ಜೊತೆಯಲ್ಲಿದ್ದವರಿಗೆ ಕುಮಾರಸ್ವಾಮಿ ಮಗ್ಗಲು ಚೂರಿ : ಎಚ್.ಸಿ. ಬಾಲಕೃಷ್ಣ ಆರೋಪ

ರಾಮನಗರ: ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಸ್ಲೋ ಪಾಯಿಸನ್ ಇದ್ದ ಹಾಗೆ. ಅವರು ಜೊತೆಯಲ್ಲಿದ್ದವರಿಗೆ ಮಗ್ಗಲು ಚೂರಿ. ಅವರು ಚುಚ್ಚೋದೆ ಗೋತ್ತೋಗಲ್ಲ… ಜೆಡಿಎಸ್ ಪಕ್ಷಕ್ಕೆ ರಾಜ್ಯದಲ್ಲಿ ನೆಲೆಯೇ ಇಲ್ಲ ಎಂದು ಮಾಜಿ ಶಾಸಕ ಹೆಚ್.ಸಿ. ಬಾಲಕೃಷ್ಣ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಗಂಭೀರವಾಗಿ ವಾಗ್ಧಾಳಿ ನಡೆಸಿದ್ದಾರೆ.

ಬಿಡದಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಹಲವು ನಾಯಕರನ್ನು ನಂಬಿಸಿ, ವಂಚಿಸಿದ್ದಾರೆ. ಅವರ ವಂಚನೆಗೆ ಬಲಿಯಾದವರಲ್ಲಿ ನಾನು ಒಬ್ಬ. ನನ್ನ ತಮ್ಮನಿಗೆ ಜಿಪಂಗೆ ಟಿಕೇಟ್ ಕೊಟ್ಟು, ಮುಖಂಡರಿಗೆ ಮತ ಹಾಕಿಸಬೇಡಿ ಎಂದು ಹೇಳಿದ ಕುಮಾರಸ್ವಾಮಿ, ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ಕನಕಪುರದ ನಿಷ್ಠಾವಂತ ಜೆಡಿಎಸ್ ಮುಖಂಡ ಡಿ.ಎಂ. ವಿಶ್ವನಾಥ್ ಗೆ ಮತ ಹಾಕಬೇಡಿ ಎಂದು ಸಂದೇಶ ನೀಡಿದ್ದಾರೆ ಎಂದು ಆರೋಪಿಸಿದರು.

ಈಗಾಗಲೇ ಹಲವು ಶಾಸಕರು ಜೆಡಿಎಸ್ ಬಿಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಶಾಸಕರು ಕಾಂಗ್ರೆಸ್ ಸೇರಲಿದ್ದಾರೆ. ಶಾಸಕರಾದ ಪುಟ್ಟರಾಜು, ಶಿವಲಿಂಗೇಗೌಡ ಸೇರಿದಂತೆ ಹಲವು ಶಾಸಕರು ಪಕ್ಷ ಬಿಡುತ್ತಾರೆ ಎಂದು ಭವಿಷ್ಯ ನುಡಿದರು.

ಪಕ್ಷದ ಮುಖಂಡರ ಏಳಿಗೆಯನ್ನೇ ಕುಮಾರಸ್ವಾಮಿ ಸಹಿಸುವುದಿಲ್ಲ. ಪಕ್ಕದಲ್ಲಿ ಇರುವವರಿಗೆ ಮೊದಲು ಕುಮಾರಸ್ವಾಮಿ ಚುಚ್ಚುತ್ತಾರೆ. ನಾನೂ ಕೂಡ ಅವರಿಂದ ಚುಚ್ಚಿಸಿಕೊಂಡಿದ್ದೇನೆಂದು ತಿಳಿಸಿದರು.

ನನ್ನಂತೆಯೇ ಹಲವರಿಗೆ ಅವರು ಪಕ್ಕದಲ್ಲಿಟ್ಟುಕೊಂಡೇ ಬೆನ್ನಿಗೆ ಚೂರಿ ಹಾಕಿದ್ದಾರೆ. ಇದಕ್ಕೆ ಪರಿಷತ್ ಚುನಾವಣೆಯಲ್ಲಿ ಮತದಾರರು ತಕ್ಕ ಬುದ್ದಿ ಕಲಿಸಿದ್ದಾರೆ. ಇನ್ನು ಅವರೊಂದಿಗಿರುವ ಮಂದಿಯೂ ಪಕ್ಷ ಬಿಟ್ಟು ಹೊರ ಬರಲಿದ್ದು, ಅವರು ಮತ್ಯಾವ ಸರ್ಕಾರ ರಚಿಸುವ ಕನಸು ಕಾಣುತ್ತಿದ್ದಾರೆ ಎಂದು ಹೆಚ್ಡಿಕೆಯನ್ನು ಬಾಲಕೃಷ್ಣ ಕುಟುಕಿದರು.

Leave a Reply

Your email address will not be published. Required fields are marked *