ಜಲ ಜೀವನ್: ಎಲ್ಲಾಕಡೆ ಕಳಪೆ ಕಾಮನ್ : 81ಕೋಟಿ ರೂ. ಕಾಮಗಾರಿಗೆ ಖಾಲಿ ಪೈಪ್‍ಲೈನ್ ಅಷ್ಟೇ | 6 ತಿಂಗಳು ಕಳೆದರೂ ಜನರ ಮನೆಗೆ ಬರಲಿಲ್ಲ ಗಂಗೆ

ಚನ್ನಪಟ್ಟಣ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಎನಿಸಿರುವ ಜಲಜೀವನ್‍ಮಿಷನ್ ತಾಲೂಕಿನ ಮಟ್ಟಿಗೆ ಹಳ್ಳ ಹಿಡಿದೆ. ಜಿಪಂ ಇಂಜಿನಿಯರಿಂಗ್ ಕುಡಿಯುವ ನೀರು ಪೂರೈಕೆ ವಿಭಾಗದ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಬೇಜವಾಬ್ದಾರಿ ತನದಿಂದಾಗಿ ಇಡೀ ಯೋಜನೆ ಹೊಳೆಯಲ್ಲಿ ಹುಣಸೆಹಣ್ಣು ತೇಯ್ದಂತಾಗಿದೆ.
ತಾಲೂಕಿನ 249 ಹಳ್ಳಿಗಳಲ್ಲಿ ಎರಡು ಹಂತದಲ್ಲಿ ಜಲಜೀವನ್ ಮಿಷನ್ ಯೋಜನೆಯನ್ನು ಅನುಷ್ಟಾನಕ್ಕೆ ತಂದು, ಪ್ರತಿಗ್ರಾಮದ ಪ್ರತಿ ಮನೆಗೆ ಕೊಳಾಯಿ ಮೂಲಕ ನೀರು ಪೂರೈಕೆ ಮಾಡುವ ಕಾಮಗಾರಿಗೆ ಹೀಗೆ ಒಂದು ವರ್ಷದ ಹಿಂದೆ ಚಾಲನೆ ನೀಡಲಾಗಿತ್ತು. ಆದರೆ, ಕಾಮಗಾರಿ ಆರಂಭಗೊಂಡಿದೆಯಾದರೂ, ಕಾಮಗಾರಿಯ ಪ್ರಗತಿ ಮಾತ್ರ ನಿಗದಿತ ಪ್ರಮಾಣದಲ್ಲಿ ನಡೆದಿಲ್ಲ ಎಂಬುದು ತಾಲೂಕಿನ ಯಾವ ಗ್ರಾಮಗಳಿಗೆ ಹೋಗಿ ನೋಡಿದರೂ ವೇದ್ಯವಾಗುತ್ತದೆ.
ಜಲಜೀವನ್ ಮಿಷನ್ ಯೋಜನೆಯನ್ನು 2020-21ನೇ ಸಾಲಿನಲ್ಲಿ ತಾಲೂಕಿನಲ್ಲಿ ಆರಂಭಿಸಲಾಯಿತು. ಮೊದಲ ಹಂತದಲ್ಲಿ ಜಲಜೀವನ್ ಮಿಷನ್ ಯೋಜನೆಗೆ 187 ಗ್ರಾಮಗಳನ್ನು ಆಯ್ಕೆಮಾಡಲಾಗಿದ್ದು, ಈ ಗ್ರಾಮಗಳ ವ್ಯಾಪ್ತಿಯಲ್ಲಿ ಜಲಜೀವನ್ ಮಿಷನ್ ಯೋಜನೆಯನ್ನು ಜಾರಿಗೆ ತರುವುದಕ್ಕೆ 63 ಕೋಟಿ ರೂ. ವೆಚ್ಚದ ಅಂದಾಜು ಕಾಮಗಾರಿಯನ್ನು ಕೈಗೊಳ್ಳಲಾಯಿತು.
ಈಗಾಗಲೇ ಬಹುತೇಕ ಗ್ರಾಮಗಳಲ್ಲಿ ಕಾಮಗಾರಿ ನಡೆದಿದೆ. ಇನ್ನು ಎರಡನೇ ಹಂತದ ಕಾಮಗಾರಿಯನ್ನು 18 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗಿದ್ದು, ಈ ಕಾಮಗಾರಿ ಸಹ ಆರಂಭ ಗೊಂಡಿದೆ. ತಾಲೂಕಿನ 64 ಗ್ರಾಮಗಳಿಗೆ ಇದೀಗ ಜಲಜೀವನ್ ಮಿಷನ್ ಯೋಜನೆಯಡಿ ಕಾಮಗಾರಿಯನ್ನು ಅನುಷ್ಟಾನ ಗೊಳಿಸುವ ಕಾರ್ಯವನ್ನು ಕೈಗೊಳ್ಳಲಾಗಿದೆ.
ಏನಿದು ಜಲಜೀವನ್ ಮಿಷನ್: ಪ್ರತಿಯೊಬ್ಬ ವ್ಯಕ್ತಿಗೆ ಪ್ರತಿದಿನ ಕನಿಷ್ಟ 55 ಲೀಟರ್ ನಷ್ಟು ನೀರು ದಿನಬಳಕೆಗೆ ದೊರೆಯ ಬೇಕು ಎಂಬ ಮಹತ್ವಾಕಾಂಕ್ಷೆಯೊಂದಿಗೆ ಕೇಂದ್ರ ಸರ್ಕಾರ 2019ರಲ್ಲಿ ಜಲಜೀವನ್ ಮಿಷನ್ ಯೋಜನೆಯನ್ನು ಜಾರಿಗೆ ತಂದಿತು. ಈ ಯೋಜನೆಯ ಪ್ರಕಾರ ಪ್ರತಿಯೊಂದು ಗ್ರಾಮೀಣ ಪ್ರದೇಶದ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ಗುರಿಯನ್ನು ಹೊಂದಲಾಗಿದೆ.
ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮತ್ತು ಸ್ಥಳೀಯ ಗ್ರಾಪಂ ಹಾಗೂ ಸಾರ್ವಜನಿಕರ ಸಹಭಾಗಿತ್ವದಲ್ಲಿ ಯೋಜನೆಯ ವೆಚ್ಚವನ್ನು ಬರಿಸಲಾಗುವುದು. ಇಡೀ ಗ್ರಾಮಕ್ಕೆ ಹೊಸದಾಗಿ ಪೈಪ್‍ಲೈನ್ ಅಳವಡಿಸಿ ಪ್ರತಿಮನೆಗೆ ಕೊಳಾಯಿ ಹಾಕುವ ಮೂಲಕ ನೀರನ್ನು ಪೂರೈಕೆಮಾಡಲಾಗುವುದು. ಹೀಗೆ ಮೀಟರ್ ಹಾಕಿಸಿ ಪೂರೈಕೆಮಾಡುವ ನೀರಿಗೂ ಶುಲ್ಕ ವಿದಿಸಲಿದ್ದು, ಪ್ರತಿಮನೆಗೆ ಹಾಕುವ ಕೊಳಾಯಿಗೆ ಮೀಟರ್ ಅಳವಡಿಸಿ, ಬಳಕೆ ಮಾಡುವ ನೀರಿಗೆ ಇಂತಿಷ್ಟು ಎಂದು ಶುಲ್ಕ ವಿಧಿಸುವುದು ಯೋಜನೆಯ ಉದ್ದೇಶವಾಗಿದೆ.
ಹಳ್ಳ ಹಿಡಿದಿರುವ ಯೋಜನೆ: ಮಹತ್ವಾಕಾಂಕ್ಷಿ ಜಲಜೀವನ್ ಮಿಷನ್ ಯೋಜನೆ ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲವಾಗಬೇಕಿತ್ತು. ಆದರೆ, ಗುತ್ತಿಗೆದಾರರ ಕಳಪೆ ಕಾಮಗಾರಿ ಮತ್ತು ಅಧಿಕಾರಿಗಳ ಬೇಜವಾಬ್ದಾರಿ ತನದಿಂದಾಗಿ ಇಡೀ ಕಾಮಗಾರಿ ಹಳ್ಳ ಹಿಡಿದಿದ್ದು, ಇಡು ಗ್ರಾಮೀಣ ಜನರಿಗೆ ಅನುಕೂಲವಾಗುವ ಬದಲು,ಗುತ್ತಿಗೆದಾರರು ಮತ್ತು ಕೆಲ ಅಧಿಕಾರಿಗಳ ಜೇಬುತುಂಬಿಸುವ ಕಾಮಗಾರಿಯಾಗಿ ಪರಿಣಮಿಸಿದೆ.
ತಾಲೂಕಿನಲ್ಲಿ 81 ಕೋಟಿ ರೂ. ಅಂದಾಜು ವೆಚ್ಚ ಕಾಮಗಾರಿ ನಡೆಯುತ್ತಿದೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಕೆಲ ಹೆಗ್ಗಣಗಳು ಕಾಮಗಾರಿಯಲ್ಲಿ ಹಣ ಮಾಡಲು ನಿಂತಿರುವ ಪರಿಣಾಮ ತಾಲೂಕಿನಲ್ಲಿ ಕಳಪೆ ಕಾಮಗಾರಿ ನಡೆದಿದೆ ಎಂಬ ಕೂಗು ವ್ಯಾಪಕ ಗೊಳ್ಳಲು ಕಾರಣವಾಗಿದೆ. ಕಾಮಗಾರಿಯ ಗುಣಮಟ್ಟದ ಬಗ್ಗೆ ಕೆಲ ಗ್ರಾಪಂ ಅಧ್ಯಕ್ಷರು ಮತ್ತು ಸದಸ್ಯರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಕೆಲ ಸಾರ್ವಜನಿಕರು ಕಾಮಗಾರಿಯ ಬಗ್ಗೆ ತಮ್ಮ ಅಸಮಾಧಾನವನ್ನು ಮಾಧ್ಯಮಗಳ ಮೂಲಕ ವ್ಯಕ್ತಪಡಿಸುತ್ತಿದ್ದಾರಾದರೂ ಅಧಿಕಾರಿಗಳು ಏನೂ ಆಗಿಲ್ಲ ಎಂಬಂತೆ ಜಾಣಮೌನ ವಹಿಸಿದ್ದಾರೆ. ಇವರ ಈ ಮೌನ ಸಾಕಷ್ಟು ಅನುಮಾನ ಸಾರ್ವಜನಿಕರಲ್ಲಿ ಮೂಡುವಂತೆ ಮಾಡಿದೆ.
ಸಾಕಷ್ಟು ಗ್ರಾಮಗಳಲ್ಲಿ ಕಾಮಗಾರಿಯೇ ಮುಗಿದಿಲ್ಲ: ಜಲಜೀವನ್ ಮಿಷನ್ ಕಾಮಗಾರಿಯನ್ನು ಆರಂಭಿಸಿ ಹಲವಾರು ತಿಂಗಳುಗಳು ಕಳೆದಿವೆಯಾದರೂ, ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಕೇವಲ ಹತ್ತರಿಂದ ಹದಿನೈದು ಗ್ರಾಮಗಳಲ್ಲಿ ಮಾತ್ರ ಜಲಜೀವನ್ ಮಿಷನ್ ಕಾಮಗಾರಿ ಪೂರ್ಣಗೊಂಡಿದ್ದು, ಈಗ್ರಾಮಗಳಲ್ಲಿ ಸಹ ಸರಿಯಾಗಿ ನೀರು ಪೂರೈಕೆಯಾಗುತ್ತಿಲ್ಲ ಎಂಬ ಆಪಾದನೆಯಿದೆ.
ತಾಲೂಕಿನ ಸಾಕಷ್ಟು ಗ್ರಾಮಗಳಲ್ಲಿ ಗುಂಡಿ ತೋಡಿ ಹಲವು ದಿನಗಳು ಕಳೆದಿವೆಯಾದರೂ ಕಾಮಗಾರಿ ಪೂರ್ಣ ಗೊಂಡಿಲ್ಲ. ಇನ್ನೂ ಕೆಲವು ಗ್ರಾಮಗಳಲ್ಲಿ ಪೈಪ್ ಅಳವಡಿಸಿ ಹಾಗೇಬಿಟ್ಟಿದ್ದಾರೆ. ನಾಲ್ಕೈದು ತಿಂಗಳಿಂದ ಕಾಮಗಾರಿಯನ್ನು ಪೂರ್ಣಗೊಳಿಸದೇ ಹಾಗೇ ಬಿಟ್ಟಿರುವುದು ಗ್ರಾಮೀಣ ಪ್ರದೇಶದಲ್ಲಿ ಸಾಕಷ್ಟು ಸಮಸ್ಯೆಯನ್ನು ತಂದೊಡ್ಡಿದೆ. ಈ ಎಲ್ಲಾ ಅವಾಂತರಗಳ ಬಗ್ಗೆ ಅರಿವಿದ್ದೂ ಅರಿವಿಲ್ಲದಂತೆ ಅಧಿಕಾರಿಗಳು ಕಚೇರಿಯಲ್ಲಿ ಕಣ್ಮುಚ್ಚಿಕುಳಿತಿದ್ದಾರೆ.
ಹಾಳಾಗಿದೆ ರಸ್ತೆ: ಜಲಜೀವನ್ ಮಿಷನ್ ಯೋಜನೆಯಡಿ ಪೈಪ್‍ಲೈನ್ ಅಳವಡಿಸುವ ಉದ್ದೇಶದಿಂದ ಗ್ರಾಮೀಣ ಭಾಗದ ಪ್ರತಿಯೊಂದು ರಸ್ತೆಯಲ್ಲಿ ಅಗೆಯಲಾಗಿದೆ. ಹೀಗೆ ರಸ್ತೆಯನ್ನು ಅಗೆದು ಹಲವು ತಿಂಗಳುಗಳ ಕಾಲ ಹಾಗೇ ಬಿಟ್ಟಿರುವುದು ಸಾಕಷ್ಟು ಸಮಸ್ಯೆ ಎದುರಾಗುವಂತೆ ಮಾಡಿದೆ. ಕೆಲ ದಿನಗಳಿಂದ ತಾಲೂಕಿನಲ್ಲಿ ಸುರಿದ ನಿರತರ ಮಳೆಯಿಂದಾಗಿ ಇಡೀ ರಸ್ತೆ ಈ ಗುಂಡಿಯಿಂದ ಹಾಳಾಗಿದ್ದು ಇದಕ್ಕೆ ಯಾರು ಹೊಣೆ ಎಂಬ ಪ್ರಶ್ನೆ ಸಾರ್ವಜನಿಕರದ್ದಾಗಿದೆ.
7 ತಿಂಗಳಾದರೂ ಮುಗಿಯದ ಕಾಮಗಾರಿ: ತಾಲೂಕಿನಲ್ಲಿ ಕೈಗೊಂಡಿರುವ ಜಲಜೀವನ್ ಮಿಷನ್ ಕಾಮಗಾರಿ ಸುಮಾರು 7 ತಿಂಗಳುಗಳಿಂದ ನಡೆಯುತ್ತಿದೆಯಾದರೂ ಇನ್ನೂ ಪೂರ್ಣಗೊಂಡಿಲ್ಲ. ಕಾಮಗಾರಿಯನ್ನು ಕೆಲಗ್ರಾಮಗಳಲ್ಲಿ ತಿಂಗಳುಗಟ್ಟಲೆ ಹಾಗೇ ಬಿಟ್ಟಿದ್ದು, ಅರ್ಧಂಬರ್ಧ ಕಾಮಗಾರಿ ನಡೆಸಿ ಬಿಡಲಾಗಿದೆ. ಇದರಿಂದಾಗಿ ಕಾಮಗಾರಿಯ ಔಚಿತ್ಯವನ್ನೇ ಸಾರ್ವಜನಿಕರು ಪ್ರಶ್ನಿಸುತ್ತಿದ್ದು, ಪಂಚಾಯತ್‍ರಾಜ್ ಇಲಾಖೆ ಹಿರಿಯ ಅಧಿಕಾರಿಗಳು ಇತ್ತ ಗಹಮನಹರಿಸ ಬೇಕಿದೆ.
ಇನ್ನು ತಾಲೂಕಿನಲ್ಲಿ ಬೇಕಾಬಿಟ್ಟಿ ಕಾಮಗಾರಿ ನಡೆಯುತ್ತಿದೆಯಾದರೂ, ಅಧಿಕಾರಿಗಳು ಕೇಳುತ್ತಿಲ್ಲ. ಕಾಮಗಾರಿಗೆ ಕಾಲಮಿತಿ ಇಲ್ಲವೇ ಎಂಬ ಪ್ರಶ್ನೆ ಸಾರ್ವಜನಿಕರದ್ದಾಗಿದ್ದು, ಈಬಗ್ಗೆ ಪ್ರಶ್ನೆ ಮಾಡಿದರೆ ಜಿಪಂ ಇಂಜಿನಿಯರಿಂಗ್ ಇಲಾಖೆಯ ಗ್ರಾಮೀಣ ಕುಡಿಯುವ ನೀರು ಪೂರೈಕೆ ವಿಭಾಗದ ಎಇಇ ಹಾಗೂ ಅಧಿಕಾರಿಗಳು ಹಾರಿಕೆ ಉತ್ತರ ನೀಡಿ ಜಾರಿಕೊಳ್ಳುತ್ತಿದ್ದಾರೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.
ಆಂಧ್ರಮೂಲದ ಗುತ್ತಿಗೆದಾರ; ತಾಲೂಕಿನಲ್ಲಿ ನಡೆಯುತ್ತಿರುವ ಜಲಜೀವನ್ ಮಿಷನ್ ಕಾಮಗಾರಿ ಹಳ್ಳ ಹಿಡಿಯುವುದಕ್ಕೆ ಮುಖ್ಯಕಾರಣ ತಾಲೂಕಿನ 48ಕ್ಕೂ ಹೆಚ್ಚು ಗ್ರಾಮಗಳ ಗುತ್ತಿಗೆಯನ್ನು ಆಂಧ್ರಮೂಲದ ಗುತ್ತಿಗೆದಾರನಿಗೆ ನೀಡಿರುವುದೇ ಕಾರಣ ಎಂಬುದು ಸಾರ್ವಜನಿಕರ ಆರೋಪವಾಗಿದೆ. ಸಣ್ಣ ಪುಟ್ಟ ಹಾಗೂ ಸ್ಥಳೀಯ ಗುತ್ತಿಗೆದಾರರು ಕೈಗೊಂಡಿರುವ ಕಾಮಗಾರಿಗಳು ಪೂರ್ಣ ಗೊಂಡಿವೆ. ದೊಡ್ಡಮೊತ್ತದ ಗುತ್ತಿಗೆ ಪಡೆದಿರುವ ಗುತ್ತಿಗೆದಾರನ ಕಾಮಗಾರಿಗಳು ಹಳ್ಳ ಹಿಡಿಯುವಂತಾಗಿದೆ ಎಂದು ಜನತೆ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.
ನೆರೆರಾಜ್ಯದ ಗುತ್ತಿಗೆದಾರ ಬೇಕಾಬಿಟ್ಟಿ ಕಾಮಗಾರಿ ನಡೆಸುತ್ತಿದ್ದರೂ ಇಲ್ಲಿನ ಅಧಿಕಾರಿಗಳು ಏನನ್ನೂ ಕೇಳದೆ ಸುಮ್ಮನೆ ಕುಳಿತಿರುವುದು ಯಾಕೆ ಎಂದು ಪ್ರಶ್ನಿಸುತ್ತಿರುವ ಸಾರ್ವಜನಿಕರು, ಈ ಗುತ್ತಿಗೆದಾರ ಮತ್ತು ಅಧಿಕಾರಿಯ ನಡುವೆ ಏನಾದರೂ ಒಳೊಪ್ಪಂದ ನಡೆದಿದೆಯೇ ಎಂದು ಪ್ರಶ್ನಿಸುತ್ತಿದ್ದಾರೆ. ಅಧಿಕಾರಿಗಳೂ ಗುತ್ತಿಗೆದಾರ ಮಾಡಿದ್ದೇ ಕಾಮಗಾರಿ ಎಂಬಂತೆ ಸುಮ್ಮನೆ ಕುಳಿತಿರುವುದು ಸಾಕಷ್ಟು ಗುಮಾನಿಗೆ ಕಾರಣವಾಗಿದೆ.
ಕಳಪೆ ಕಾಮಗಾರಿ ಸದ್ದು: ತಾಲೂಕಿನಲ್ಲಿ ನಡೆದಿರುವ ಜಲಜೀವನ್ ಮಿಷನ್ ಕಾಮಗಾರಿಯಲ್ಲಿ ಸಾಕಷ್ಟು ಕಳಪೆ ಕಾಮಗಾರಿ ನಡೆದಿದೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬರುತ್ತಿದೆ. ತಾಲೂಕಿನ ಚಕ್ಕೆರೆ ಗ್ರಾಮದಲ್ಲಿ ನಕಲಿ ಪೈಪ್‍ಗಳನ್ನು ಅಳವಡಿಸಿ ಕಾಮಗಾರಿ ನಡೆಸಿದ್ದ ಬಗ್ಗೆ ದೂರುಗಳು ಬಂದಿದ್ದವು. ಸಾರ್ವಜನಿಕರೇ ಇವರು ಅಳವಡಿಸುತ್ತಿರುವ ಕೊಳವೆಗಳ ಗುಣಮಟ್ಟವನ್ನು ಪ್ರದರ್ಶಿಸಿ ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಛೀಮಾರಿ ಹಾಕಿದ್ದರು.
ಇನ್ನು ತಾಲೂಕಿನ ಲಾಳಾಘಟ್ಟ ಗ್ರಾಮದಲ್ಲಿ ಕಾಮಗಾರಿಯ ಸಾಕ್ಷಾತ್ ದರ್ಶನವನ್ನು ಗ್ರಾಮಸ್ಥರು ಮಾಧ್ಯಮಗಳ ಮೂಲಕ ಇಡೀ ತಾಲೂಕಿಗೆ ಪರಿಚಯ ಮಾಡಿಕೊಟ್ಟಿದ್ದಾರೆ. ಕಾಮಗಾರಿಯಿಂದಾಗಿ ಗ್ರಾಮದ ಜನತೆಗೆ ಪೂರೈಕೆಯಾಗುತ್ತಿದ್ದ ನೀರು ನಿಂತು ಹೋಗಿ ಜನತೆ ಟ್ಯಾಂಕರ್‍ಗೆ ಮೊರೆಹೋಗಿರುವ ತಾಜಾ ಉದಾಹರಣೆ ಇನ್ನೂ ನಮ್ಮ ಮುಂದೆ ಇದೆ. ಆದರೂ, ಅಧಿಕಾರಿಗಳು ಮಾತ್ರ ಏನೂ ಆಗಿಲ್ಲ ಎಂಬಂತೆ ಜಾಣ ಮೌನವಹಿಸಿದ್ದಾರೆ.
ಇನ್ನು ತಾಲೂಕಿನ ಅಕ್ಕೂರುಹೊಸಹಳ್ಳಿ ಗ್ರಾಮದಲ್ಲಿ ಸಹ ಕಳಪೆ ಗುಣಮಟ್ಟದ ಪೈಪ್‍ಗಳನ್ನು ಜಲಜೀವನ್ ಮಿಷನ್ ಕಾಮಗಾರಿಯಡಿಯಲ್ಲಿ ಅಳವಡಿಸಲಾಗುತ್ತಿದೆ ಎಂದು ಸಾರ್ವಜನಿಕರು ದೂರಿ ಕಾಮಗಾರಿಯನ್ನು ಸ್ಥಗಿತಗೊಳಿಸಿದ್ದರು. ಸುಮಾರು ಎರಡು ತಿಂಗಳು ಕಳೆದರೂ ಇನ್ನೂ ಗ್ರಾಮದಲ್ಲಿ ಯಾರೂ ಕಾಮಗಾರಿಯನ್ನು ಆರಂಭಿಸಲು ಮುಂದಾಗಿಲ್ಲ. ಅಧಿಕಾರಿಗಳು ಇದನ್ನು ಪ್ರಶ್ನಿಸುತ್ತಿಲ್ಲ, ಇದು ಅಧಿಕಾರಿಗಳು ಮತ್ತು ಗುತ್ತಿಗೆದಾರರ ಬದ್ದತೆಯನ್ನು ಪ್ರಶ್ನಿಸುವಂತಾಗಿದೆ.
ಅವ್ಯವಸ್ಥೆಯ ಆಗರವಾಗಿರುವ ಜಲಜೀವನ್ ಮಿಷನ್ ಕಾಮಗಾರಿಯನ್ನು ಯಾವಾಗ ಮುಗಿಸುತ್ತಾರೆ. ಜನರ ಮನೆಗೆ ಕೊಳಾಯಿ ಮೂಲಕ ನೀರು ಯಾವಾಗ ಬರಲಿದೆ. ಈ ಕಾಮಗಾರಿಯನ್ನು ಆರಂಭಿಸಿರುವುದು ಸಾರ್ವಜನಿಕರಿಗೆ ಒಳ್ಳೆಯದಾಗಲಿ ಎಂಬ ಉದ್ದೇಶದಿಂದಲೋ ಅಥವಾ ಕೇವಲ ಗುತ್ತಿಗೆದಾರರಿಗೆ ಲಾಭಮಾಡಿಕೊಡುವ ಉದ್ದೇಶದಿಂದಲೇ ಎಂಬ ಜಿಜ್ಞಾಸೆ ಸಾರ್ವಜನಿಕರನ್ನು ಕಾಡುತ್ತಿದೆ. ಇದಕ್ಕೆ ಅಧಿಕಾರಿಗಳು ಸರಿಯಾಗಿ ಉತ್ತರ ನೀಡಬೇಕಿದೆ. ಇನ್ನು ಕಾಮಗಾರಿಯನ್ನು ತ್ವರಿತವಾಗಿ ಆರಂಭಿಸಿ ಜನತೆಗೆ ಯೋಜನೆ ಸದ್ಬಳಕೆಯಾಗುವಂತೆ ನೋಡಿಕೊಳ್ಳ ಬೇಕಿದೆ.
ಸಮಸ್ಯೆ ಇದ್ದರೆ ಮಾಹಿತಿ ನೀಡಿ : ಎಇಇ
ಚನ್ನಪಟ್ಟಣ: ತಾಲೂಕಿನಲ್ಲಿ ನಡೆಯುತ್ತಿರುವ ಜಲಜೀವನ್ ಮಿಷನ್ ಕಾಮಗಾರಿಯನ್ನು ಇಲಾಖೆಯ ಮೇಲುಸ್ತವಾರಿಯಲ್ಲೇ ನಡೆಸಲಾಗುತ್ತಿದ್ದು, ಕಾಮಗಾರಿಯಲ್ಲಿ ಯಾವುದೇ ಲೋಪವಾಗದಂತೆ ಎಚ್ಚರ ವಹಿಸಲಾಗಿದೆ. ಸಾರ್ವಜನಿಕರಿಗೆ ಯಾವುದೇ ರೀತಿಯ ಸಮಸ್ಯೆ ಕಂಡುಬಂದಲ್ಲಿ ತಕ್ಷಣ ನನ್ನನು ಸಂಪರ್ಕಿಸಿ ದೂರು ನೀಡಬಹುದು ಎಂದು ಪಂಚಾಯತ್‍ರಾಜ್ ಇಂಜಿನಿಯರಿಂಗ್‍ನ ಗ್ರಾಮೀಣ ಕುಡಿಯುವ ನೀರು ಸರಬರಾಜು ವಿಭಾಗದ ಎಇಇ ಮಧುಸೂದನ್ ತಿಳಿಸಿದ್ದಾರೆ.
ಈ ಸಂಬಂಧ ಇವರನ್ನು ಸಂಪರ್ಕಿಸಿದಾಗ ಮಾತನಾಡಿದ ಅವರು, ಕಾಮಗಾರಿಯನ್ನು ಎರಡು ಹಂತದಲ್ಲಿ ಪ್ರಾರಂಭಿಸಲಾಗಿದೆ. ಯಾವುದೇ ಲೋಪ ಇದುವರೆಗೆ ನಡೆದಿಲ್ಲ. ನಾನು ಸಾರ್ವಜನಿಕರು ದೂರು ನೀಡಿದ ಗ್ರಾಮಗಳಿಗೆ ಭೇಟಿನೀಡಿ ಪರಿಶೀಲಿಸಿದ್ದೇನೆ. ಯಾವುದೇ ಸಮಸ್ಯೆ ಎದುರಾಗಿಲ್ಲ. ಕಾಮಗಾರಿ ಮಾರ್ಗಸೂಚಿ ಅನ್ವಯವೇ ನಡೆಯುತ್ತಿದೆ ಎಂದು ಸ್ಪಷ್ಟಪಡಿಸಿದರು.
ಕಾಮಗಾರಿ ಪೂರ್ಣಗೊಂಡ ಬಳಿಕ ಅಗೆದಿರುವ ರಸ್ತೆಯನ್ನು ಮುಚ್ಚಲಾಗುವುದು. ರಸ್ತೆಗೆಯನ್ನು ಸರಿಪಡಿಸುವ ಕೆಲಸವನ್ನು ನಮ್ಮ ಇಲಾಖೆಯ ವತಿಯಿಂದ ಕೈಗೊಳ್ಳಲಾಗುವುದು. ಸಾರ್ವಜನಿಕರು ಯಾವುದೇ ಗೊಂದಲಕ್ಕೆ ಒಳಗಾಗದೆ ಸಮಸ್ಯೆ ಕಂಡು ಬಂದಲ್ಲಿ ತಕ್ಷಣ ನನನ್ನು ಸಂಪರ್ಕಿಸಿ ಎಂದು ಅವರು ತಿಳಿಸಿದ್ದಾರೆ.
ನೂರಕ್ಕೆ ನೂರಷ್ಟು ಕಳಪೆ ಕಾಮಗಾರಿ: ಅಶೋಕ್
ತಾಲೂಕಿನಲ್ಲಿ ನಡೆಯುತ್ತಿರುವ ಜಲಜೀವನ್ ಮಿಷನ್ ಕಾಮಗಾರಿ ನೂರಕ್ಕೆ ನೂರುಷ್ಟು ಕಳಪೆ ಗುಣಮಟ್ಟದ ಕಾಮಗಾರಿಯಾಗಿದ್ದು, ಈಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಯಾಕೆ ಈರೀತಿ ಕಾಮಗಾರಿ ಮಾಡಿಸುತ್ತಿದ್ದಾರೋ ಗೊತ್ತಾಗುತ್ತಿಲ್ಲ ಎಂದು ತಾಲೂಕಿನ ಅಕ್ಕೂರು ಗ್ರಾಪಂ ಅಧ್ಯಕ್ಷ ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಕಾಮಗಾರಿಯಲ್ಲಿ ವ್ಯಾಪಕವಾಗಿ ಗೋಲ್‍ಮಾಲ್ ನಡೆದಿದೆ. ಕೆಲವೆಡೆ ಕಳಪೆ ಗುಣಮಟ್ಟದ ಪೈಪ್‍ಗಳನ್ನು ಅಳವಡಿಸಲಾಗಿದೆ. ಎರಡೂವರೆ ಅಡಿ ಆಳಕ್ಕೆ ಗುಂಡಿತೋಡುವಂತೆ ಕ್ರಿಯಾಯೋಜನೆಯಲ್ಲಿ ಸೂಚಿಸಿದೆ. ಆದರೆ ಇವರು ಒಂದು ರಿಂದ ಒಂದೂವರೆ ಅಡಿ ಆಳಕ್ಕೆ ಮಾತ್ರ ಗುಂಡಿ ತೋಡುತ್ತಿರುವುದರಿಂದ ಸಮಸ್ಯೆ ಎದುರಾಗಿದೆ. ಈ ಕಾರಣದಿಂದ ಹೆಚ್ಚು ಬಾರದ ವಾಹನ ತಿರುಗಾಡುವ ರಸ್ತೆಗಳಲ್ಲಿ ಪೈಪ್‍ಗಳು ನೀರು ಬಿಡುವುದಕ್ಕೆ ಮುನ್ನವೇ ಒಡೆದು ಹೋಗಿವೆ ಎಂದು ತಿಳಿಸಿದ್ದಾರೆ.
ಹಳ್ಳ ತೋಡಿ 6 ತಿಂಗಳಾದರೂ ಕಾಮಗಾರಿಯನ್ನು ಪೂರ್ಣಗೊಳಿಸದ ಪರಿಣಾಮ ಜನತೆ ಛೀಮಾರಿ ಹಾಕುತ್ತಿದ್ದಾರೆ. ರಸ್ತೆಗಳು ಹಾನಿಯಾಗಿದ್ದು ಈಬಗ್ಗೆ ಕೇಳಿದರೆ ಅಧಿಕಾರಿಗಳು ಉದಾಸೀನದಿಂದ ಉತ್ತಿರುಸುತ್ತಿದ್ದಾರೆ. ಪೈಪ್‍ಲೈನ್ ಕಾಮಗಾರಿಯನ್ನು ಮಗಿಸಿ ಮನೆಮನೆಗೆ ಕೊಳಾಯಿ ಹಾಕಿಸಲು 6 ತಿಂಗಳು ಬೇಕೆ ಎಂದು ಆಕ್ರೋಶವ್ಯಕ್ತಪಡಿಸಿರುವ ಅವರು, ಇದರೊಂದು ಕಳಪೆ ಕಾಮಗಾರಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ವರದಿ : ಬಿ.ಪಿ. ಚಿನ್ನಗಿರಿಗೌಡ
ಸಂಪಾದಕರು,
ಭೂಮಿಪುತ್ರ ದಿನಪತ್ರಿಕೆ,
ರಾಮನಗರ ಜಿಲ್ಲೆ.
ಮೊ: 9538745438

Leave a Reply

Your email address will not be published. Required fields are marked *