ಅಂಬಿಗರ ಚೌಡಯ್ಯ ಪೀಠವು ಗಂಗಾಮತದವರ ಧರ್ಮಸ್ಥಳವಿದ್ದಂತೆ
ರಾಮನಗರ: ನಿಜಶರಣ ಅಂಬಿಗರ ಚೌಡಯ್ಯ ಪೀಠವು ಗಂಗಾಮತ ಸಮಾಜದವರ ಧರ್ಮಸ್ಥಳವಿದ್ದಂತೆ, ಸ್ವಾಭಿಮಾನಿಗಳಾದ ಕುಲ ಬಾಂಧವರು ಒಮ್ಮೆ ಭೇಟಿ ನೀಡುವ ಮೂಲಕ ಪುನೀತರಾಗುವಂತೆ ನಿಜಶರಣ ಅಂಬಿಗರ ಚೌಡಯ್ಯ ಪೀಠಾಧ್ಯಕ್ಷ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಹೇಳಿದರು.
ಮುಂದಿನ ಜನವರಿ 14,15 ರಂದು ಹಾವೇರಿ ಜಿಲ್ಲೆಯ ಸುಕ್ಷೇತ್ರ ನರಸೀಪುರ ನಿಜಶರಣ ಅಂಬಿಗರ ಚೌಡಯ್ಯ ಶರಣ ಸಂಸ್ಕೃತಿ ಉತ್ಸವ, ಜಾತ್ರೆ, ರಥೋತ್ಸವದ ಅಂಗವಾಗಿ ಬಿಡದಿಯ ಮಂಜುನಾಥ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.
ಸ್ವಾಭಿಮಾನದ ಸಂಕೇತವೇ ಅಂಬಿಗರ ಚೌಡಯ್ಯ ಎನ್ನುವ ಶಕ್ತಿ ಪೀಠ, ಈ ಶಕ್ತಿ ಪೀಠಕ್ಕೆ ಗಂಗೆ ಮಕ್ಕಳೇ ಶಕ್ತಿ. ಆದ್ದರಿಂದ ಸಮುದಾಯದ ಪ್ರತಿಯೊಬ್ಬರೂ ಶಕ್ತಿ ಪೀಠಕ್ಕೆ ಶಕ್ತಿ ತುಂಬಲಿ ತನು, ಮನ, ಧನ, ಸಮರ್ಪಣೆ ಮಾಡಬೇಕು ಇದೇ ಸಂದರ್ಭದಲ್ಲಿ ಕುಲಬಾಂಧವನ್ನು ಕೋರಿದರು.
ಗುರುಪೀಠದ 39ನೇ ಪರ್ಯಾಯ ಅಂಗವಾಗಿ ಜನಾಂಗದ ಎಲ್ಲಾ ಬಂಧುಗಳು ಸೇರಿ ಒಟ್ಟಿಗೆ ಅಂಬಿಗರ ಚೌಡಯ್ಯನವರ ರಥೋತ್ಸವಕ್ಕೆ ಸಹಕಾರ ನೀಡಬೇಕು. ಸಮಾರಂಭದಲ ಬಗ್ಗೆ ಅರಿವು ಮೂಡಿಸಿ ಎಲ್ಲರೂ ಭಾಗವಹಿಸುವಂತೆ ಪ್ರೇರೇಪಿಸಬೇಕು ಎಂದು ಕರೆಕೊಟ್ಟರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಗಂಗಾಧರ್ ಮಾತನಾಡಿ, ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡುವುದರ ಜೊತೆಗೆ, ಹೆಚ್ಚಿನ ಸಂಖ್ಯೆಯಲ್ಲಿ ಕುಲಬಾಂಧವರನ್ನು ಕರೆದುಕೊಂಡು ಬರುವುದಾಗಿ ತಿಳಿಸಿದರು.
ಶ್ರದ್ಧಾಂಜಲಿ ಕಾರ್ಯಕ್ರಮ: ಇತ್ತೀಚೆಗೆ ಅಗಲಿದ ಕನ್ನಡ ಚಿತ್ರರಂಗದ ಪವರ್ ಸ್ಟಾರ್, ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಭಾವಚಿತ್ರಕ್ಕೆ ಸ್ವಾಮೀಜಿ ಹಾಗೂ ಮುಖಂಡರು ಸೇರಿ ಪುಷ್ಪನಮನ ಸಲ್ಲಿಸಿದರು. ಇದೇ ವೇಳೆ ಇತ್ತೀಚಿಗೆ ಹುತಾತ್ಮರಾದ ಬಿಪಿನ್ ರಾವತ್ ಹಾಗೂ ಪತ್ನಿ ಮತ್ತು ಹದಿನಾಲ್ಕು ಜನ ಸೈನಿಕರ ದುರಂತ ಮರಣಕ್ಕೆ ಮೌನ ಆಚರಿಸಲಾಯಿತು.
ಜನಾಂಗದ ಮುಖಂಡ, ನಿವೃತ್ತ ಮುಖ್ಯ ಶಿಕ್ಷಕ ಸೋಗಾಲ ರಾಮು ಕಾರ್ಯಕ್ರಮ ನಿರ್ವಹಿಸಿದರು. ಗಂಗಾಮತಸ್ಥ ಸಂಘದ ಜಿಲ್ಲಾಧ್ಯಕ್ಷ ರಾಜಣ್ಣ, ಉಪಾಧ್ಯಕ್ಷ ಸೀತಾರಾಮು,ತಾಲ್ಲೂಕು ಅಧ್ಯಕ್ಷ ಕುಮಾರಸ್ವಾಮಿ, ಚಿಕ್ಕಣ್ಣ, ಕಾರ್ಯದರ್ಶಿ ಶಿವಣ್ಣ, ಜಿಲ್ಲಾ ಪ್ರತಿನಿಧಿಗಳಾದ ಪ್ರಕಾಶ್, ರಾಮು, ಯಲಕ್ಕಪ್ಪ, ಈಶ್ವರ್, ಹಾಗೂ ಜಿಲ್ಲೆಯ ಎಲ್ಲಾ ಮುಖಂಡರು ಭಾಗವಹಿಸಿದ್ದರು.
ಬಿಡದಿಯ ಮಾರುತಿ ಮೋಟರ್ಸ್ ಷೋ ರೂಮ್ ಮಾಲೀಕ ಬಿ.ಕುಮಾರ್ ಕಾರ್ಯ ಶ್ಲಾಘನೀಯ
ಜನಾಂಗದ ಮುಖಂಡ, ನಿವೃತ್ತ ಮುಖ್ಯ ಶಿಕ್ಷಕ ಸೋಗಾಲ ರಾಮು ಪ್ರಾಸ್ತಾವಿಕವಾಗಿ ಮಾತನಾಡಿ, ಬಿಡದಿಯ ಮಾರುತಿ ಮೋಟರ್ಸ್ ಷೋ ರೂಮ್ ಮಾಲೀಕರಾದ ಬಿ.ಕುಮಾರ್ ಹಾಗೂ ಸಹೋದರರು ಬಿಡದಿ ಹಾಗೂ ರಾಮನಗರ ಜಿಲ್ಲೆಯಲ್ಲಿ ಸಮುದಾಯದ ಸಂಘಟನೆಗಾಗಿ ಅಪಾರವಾಗಿ ಶ್ರಮಿಸುತ್ತಿರುವುದು ಶ್ಲಾಘನೀಯ ವಿಚಾರವಾಗಿದೆ.
ಬಿಡದಿಯ ಮಾರುತಿ ಮೋಟರ್ಸ್ ಷೋ ರೂಮ್ ಮಾಲೀಕರಾದ ಬಿ.ಕುಮಾರ್ ಅವರು ಮಧ್ಯಕರ್ನಾಟಕ ದಾವಣಗೆರೆಯಿಂದ ಬಂದು ಬಿಡದಿಯಲ್ಲಿ ಮಾರುತಿ ಮೋಟರ್ಸ್ ಷೋ ರೂಮ್ ಸ್ಥಾಪನೆ ಮಾಡಿ, ನೂರಾರು ಸ್ಥಳೀಯರಿಗೆ ಉದ್ಯೋಗ ಅವಕಾಶ ಮಾಡಿಕೊಡುವ ಜೊತೆಗೆ ನಿಜಶರಣ ಅಂಬಿಗರ ಚೌಡಯ್ಯನವರ ಆಶಯದಂತೆ ತಮ್ಮ ಕಾಯಕದಲ್ಲಿ ಕೈಲಾಸ ಕಾಣುವ ಮೂಲಕ ಸಮಾಜ ಸೇವೆಯನ್ನು ಮಾಡುತ್ತಿರುವುದು ಸಾರ್ಥಕ ಕೆಲಸವಾಗಿದೆ ಎಂದು ಸೋಗಾಲ ರಾಮು ಬಣ್ಣಿಸಿದರು.
