ಮಹಾಜನ್ ವರದಿ ಜಾರಿಯಾದಾಗ ಮಾತ್ರ ಗಡಿ ಸಮಸ್ಯೆ ನಿವಾರಣೆಯಾಗಲಿದೆ : ಶಂಕರ್ ಬಿದರಿ
ಮಾಗಡಿ : ಬೆಳಗಾವಿಯಲ್ಲಿ ನಡೆಯುತ್ತಿರುವ ಘಟನೆ ಖಂಡನೀಯವಾಗಿದೆ, ಅಖಂಡ ಭಾರತದಲ್ಲಿ ಎಲ್ಲಾರೂ ಸೌಹರ್ದವಾಗಿ ಇರಬೇಕು, ಗಡಿವಿವಾದ ಬಗೆಹರಿಯುವ ನಿಟ್ಟಿನಲ್ಲಿ ಮಹಜನ್ ವರದಿ ಜಾರಿಯಾಗಬೇಕಿದೆ ಎಂದು ನಿವೃತ್ತ ಪೊಲೀಸ್ ಮಹಾನಿರ್ದೇಶಕ ಡಾ. ಶಂಕರ್ ಬಿದರಿ ಹೇಳಿದರು.
ಪಟ್ಟಣದ ಕಲ್ಯಾಗೇಟ್‍ನಲ್ಲಿ ರೈತ ದಿನಾಚರಣೆ ಪ್ರಯುಕ್ತ ಹಸಿರು ಸೇನೆ ರೈತ ಸಂಘದ ವತಿಯಿಂದ 5ನೇ ವರ್ಷದ ಪ್ರಗತಿ ಪರ ರೈತರಿಗೆ ಸನ್ಮಾನ ಕಾರ್ಯಕ್ರಮ ಹಾಗೂ ರೈತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದೇವರಾಜು ಅರಸು ರವರ ಕಾಲದಿಂದಲೂ ಒಕ್ಕೊರಳಾಗಿ ಮಹಾಜನ್ ವರದಿಯನ್ನು ಒಪ್ಪಿಕೊಂಡಿದ್ದು ಅದನ್ನು ಅನುಷ್ಠಾನ ಮಾಡಿ ಎಂದು ಕೇಳಿಕೊಳ್ಳುತ್ತಿದೆ, ಮಹಾರಾಷ್ಟ್ರ ಜೊತೆ ಮಾತನಾಡಿ ಮಹಾಜನ್ ವರದಿ ಅನುಷ್ಠಾನ ಮಾಡಿದರೆ ಸಮಸ್ಯೆ ಬಗೆಹರಿಯುತ್ತದೆ, ಮಹಾರಾಷ್ಟ್ರದ ಗಡಿ ವಿಚಾರ ಒಂದೇ ಕೂಡ ಮಹಾಜನ್ ವರದಿಯಲ್ಲಿ ಉಲ್ಲೇಖವಾಗಿಲ್ಲ, ಕೇರಳ ಆಂಧ್ರಪ್ರದೇಶದ ಗಡಿ ಭಾಗಕ್ಕೂ ಸೇರಿದ್ದು ಕೇಂದ್ರ ಸರ್ಕಾರ ಸಂಬಂಧಪಟ್ಟ ರಾಜ್ಯಗಳ ಜೊತೆ ಚರ್ಚಿಸಿ ಅನುಷ್ಠಾನ ಮಾಡಿದಾಗ ಮಾತ್ರ ಗಡಿವಿವಾದ ಬಗೆಹರಿಯುತ್ತದೆ, ಕುವೆಂಪುರವರು ಹೇಳಿದಂತೆ ಭಾರತೀಯರೆಲ್ಲಾರೂ ಸೌಹಾರ್ದದಿಂದ ಬಾಳಬೇಕು, ದ್ವೇಷ ಅಸೂಯೆಯನ್ನು ಬಿಡಬೇಕು, ಮಹಾಜನ್ ವರದಿ ಅನುಷ್ಠಾನದಿಂದ ಮಾತ್ರ ಸಮಸ್ಯೆ ಬಗೆಹರಿಯಲು ಸಾಧ್ಯ ಎಂದು ತಿಳಿಸಿದರು.
ರೈತರು ಹೆಚ್ಚು ಸ್ವಾವಲಂಭಿಯಾಗಿ ತನ್ನದೆ ಆದ ಬ್ರಾಂಡ್‍ಗಳನ್ನು ಸೃಷ್ಠಿಸಿ ಬೆಲೆ ನಿಗಧಿ ಮಾಡುವಂತ ಸ್ಥಿತಿಗೆ ಬಂದಾಗ ಮಾತ್ರ ರೈತರು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗುತ್ತದೆ, ದಿ.ನಂಜುಂಡಸ್ವಾಮಿ ಮತ್ತು ಪುಟ್ಟಣ್ಣಯ್ಯನವರು ರೈತರ ಪರವಾಗಿ ಸಾಕಷ್ಟು ಹೋರಾಟಗಳನ್ನು ಮಾಡಿದ್ದಾರೆ, ವಿದ್ಯಾವಂತರಾಗಿದ್ದ ನಂಜುಂಡಸ್ವಾಮಿರವರು ರಾಜಕೀಯಕ್ಕೆ ಬರದೆ ರೈತರ ಪರವಾಗಿಯೇ ಉತ್ತಮ ಹೆಸರನ್ನು ಗಳಿಸಿದ್ದಾರೆಂದು ಶಂಕರ್ ಬಿದರಿ ತಿಳಿಸಿದರು.
ಬೆಟ್ಟಹಳ್ಳಿ ಮಠಾಧ್ಯಕ್ಷ ಚಂದ್ರಶೇಖರ ಸ್ವಾಮೀಜಿ ಮಾತನಾಡಿ, ರೈತರು ಬೇಡುವ ಕೈಗಳಾಗಿಲ್ಲ ಸರ್ಕಾರ ರೈತರಿಗೆ ಕೊಡಬೇಕಾದ ಸೌಲಭ್ಯಗಳನ್ನು ಕೊಟ್ಟರೆ ಸಾಕು ರೈತರು ಏನನ್ನು ಬಯಸುವುದಿಲ್ಲ, 1964-65ರ ಸಮಯದಲ್ಲಿ ದೇಶದಲ್ಲಿ ಬರಗಾಲ ಎದುರಾದಾಗ ಅಮೆರಿಕಾದಿಂದ ಗೋಧಿಯನ್ನು ಆಮದು ಮಾಡಿಕೊಂಡಿದ್ದೇವು, ಆದರೆ ಈಗ ವಿದೇಶಗಳಿಗೆ ನಮ್ಮ ಆಹಾರವನ್ನು ರಫ್ತು ಮಾಡುವಷ್ಟು ಸುಸ್ಥಿತಿಗೆ ಬಂದಿದ್ದೇವೆ, ವೈಜಾನಿಕ ಬೇಸಾಯಕ್ಕೆ ರೈತರು ಒತ್ತು ಕೊಡಬೇಕು, ನೀರನ್ನು ಮಿತವಾಗಿ ಬಳಸುವುದರಿಂದ ನೀರಿನ ಅವಶ್ಯಕತೆ ಕಡಿಮೆಯಾಗುತ್ತದೆ, ಸಾಕಷ್ಟು ರೈತ ಸಂಘಗಳು ಒಗ್ಗಟ್ಟಾಗಿ ಹೋರಾಟ ಮಾಡಬೇಕು, ಆಗ ಮಾತ್ರ ನ್ಯಾಯ ಸಿಗಲು ಸಾಧ್ಯ ಎಂದು ತಿಳಿಸಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಲೋಕೆಶ್ ಮಾತನಾಡಿ, ತಾಲೂಕಿನ ಎಲ್ಲಾ ಮುಖಂಡರ ಸಹಕಾರದಿಂದ ಸತತ 5 ನೇ ಭಾರಿಗೆ ರೈತ ದಿನಾಚರಣೆಯನ್ನು ಆಚರಿಸಿದ್ದು ನಮ್ಮೆಲ್ಲಾರ ಹೋರಾಟಗಳಿಗೆ ಬೆನ್ನುಲುಬಾಗಿ ನಿಂತ ತಾಲೂಕಿನ ರೈತರಿಗೆ ಆಭಾರಿಯಾಗಿರುತ್ತೇನೆ, ಅನ್ಯಾಯವಾದಾಗ ರೈತ ಸಂಘ ಕೈಕಟ್ಟಿ ಕೂರುವ ಕೆಲಸ ಯಾವುದೇ ಕಾರಣಕ್ಕೂ ಮಾಡುವುದಿಲ್ಲ ರೈತಸಂಘಕ್ಕೆ ಎಲ್ಲಾರ ಸಹಕಾರ ಅಗತ್ಯವಾಗಿದೆ ಎಂದು ತಿಳಿಸಿದರು.
ರೈತ ದಿನಾಚರಣೆ ಅಂಗವಾಗಿ, ಪ್ರಗತಿ ಪರ ರೈತರನ್ನು ಹಾಗೂ ರೈತ ಮಿತ್ರ ಪ್ರಶಸ್ತಿಯನ್ನು ನೀಡಲಾಯಿತು, 2022 ನೇ ಸಾಲಿನ ನೂತನ ದಿನದರ್ಶಿನಿ ಹಾಗೂ ಗುರುತಿನ ಚೀಟಿ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಜಡೇದೇವರಮಠದ ಇಮ್ಮಡಿ ಬಸವರಾಜ ಸ್ವಾಮೀಜಿ, ಎಪಿಎಂಸಿ ಅಧ್ಯಕ್ಷ ಚಕ್ರಬಾವಿ ಮಾರೇಗೌಡ, ಪುರಸಭಾ ಅಧ್ಯಕ್ಷೆ ವಿಜಯರೂಪೇಶ್, ಮುಖಂಡರುಗಳಾದ ಜೆ.ಪಿ.ಚಂದ್ರೇಗೌಡ, ಎಂ.ಕೆ.ಧನಂಜಯ್ಯ, ಶೈಲಜ ಸರ್ಕಾರಿ ವೈದ್ಯಾಧಿಕಾರಿ ಡಾ.ಫಾರೂಕ್, ರೋಟರಿ ಸಂಘದ ಅಧ್ಯಕ್ಷ ಮಹಂತೇಶ್, ಕಾರ್ಯದರ್ಶಿ ಪ್ರಭಾಕರ್, ನಿವೃತ್ತ ಯೋಧ ಶಿವಕುಮಾರ್, ಚಲುವನಾರಾಯಣ್, ಚಕ್ರಬಾವಿ ಅರುಣ್ ಕುಮಾರ್, ಸೇರಿದಂತೆ ಹಸಿರು ಸೇನೆ ರೈತ ಸಂಘದ ಮುಖಂಡರುಗಳು ಭಾಗವಹಿಸಿದ್ದರು.