ತೂಬಿನಕೆರೆಯಲ್ಲಿ ವೃದ್ದೆಯ ಹತ್ಯೆ
ಚನ್ನಪಟ್ಟಣ: ಶುಕ್ರವಾರ ಬೆಳ್ಳಂಬೆಳಗ್ಗೆ ಇಡೀ ಗ್ರಾಮವೇ ಬೆಚ್ಚಿಬಿದ್ದ ಘಟನೆ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ತೂಬಿನ ಕೆರೆಯಲ್ಲಿ ಸಂಭವಿಸಿದೆ.
ಬೆಳಗಿನ ಜಾವ ಮನೆಯೊಂದಕ್ಕೆ ನುಗ್ಗಿದ ದುಷ್ಕರ್ಮಿ, ಮನೆಯಲ್ಲಿ ಮಲಗಿದ್ದ ವೃದ್ಧೆ ಜಯಮ್ಮ(65) ರನ್ನು ಉಸಿರುಗಟ್ಟಿಸಿ ಕೊಲೆಗೈದಿದ್ದಾನೆ. ಆ ವೇಳೆ ತೋಟದಿಂದ ಮನೆಗೆ ಬಂದ ವೃದ್ಧೆಯ ಮಗ ಸಿದ್ದರಾಜು ಮೇಲೂ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಸಿದ್ದರಾಜು ಬಂದ ದ್ವಿಚಕ್ರ ವಾಹನದಲ್ಲಿಯೇ ಕೊಲೆಗಾರ ಸ್ಥಳದಿಂದ ಪರಾರಿಯಾಗಿದ್ದು, ದ್ವಿಚಕ್ರ ವಾಹನವನ್ನು ಚನ್ನಪಟ್ಟಣ ನಗರದ ಬಸ್ ನಿಲ್ದಾಣದಲ್ಲಿ ನಿಲ್ಲಿಸಿ ಹೋಗಿದ್ದಾನೆ. ಗಂಭೀರ ಗಾಯಗೊಂಡ ಸಿದ್ದರಾಜುನನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರಂಭದಲ್ಲಿ ಈ ಕೃತ್ಯವೆಸಗಿದ್ದು ಯಾರೋ ಅಪರಿಚಿತ ಎಂದೇ ಭಾವಿಸಲಾಗಿತ್ತು. ಪ್ರಕರಣ ದಾಖಲಾದ ಮೂರೇ ಗಂಟೆಯಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಅಕ್ಕೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಆ ಕೊಲೆ ಆರೋಪಿ ಬೇರೆ ಯಾರೂ ಅಲ್ಲ, ಹಿಂಬಂದಿ ಮನೆಯ ನಿವಾಸಿ!
ಸಿದ್ದರಾಜು ಅವರ ಹಿಂಬಂದಿ ಮನೆಯ ನಿವಾಸಿ ರವಿ(40) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ವೃದ್ಧೆಯ ಮನೆಯಲ್ಲಿ ಒಡವೆ ದೋಚಲು ರವಿ ಸ್ಕೆಚ್ ಹಾಕಿದ್ದ. ಶುಕ್ರವಾರ ಮುಂಜಾನೆ ಸಿದ್ದರಾಜು ತೋಟಕ್ಕೆ ಹೋಗುವುದನ್ನೇ ಕಾದು ಕುಳಿತು ಮನೆಗೆ ನುಗ್ಗಿ ಜಯಮ್ಮರನ್ನು ಕೊಂದಿದ್ದಾನೆ. ಚಿನ್ನಕ್ಕಾಗಿ ಮನೆಯನ್ನು ಜಾಲಾಡುವ ವೇಳೆ ಮನೆಗೆ ಸಿದ್ದರಾಜು ಬರುತ್ತಿದ್ದಂತೆ ಗಲಿಬಿಲಿಗೊಂಡ ರವಿ, ಬಾಗಿಲ ಹಿಂಬದಿ ಅವಿತುಕೊಂಡು ಬಲವಾದ ಆಯುಧದಿಂದ ತಲೆಗೆ ಹೊಡೆದು ಪರಾರಿಯಾಗಿದ್ದ. ಗ್ರಾಮದಲ್ಲಿನ ಸಿಸಿಟಿವಿ ಹಾಗೂ ಇನ್ನಿತ್ತರ ಮಾಹಿತಿಯನ್ನು ಕಲೆಹಾಕಿದ ಅಕ್ಕೂರು ಠಾಣೆ ಪಿಎಸ್ಐ ಶ್ರೀಕಾಂತ್ ಮತ್ತು ಸಿಬ್ಬಂದಿ ಆರೋಪಿಯನ್ನು ಬಂಧಿಸಿದ್ದಾರೆ.