ಕ್ರಿಸ್ಮಸ್ ಹಬ್ಬಕ್ಕೆ ಸಜ್ಜುಗೊಂಡ ಲೂರ್ದು ಮಾತೆಯ ದೇವಾಲಯ
ರಾಮನಗರ (hairamanagara.in) : ಚುಮುಚುಮು ಚಳಿಯೊಂದಿಗೆ ಮತ್ತೊಂದು ಕ್ರಿಸ್ಮಸ್ ಬಂದಿದೆ. ಸಡಗರದ ಕ್ರಿಸ್ಮಸ್ ಅನ್ನು ಅಚರಿಸಲು ಹಾಗೂ ಕ್ರಿಸ್ತನ ಜನನದ ಕ್ಷಣಗಳಿಗೆ ಸಾಕ್ಷಿಯಾಗಲು ರಾಮನಗರದ ರೈಲ್ವೆ ಸ್ಟೇಷನ್ ಬಳಿ ಇರುವ ಲೂರ್ದು ಮಾತೆಯ ದೇವಾಲಯ ಸಜ್ಜುಗೊಂಡಿದೆ. ಶುಕ್ರವಾರ ಈವ್ ಮುಗಿದು, ಮಧ್ಯರಾತ್ರಿ ಕಳೆದು ಡಿ.25ರ ಶನಿವಾರದ ಮೊದಲ ಕ್ಷಣ ಪ್ರಾರಂಭವಾಗುತ್ತಲೇ ಯೇಸುಕ್ರಿಸ್ತ ಜನಿಸುತ್ತಾನೆ. ಎಲ್ಲರ ಹೃದಯಗಳಲ್ಲಿ, ಮನೆಮನಗಳಲ್ಲಿ ಕ್ರಿಸ್ಮಸ್ ಹಬ್ಬದ ಸಡಗರ ಸಂಭ್ರಮ ಏರ್ಪಡುತ್ತದೆ.
ಕ್ರಿಸ್ಮಸ್ ಈವ್ ದಿನವಾದ ಶುಕ್ರವಾರ ಮತ್ತು ಕ್ರಿಸ್ತನ ಜನನದ ದಿನವಾದ ಶನಿವಾರ ಕ್ರೈಸ್ತರು ಶ್ರದ್ಧಾ ಭಕ್ತಿಯಿಂದ ಚರ್ಚ್‍ಗಳಿಗೆ ಹೋಗುತ್ತಾರೆ. ಕ್ರಿಸ್ಮಸ್ ತಾತಾ ‘ಸಾಂತಾ ಕ್ಲಾಸ್’ ನನ್ನು ಬರಮಾಡಿಕೊಳ್ಳಲು, ಆತ ನೀಡುವ ಚಾಕಲೆಟ್ ಸವಿಯಲು ಮಕ್ಕಳು ಕಾಯುತ್ತಿದ್ದಾರೆ. ಶೋಷಣೆ ರಹಿತ ಸಮ ಸಮಾಜಕ್ಕಾಗಿ ಪ್ರಾಣ ತೆತ್ತ ಯೇಸು ಕ್ರಿಸ್ತನ ಸ್ಮರಣೆ ಕ್ರಿಸ್ಮಸ್ ಹಬ್ಬದಲ್ಲಿ ಹಲವು ಬಗೆಯಲ್ಲಿ ಕಂಡುಬರುತ್ತದೆ.
ಕ್ರೈಸ್ತರ ಮನೆಗಳಲ್ಲಿ ಸಂಭ್ರಮದ ಕ್ರಿಸ್ಮಸ್ ಗೆ ಈಗಾಗಲೇ ಎಲ್ಲಾ ರೀತಿಯ ಸಿದ್ಧತೆಗಳು ನಡೆದಿವೆ. ಮನೆಗಳಲ್ಲಿ ಗೋದಲಿ (ಕ್ರಿಸ್ತನು ಹುಟ್ಟಿದ ದನದ ಕೊಟ್ಟಿಗೆಯ ಸುಂದರ ಪ್ರತಿಕೃತಿ) ನಿರ್ಮಿಸಿ ಕ್ರಿಸ್ಮಸ್ ಟ್ರೀ ಅನ್ನು ತಂದು ಇಡಲಾಗಿದೆ. ಇವುಗಳಿಗೆ ವಿದ್ಯುತ್ ದೀಪಾಲಂಕಾರವನ್ನು ಮಾಡಲಾಗಿದೆ. ಅಲಂಕಾರಿಕಾ ನಕ್ಷತ್ರ ದೀಪಗಳನ್ನು ಗೋದಲಿಗಳಲ್ಲಿ, ಮನೆಗಳಲ್ಲಿ, ಚರ್ಚ್‍ಗಳಲ್ಲಿ ನೇತು ಹಾಕಲಾಗಿದೆ. ಶುಭಾಶಯ, ಉಡುಗೊರೆ, ಖುಷಿ ವಿನಿಮಯಕ್ಕೆ ಕ್ರೈಸ್ತ ಸಮುದಾಯದವರು ಸಿದ್ಧತೆಯಲ್ಲಿ ತೊಡಗಿದ್ದಾರೆ. ಚರ್ಚ್‍ನಲ್ಲಿಯೂ ಸಹ ಗೋದಲಿ ಮತ್ತು ಕ್ರಿಸ್ಮಸ್ ಟ್ರೀಗಳ ದೊಡ್ಡ ಪ್ರತಿಕೃತಿಗಳನ್ನು ನಿರ್ಮಿಸಲಾಗುತ್ತಿದ್ದು ವಿಶೇಷ ಆಕರ್ಷಣೆಗಳಾಗಿವೆ.
‘ಕ್ರಿಸ್ಮಸ್ ಹಬ್ಬದಂದು ಎಲ್ಲರೂ ತಮ್ಮ ಪಾಪದ ತಪ್ಪೊಪ್ಪಿಗೆ ಕೆಲಸಕ್ಕೆ ಮುಂದಾಗುತ್ತಾರೆ. ಹೊಸ ವರ್ಷದ ದಿನದಿಂದ ಕ್ರಿಸ್ಮಸ್ ಈವ್ ವರೆಗೆ ಯಾವಾತ್ತಾದರೂ ಒಂದು ದಿನ ಚರ್ಚ್‍ಗೆ ಹೋಗಿ ತಮ್ಮ ಪಾಪಗಳ ನಿವೇದನೆಯನ್ನು ಮಾಡಿಕೊಳ್ಳುತ್ತಾರೆ. ಆ ಮೂಲಕ ಕ್ರಿಸ್ತನ ಆಗಮನಕ್ಕೆ ಸ್ವಾಗತ ಕೋರಲು ಸಂಪೂರ್ಣವಾಗಿ ಸಿದ್ಧರಾಗುತ್ತಾರೆ. ಕ್ರಿಸ್ ಮಸ್ ಕ್ರೈಸ್ತರಿಗೆ ಹೊಸ ವರ್ಷದ ಆಗಮನವಷ್ಟೇ ಅಲ್ಲ. ಹೊಸ ಜೀವನದ ಆಗಮನವೂ ಆಗುತ್ತದೆ’ ಎಂದು ಸಂತ ಲೂರ್ದು ಮಾತಾ ದೇವಾಲಯದ ಪಾದರ್ ಅಲೆಕ್ಸ್ ‘ಹಾಯ್ ರಾಮನಗರ’ ವೆಬ್ ಸೈಟ್ ಗೆ ತಿಳಿಸಿದರು.
ಕ್ರಿಸ್ಮಸ್ ಈವ್ ಮುನ್ನಾ ದಿನವಾದ ಶುಕ್ರವಾರ ಸಂಜೆ 7.30 ರಿಂದ ರಾತ್ರಿ 9 ಗಂಟೆವರೆಗೆ ವಿಶೇಷ ಪ್ರಾರ್ಥನೆ ಚರ್ಚ್‍ನಲ್ಲಿ ನಡೆಯಲಿದೆ. ಅಲ್ಲಿಂದ ಕ್ರೈಸ್ತರು ಮನೆಯಲ್ಲಿ ಪ್ರಾರ್ಥನೆ ಮಾಡಿ, ಶುಭಾಶಯ ವಿನಿಮಯ ಮಾಡಿಕೊಂಡು, ಸಿಹಿ ಹಂಚಿ ಹಬ್ಬವನ್ನು ಆಚರಿಸುತ್ತಾರೆ. ಹೊಸ ಜೀವನ, ಹೊಸ ವರ್ಷ ಕ್ರಿಸ್ತನ ಪ್ರೀತಿ ಕರುಣೆಯ ನೆರಳಲ್ಲಿ ಪುನಃ ತೆರೆದುಕೊಳ್ಳುತ್ತದೆ. ಶನಿವಾರ ಬೆಳಿಗ್ಗೆ 8.30ಕ್ಕೆ ಬಲಿಪೂಜೆ ನಡೆಯಲಿದೆ ಎಂದು ಅವರು ಹೇಳಿದರು.
ಡಿಸೆಂಬರ್ ತಿಂಗಳ ಮೊದಲ ಭಾನುವಾರ ಕ್ರಿಸ್ತನ ಆಗಮನದ ಕಾಲವಾಗಿರುತ್ತದೆ. ಯೇಸುವಿನ ಬರುವಿಕೆಗಾಗಿ ಹೇಗೆ ಸಿದ್ಧರಾಗಬೇಕು, ಹೇಗೆ ಸ್ವಾಗತಿಸಬೇಕು ಎಂಬ ಚರ್ಚ್ ಎಲ್ಲರ ಮನೆಗಳಲ್ಲೂ ನಡೆಯುತ್ತದೆ. ಡಿಸೆಂಬರ್ ನ ಮೊದಲ ದಿನದಿಂದಲೇ ಶುರುವಾಗುವ ಭಜನೆ ನಡಿಗೆ ಮೂಲಕ ಕೈಸ್ತನ ಆಗಮನದ ಹಾಡುಗಳನ್ನು ಹೇಳುತ್ತಾ ಕ್ರೈಸ್ತ ಬಾಂಧವರು ಮನೆಮನೆಗೆ ಹೋಗಿ ಯೇಸುಕ್ರಿಸ್ತನನ್ನು ಸ್ವಾಗತಿಸಲು ಸಿದ್ಧರಾಗಿ ಎಂಬ ಸಂದೇಶವನ್ನು ತಿಳಿಸುತ್ತಾರೆ. ನಿಜವಾದ ಕ್ರಿಸ್ಮಸ್ ಡಿಸೆಂಬರ್ ನ ಮೊದಲ ವಾರದಿಂದಲೇ ಶುರುವಾಗುತ್ತದೆ ಎಂದು ಗೃಹಿಣಿ ವೈಲೆಟ್ ಮಾಹಿತಿ ನೀಡಿದರು.
ಚಿತ್ರಗಳು-ವರದಿ : ಕೃಷ್ಣಮೂರ್ತಿ ಇರುಳಿಗ ಮೊ: 9538613503

