ಕೆಂಚಪ್ಪಗೌಡ-ಸಿ.ಎನ್.ಬಾಲಕೃಷ್ಣ ಪ್ರಬಲ ಆಕಾಂಕ್ಷಿ | ಡಾ. ಅಂಜನಪ್ಪ ಹೆಸರು ಇದೀಗ ಚಾಲ್ತಿಗೆ

ಚನ್ನಪಟ್ಟಣ: ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದು, ನಿರ್ದೇಶಕರು ನೇಮಕ ಗೊಂಡ ಬೆನ್ನಲ್ಲೇ ಇದೀಗ ಒಕ್ಕಲಿಗರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಮ್ಯೂಜಿಕಲ್ ಚೇರ್ ಆಟ ಆರಂಭ ಗೊಂಡಿದೆ. ಕುರ್ಚಿಯ ಸುತ್ತಾ ಆಕಾಂಕ್ಷಿಗಳು ಸುತ್ತುತ್ತಿದ್ದು, ಯಾರಿಗೆ ದೊರೆಯಲಿದೆ ಅಧ್ಯಕ್ಷ ಸ್ಥಾನ ಎಂಬ ಕುತೂಹಲ ಎಲ್ಲರಲ್ಲಿ ಮನೆಮಾಡಿದೆ.
ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷರನ್ನು ರಾಜ್ಯದ ವಿವಿಧ ಜಿಲ್ಲೆಗಳಿಂದ ಆಯ್ಕೆಯಾಗಿರುವ 35 ಮಂದಿ ನಿರ್ದೇಶಕರು ಬಹುಮತದ ಮೇರೆಗೆ ಆಯ್ಕೆಮಾಡಬೇಕಿದೆ. 18 ಮಂದಿ ನಿರ್ದೇಶಕರು ಮತ ನೀಡಿದ ವ್ಯಕ್ತಿ ಅಧ್ಯಕ್ಷರಾಗಿ ಆಯ್ಕೆಯಾಗುತ್ತಾರೆ. ಎಲ್ಲಾ ನಿರ್ದೇಶಕರ ಬೆಂಬಲ ಪಡೆದು ಅಧ್ಯಕ್ಷ ಸ್ಥಾನ ದಕ್ಕಿಸಿಕೊಳ್ಳಲು ಆಕಾಂಕ್ಷಿಗಳು ಕಸರತ್ತು ನಡೆಸುತ್ತಿದ್ದು, ಅಧ್ಯಕ್ಷ ಸ್ಥಾನದ ಪೈಪೋಟಿ ಇದೀಗ ತೀವ್ರ ಕುತೂಹಲ ಕೆರಳಿಸಿದೆ.
ಡಿ.29ಕ್ಕೆ ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಮಹೂರ್ತ ನಿಗಧಿಯಾಗಿರುವ ಹಿನ್ನೆಲೆಯಲ್ಲಿ ಸಾಕಷ್ಟು ಕಸರತ್ತುಗಳನ್ನು ಆಕಾಂಕ್ಷಿಗಳ ನಡೆಸುತ್ತಿದ್ದಾರೆ. ಇನ್ನು ರಾಜ್ಯದ ಎರಡನೇ ಅತಿದೊಡ್ಡ ಜನಸಂಖ್ಯೆ ಎನಿಸಿರುವ ಒಕ್ಕಲಿಗ ಸಮುದಾಯದ ಪ್ರತಿನಿಧಿಕ ಸಂಸ್ಥೆ ಎನಿಸಿರುವ ರಾಜ್ಯ ಒಕ್ಕಲಿಗರ ಸಂಘ ಸಾಕಷ್ಟು ವಿದ್ಯಾ ಸಂಸ್ಥೆಗಳು ಹಾಗೂ ಆದಾಯ ತರುವ ಆಸ್ತಿಗಳನ್ನು ಹೊಂದಿದೆ. ಈಕಾರಣದಿಂದಾಗಿ ಒಕ್ಕಲಿಗರ ಸಂಘದ ಅಧ್ಯಕ್ಷ ಸ್ಥಾನ ಮಹತ್ವದ ಹುದ್ದೆಯಾಗಿದೆ.
ಮತ್ತೆ ಅಧ್ಯಕ್ಷ ಗಾದಿಯ ರೇಸಿನಲ್ಲಿ ಕೆಂಚಪ್ಪಗೌಡ: ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷರಾಗಿ 2008 ರಿಂದ 13 ರವರೆಗೆ ಅಧಿಕಾರ ಅನುಭವಿಸಿದ್ದ ಕೆಂಚಪ್ಪಗೌಡ ಇದೀಗ ಮತ್ತೊಮ್ಮೆ ಅಧ್ಯಕ್ಷರಾಗಲು ಪ್ರಯತ್ನಿಸುತ್ತಿದ್ದಾರೆ. ಈಬಾರಿ ಬೆಂಗಳೂರುನಗರ, ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಯ 15 ಮಂದಿ ನಿರ್ದೇಶಕರ ಸಿಂಡಿಕೇಟ್‍ನಲ್ಲಿ ಇವರ ತಂಡ 10 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಈ ಕಾರಣದಿಂದ ಅಗತ್ಯವಿರುವ ಜನಬಲವನ್ನು ಹೊಂದಾಣಿಕೆ ಮಾಡಿಕೊಂಡು ಅಧಿಕಾರ ಹಿಡಿಯಲು ಅವರು ತಯಾರಿ ನಡೆಸುತ್ತಿದ್ದಾರೆ.
ಹೊರ ಜಿಲ್ಲೆಯ ವಿವಿಧ ನಿರ್ದೇಶಕರ ಬೆಂಬಲ ಪಡೆಯಲು ಪ್ರಯತ್ನಿಸುತ್ತಿರುವ ಕೆಂಚಪ್ಪಗೌಡ, ತಮ್ಮ ಅನುಭವವನ್ನು ಬಳಸಿಕೊಂಡು ಗಾದಿ ಹಿಡಿಯುವ ಪ್ರಯತ್ನ ನಡೆಸುತ್ತಿದ್ದಾರೆ. ಇತ್ತ ಕೆಲ ನಿರ್ದೇಶಕರು ಇವರಿಗೆ ಅಧ್ಯಕ್ಷಗಾದಿ ಕೊಡಬಾರದು ಎಂದು ಪ್ರಯತ್ನಿಸುತ್ತಿದ್ದು, ಕೆಂಚಪ್ಪಗೌಡ ಹಿಂದೆ ಅಧ್ಯಕ್ಷರಾಗಿ ಅವಧಿಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣವನ್ನು ಮುಂದೆ ಮಾಡಿಕೊಂಡು ಅಧಿಕಾರ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ.
ಇನ್ನು ಕೆಂಚಪ್ಪಗೌಡ ತಂಡದಿಂದ 10 ಮಂದಿ ನಿರ್ದೇಶಕರು ಮಾತ್ರ ಆಯ್ಕೆಯಾಗಿದ್ದು, ಅಧಿಕಾರ ಹಿಡಿಯಲು ಬೇಕಾದ ಉಳಿದ 8 ಮಂದಿ ನಿರ್ದೇಶಕರ ಬಲವನ್ನು ಹೊಂದಿಸುವುದು ನಿಜಕ್ಕೂ ಸಾಹಸದ ಕೆಲಸವೇ ಸರಿ ಎನ್ನುವಂತಾಗಿದೆ. ಇದರೊಂದಿಗೆ ಕೆಂಚಪ್ಪಗೌಡ ತಂಡದಲ್ಲಿರುವ ಕೆಲ ನಿರ್ದೇಶಕರಿಗೆ ಕೆಂಚಪ್ಪಗೌಡರನ್ನು ಅಧ್ಯಕ್ಷರನ್ನಾಗಿ ಮಾಡುವುದಕ್ಕೆ ಇಚ್ಚೆಇಲ್ಲವಾಗಿದ್ದು, ಅವರು ಕೆಂಚಪ್ಪಗೌಡರ ಅಧ್ಯಕ್ಷಸ್ಥಾನದ ಹಾದಿಗೆ ಅಡ್ಡಿಯಾಗಿದ್ದಾರೆ ಎಂದು ಹೇಳಾಗುತ್ತಿದೆ.
ಸಿ.ಎನ್.ಬಾಲಕೃಷ್ಣ ಪ್ರಬಲ ಪೈಪೋಟಿ: ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಪ್ರಬಲ ಪೈಪೋಟಿ ನೀಡುತ್ತಿರುವ ನಿರ್ದೇಶಕರ ಪೈಕಿ ಶ್ರವಣ ಬೆಳಗುಳದ ಶಾಸಕ ಸಿ.ಎನ್.ಬಾಲಕೃಷ್ಣ ಸಹ ಒಬ್ಬರಾಗಿದ್ದಾರೆ. ಹಾಸನ ಜಿಲ್ಲೆಯಿಂದ ಒಕ್ಕಲಿಗರ ಸಂಘದ ನಿರ್ದೇಶಕರಾಗಿ ಆಯ್ಕೆಯಾಗಿರುವ ಅವರು, ಈ ಹಿಂದೆ ಪದಾಧಿಕಾರಿಯಾಗಿ ಸಹ ಕೆಲಸ ನಿರ್ವಹಿಸಿದ್ದರು. ಇದೀಗ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದಾರೆ.
ಅಚ್ಚರಿಯ ಆಯ್ಕೆ ಸಾಧ್ಯತೆ: ಇನ್ನು ಈ ಇಬ್ಬರು ಆಕಾಂಕ್ಷಿಗಳ ಬಗ್ಗೆ ಕೆಲ ಒಕ್ಕಲಿಗ ಮುಖಂಡರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇವರಿಬ್ಬರನ್ನು ಹೊರತು ಪಡಿಸಿ ಹೊಸ ಮುಖವನ್ನು ಆಯ್ಕೆಮಾಡಿ ಎಂಬ ಸಲಹೆಯನ್ನು ಒಕ್ಕಲಿಗ ಸಮುದಾಯದ ದಿಗ್ಗಜರು ಕೆಲ ನಿರ್ದೇಶಕರಿಗೆ ರವಾನಿಸಿದ್ದು, ಇದರಿಂದಾಗಿ ಇಡೀ ಒಕ್ಕಲಿಗರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಅಚ್ಚರಿಯ ಹೆಸರು ಕೇಳಿಬರಲಿದೆ ಎಂಬ ಮಾತು ಇದೀಗ ವಿವಿಪುರಂನಲ್ಲಿರುವ ಸಂಘದ ಆವರಣದಲ್ಲಿ ಕೇಳಿಬರುತ್ತಿದೆ.
ನಿರ್ದೇಶಕ ಸ್ಥಾನದ ಚುನಾವಣೆಯಲ್ಲಿ ಅತಿಹೆಚ್ಚು ಮತಪಡೆದು ಗೆಲುವು ಸಾಧಿಸಿರುವ ಡಾ.ಅಂಜನಪ್ಪ ಹೆಸರು ಕೇಳಿಬರುತ್ತಿದೆ. ಇವರು ಅಧ್ಯಕ್ಷ ಸ್ಥಾನವನ್ನು ಒಪ್ಪಿಕೊಂಡಿದ್ದೇ ಆದಲ್ಲಿ ಇವರಿಗೆ ಅಧ್ಯಕ್ಷ ಸ್ಥಾನ ಒಲಿದು ಬರಲಿದೆ ಎಂದು ಹೇಳಲಾಗುತ್ತಿದೆ. ಇವರು ಒಪ್ಪದಿದ್ದಲ್ಲಿ ಬೇರೆಯವರಿಗೆ ದೊರೆಯುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.
ವರದಿ : ಬಿ.ಪಿ. ಚಿನ್ನಗಿರಿಗೌಡ
ಸಂಪಾದಕರು,
ಭೂಮಿಪುತ್ರ ದಿನಪತ್ರಿಕೆ,
ರಾಮನಗರ ಜಿಲ್ಲೆ.
ಮೊ : 9538745438

Leave a Reply

Your email address will not be published. Required fields are marked *