ ಧೋರಣೆಯನ್ನು ಅಧಿಕಾರಿಗಳು ತಾಳುತ್ತಿದ್ದಾರೆಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಸಂದರ್ಭದಲ್ಲಿ ಮಾತನಾಡಿದ ಹಿರಿಯ ರೈತಮುಖಂಡ ಸಿ.ಪುಟ್ಟಸ್ವಾಮಿ, ಈ ಹಿಂದೆ 2005ರಲ್ಲಿ ಲೈನ್ ಹಾದುಹೋಗಲು ಬಿಡಿಗಾಸಿನ ಪರಿಹಾರ ಕೊಟ್ಟಿದ್ದೀರಿ, ಆದರೆ ಈಗ ಈ ಭೂಮಿಯ ಬೆಲೆ ಬಂಗಾರದಷ್ಟಿದೆ, ಇನ್ನೊಂದು ಲೈನ್ ಅಳವಡಿಸಲು ರೈತರ ಅನುಮತಿಯನ್ನು ನೀವು ಕೇಳಿಲ್ಲ, ನಿಮ್ಮಿಷ್ಟಕ್ಕೆ ಬಂದಂತೆ ಅಳವಡಿಸಿಕೊಳ್ಳುತ್ತಿದ್ದೀರಿ, ಲೈನ್ ಹಾದುಹೋಗಲು ರೈತರು ಭೂಮಿ ಮಾರಾಟ ಮಾಡಿಲ್ಲ, ಕೇವಲ ಮರಗಳಿಗೆ ಪರಿಹಾರ ಕೊಟ್ಟಿದ್ದೀರಿ, ಭೂಮಿ ರೈತರ ಹೆಸರಿನಲ್ಲೇ ಇದೆ, ಮುಂದುವರೆದ ಭಾಗವಾಗಿ ಲೈನ್ ಹಾದುಹೋಗಿರುವ ಸ್ಥಳವನ್ನೆಲ್ಲ ನೀವು ಆಕ್ರಮಿಸಿಕೊಂಡರೆ ರೈತರು ಎಲ್ಲಿಗೆ ಹೋಗಬೇಕು, ಪರಿಹಾರವನ್ನು ನೀಡಿ ನಂತರ ಕಾಮಗಾರಿ ಆರಂಭಿಸಿ ಎಂದು ಸ್ಥಳಕ್ಕೆ ಭೇಟಿ ನೀಡಿದ ಕೆಪಿಟಿಸಿಲ್ ಇಇ ವಿಜಯಲಕ್ಷ್ಮಿ ಅವರಿಗೆ ಸೂಚನೆ ನೀಡಿದರು.
ಪ್ರತಿಕ್ರಿಯಿಸಿದ ಇಇ ವಿಜಯಲಕ್ಷಿ, ಈ ಹಿಂದೆಯೇ ಮಾರ್ಗ ಹಾದುಹೋಗಿರುವ ಸ್ಥಳಕ್ಕೆ ಸೂಕ್ತ ಪರಿಹಾರ ನೀಡಲಾಗಿದೆ, ಅದರ ಮುಂದುವರೆದ ಭಾಗವಾಗಿ ಲೈನ್ ಹೆಚ್ಚುವರಿ ಅಳವಡಿಸುತ್ತಿದ್ದೇವೆ, ಲೈನ್ ಹಾದುಹೋಗಿರುವ 8 ಮೀಟರ್‍ನಷ್ಟು ಜಾಗವನ್ನು ಬಿಟ್ಟು ಮನೆಕಟ್ಟಿಕೊಳ್ಳಬಹುದಾಗಿದೆ, ಅದಕ್ಕೆ ನಮ್ಮ ತಕರಾರಿಲ್ಲ ಎಂದರು. ಇದಕ್ಕೆ ಒಪ್ಪದ ರೈತಮುಖಂಡರು, ಹಿಂದೆ ಆಗಿದ್ದು ಬಿಟ್ಟು, ಮುಂದೆ ಆಗುವುದನ್ನು ನೋಡಬೇಕಿದೆ, ಲೈನ್ ಅಳವಡಿಸಿದ ಮೇಲೆ ರೈತರು ಜಮೀನು ಕಳೆದುಕೊಂಡಂತೆಯೇ ಲೆಕ್ಕ, ಹಾಗಾಗಿ ಪ್ರಸ್ತುತ ಸರ್ಕಾರ ನಿಗಧಿಪಡಿಸಿರುವ ಪರಿಹಾರವನ್ನು ನೀಡಿ ನಿಮ್ಮ ಕೆಲಸ ಮಾಡಿಕೊಳ್ಳಿ, ಪರಿಹಾರ ನೀಡುವ ವರೆಗೂ ಕಾಮಗಾರಿ ನಡೆಸಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ಸಂಬಂಧ ಕೆಪಿಟಿಸಿಎಲ್‍ನ ಮೇಲಿನ ಅಧಿಕಾರಿಗಳು, ಗುತ್ತಿಗೆದಾರರು ಹಾಗೂ ಸ್ಥಳೀಯ ಜಿಲ್ಲಾಡಳಿತ ಪ್ರತಿನಿಧಿಗಳ ಸಭೆಯನ್ನು ಶೀಘ್ರ ಕರೆದು ಚರ್ಚಿಸಬೇಕು, ಅಲ್ಲಿ ಆಗುವ ತೀರ್ಮಾನವನ್ನು ಅವಲೋಕಿಸಿ ಮುಂದಿನ ಹೋರಾಟವನ್ನು ರೂಪಿಸಲಾಗುತ್ತದೆ, ಅಲ್ಲಿಯವರೆಗೆ ಕಾಮಗಾರಿ ನಡೆಸಲು ಬಿಡುವುದಿಲ್ಲ ಎಂದು ಸಿ.ಪುಟ್ಟಸ್ವಾಮಿ ಸಂದರ್ಭದಲ್ಲಿ ತಿಳಿಸಿದರು. ಇದಕ್ಕೆ ಒಪ್ಪಿದ ಅಧಿಕಾರಿಗಳು ಶೀಘ್ರ ಸಭೆ ನಿಗಧಿಗೊಳಿಸುವುದಾಗಿ ತಿಳಿಸಿ ತೆರಳಿದರು.
ಸಂದರ್ಭದಲ್ಲಿ ವಂದಾರಗುಪ್ಪೆ ಚಂದ್ರೇಗೌಡ, ಕಾಂಗ್ರೆಸ್ ಅಧ್ಯಕ್ಷ ಸುನಿಲ್‍ಕುಮಾರ್ ಕೆಪಿಟಿಸಿಎಲ್ ಕ್ರಮವನ್ನು ಖಂಡಿಸಿ, ಕಾಮಗಾರಿ ನಡೆಸಿದರೆ ಉಗ್ರ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು. ಲೈನ್ ಹಾದುಹೋಗಿರುವ ಜಮೀನಿನ ರೈತರು ಭಾಗವಹಿಸಿದ್ದರು.