ಅನ್ನದಾತ

ರಚನೆ : ಡಾ.ಎಚ್.ವಿ. ಮೂರ್ತಿ, ಮೊ: 7829978273

ಅನ್ನ ಕೊಡುವ ತಂದೆ ನೀನು ಕೇಳು ರೈತಣ್ಣ
ಆತ್ಮಹತ್ಯೆ ಮಹಾಪಾಪ ತಿಳಿಯೋ ನನ್ನಣ್ಣ
ರೈತನಿದ್ದರೇನೆ ದೇಶ ರೈತನಿದ್ದರೇನೆ ಕೋಶ
ಬೆನ್ನೆಲುಬು ನೀನೆಂದು ಬಾಗಬೇಡಣ್ಣ
ಧೀರ ನೀನು ಹೇಡಿ ಬದುಕು ಬಾಳಬೇಡ ಓ ಅಣ್ಣ…

ಏರುಕಟ್ಟಿ ಮುಂದೆ ನೋಡೋ ಸಾಹಸಿ ನೀನಣ್ಣ
ಬೆನ್ನುತೋರಿ ಸಾವಿನಲ್ಲಿ ಕರಗಬೇಡ ನನ್ನಣ್ಣ
ನೀನಿದ್ದರೇನೆ ರಾಜ್ಯ ನೀನಿದ್ದರೇನೆ ಭಾಗ್ಯ
ಸಮುದಾಯವೆ ನಿನ್ನ ಹಿಂದೆ ಬರುವುದಣ್ಣ ಬೇಡ ಚಿಂತೆ
ದುಡುಕುಬೇಡ ಸಹನೆ ಇರಲಿ ಭವ್ಯಬಾಳು ನಿನದಣ್ಣ…

ಯೋಜನೆಗಳ ಬುತ್ತಿ ಐತೆ ಬಿಚ್ಚೋ ದಾರಿ ತಿಳಿಬೇಕು
ಸಾಲಗಳ ನೆರವೈತೆ ಪಡೆವ ರೀತಿ ಅರಿಬೇಕು
ಛಲವಿದ್ದರೇನೆ ಗೆಲುವು ಮನಸಿದ್ದರೇನೆ ಬಲವು
ತೆರೆದುಕೊಳ್ಳಬೇಕು ನೀನು ಲೋಕ ನೀಡುತೈತೆ ಬಾಳು
ಚುರುಕುಮತಿಯ ನೆರವು ಇರಲಿ ಸೋಲು ಬರದು ನಿನಗೆಂದು…

ಬೆವರು ಹಾರಿಸಿ ದುಡಿವಾ ದೊರೆಯೆ ಅಳುಕುಬೇಡ ಎದೆಯಲ್ಲಿ
ಮಣ್ಣ ನಂಬಿ ಬದುಕೋ ನೀನು ಧೈರ್ಯವಿರಲಿ ಮನದಲ್ಲಿ
ಸಾವೊಂದೆ ಪರಿಹಾರ ಎಂದೋರು ಯಾರಣ್ಣ
ಸಾವು ಗೆದ್ದರೇನೆ ಬಾಳು ಹೊಳೆವ ಚಿನ್ನ ಕೇಳಣ್ಣ
‘ಹಸಿವು’ ನೀಗೋ ಶಕ್ತಿ ನಿನದು ದೈವರೂಪ ನೀನಣ್ಣ…

One thought on “ಅನ್ನದಾತ

  • December 27, 2021 at 2:33 am
    Permalink

    ಸ್ವಾಗತಾರ್ಹ ಪ್ರಯತ್ನ… ಶುಭವಾಗಲಿ ರುದ್ರೇಶ್…

    Reply

Leave a Reply

Your email address will not be published. Required fields are marked *