ಆರ್ಯ ಈಡೀಗ ಸಂಘದ ಜಿಲ್ಲಾಧ್ಯಕ್ಷರಾಗಿ ಎಂ.ನಾಗರಾಜ್ ಆಯ್ಕೆ
ರಾಮನಗರ : ಕರ್ನಾಟಕ ಪ್ರದೇಶ ಆರ್ಯ ಈಡೀಗ ಸಂಘದ ರಾಮನಗರ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಎಂ.ನಾಗರಾಜ್ ಆಯ್ಕೆಯಾಗಿದ್ದಾರೆ.
ಆರ್ಯ ಈಡೀಗ ಸಂಘದ ರಾಜ್ಯಾಧ್ಯಕ್ಷರಾದ ಡಾ.ಎಂ.ತಿಮ್ಮೇಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿವೃತ್ತ ಕಾರ್ಯಪಾಲಕ ಎಂಜಿನಿಯರ್ ಎಂ.ನಾಗರಾಜ್ ಅವರನ್ನು ಸಭೆಯಲ್ಲಿ ಸರ್ವಸಮ್ಮತದಿಂದ ಆಯ್ಕೆ ಮಾಡಲಾಯಿತು.
ಇದೆ ಸಂದರ್ಭದಲ್ಲಿ ಜಿಲ್ಲಾ ಘಟಕದ ಉಪಾಧ್ಯಕ್ಷರಾಗಿ ರಮೇಶ್, ಕಾರ್ಯದರ್ಶಿಯಾಗಿ ಭೋಜರಾಜ್, ಖಜಾಂಚಿಯಾಗಿ ಸುಧೀರ್ ಗೋಪಾಲ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಎ.ನಾಗೇಶ್, ಎ.ರವಿಕುಮಾರ್, ರಾಘವೇಂದ್ರ ಆಯ್ಕೆಯಾಗಿದ್ದಾರೆ.
ಈ ಹಿಂದೆ ಜಿಲ್ಲಾಧ್ಯಕ್ಷರಾಗಿದ್ದ ರೈಡ್ ನಾಗರಾಜ್ ಅವರು ನೂತನ ಜಿಲ್ಲಾಧ್ಯಕ್ಷ ಎಂ.ನಾಗರಾಜ್ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದರು.
ನೂತನ ಜಿಲ್ಲಾಧ್ಯಕ್ಷ ಎಂ.ನಾಗರಾಜ್ ಮಾತನಾಡಿ, ಹಿಂದಿನ ಜಿಲ್ಲಾಧ್ಯಕ್ಷರಾಗಿದ್ದ ರೈಡ್ ನಾಗರಾಜ್ ಅವರು ಸಂಘವನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಿಕೊಂಡು ಬಂದಿದ್ದಾರೆ. ಅವರ ಸಲಹೆ ಮತ್ತು ರಾಜ್ಯಾಧ್ಯಕ್ಷರಾದ ತಿಮ್ಮೇಗೌಡರ ಮಾರ್ಗದರ್ಶನದಲ್ಲಿ ಎಲ್ಲರ ಸಹಕಾರದೊಂದಿಗೆ ರಾಮನಗರ ಜಿಲ್ಲೆಯಲ್ಲಿ ಸಮುದಾಯದ ಏಳಿಗೆಗಾಗಿ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತೇನೆ. ಸರ್ಕಾರದಿಂದ ದೊರೆಯಬೇಕಾದ ಸೌಲಭ್ಯಗಳನ್ನು ಸಮುದಾಯಕ್ಕೆ ತಲುಪಿಸುವುದರ ಜೊತೆಗೆ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗುವುದು ಎಂದರು.
ಮುಂದಿನ ಫೆ.22 ರಂದು ಸೋಲೂರು ಸಂಸ್ಥಾನದ ಮಠಾಧೀಶರಾಗಿ ನಿಯುಕ್ತಿಗೊಂಡಿರುವ ಶ್ರೀವಿಖ್ಯಾತಾನಂದ ಸ್ವಾಮೀಜಿಯರ ಪೀಠಾರೋಹಣ ಕಾರ್ಯಕ್ರಮ ನಡೆಯುತ್ತಿದ್ದು, ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದರು.
ಸದ್ಯದಲ್ಲಿಯೇ ಜಿಲ್ಲೆಯಾದ್ಯಂತ ಪ್ರವಾಸ ನಡೆಸಿ ಸಮಾಜದ ಸಂಘಟನೆ ಜೊತೆಗೆ ಸಮುದಾಯದ ಮಕ್ಕಳಲ್ಲಿ ಶಿಕ್ಷಣದ ಬಗ್ಗೆ ಅರಿವು ಮೂಡಿಸಲಾಗುವುದು. ನಿರುದ್ಯೋಗಿ ಯುವ ಸಮುದಾಯದ ಸೂಕ್ತ ಮಾಹಿತಿ ಪಡೆದು ಅವರಿಗೆ ಜೀವನ ಭದ್ರತೆ ಒದಗಿಸಲು ಕಾರ್ಯಕ್ರಮ ರೂಪಿಸಲಾಗುವುದು ಎಂದು ಹೇಳಿದರು.