ಡಿ.31ಕ್ಕೆ ಕರ್ನಾಟಕ ಬಂದ್ ಬೇಡ : ಎಸ್.ಟಿ. ಸೋಮಶೇಖರ್
ರಾಮನಗರ : ಡಿಸೆಂಬರ್ 31 ಕ್ಕೆ ಕರ್ನಾಟಕ ಬಂದ್ ಬೇಡ ಎಂದು ಹೇಳಿದ್ದೇವೆ. ಸರ್ಕಾರ ಎಂ ಇ ಎಸ್ ಸಂಘಟನೆ ಬಗ್ಗೆ ಕಠಿಣ ಕ್ರಮ ವಹಿಸುತ್ತದೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು.
ಚನ್ನಪಟ್ಟಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಈ ಬಗ್ಗೆ ಸಿಎಂ ಕೂಡ ಪ್ರತಿಕ್ರಿಯೆ ನೀಡಿದ್ದಾರೆ, ಈಗ ಬೆಳಗಾವಿ ಶಾಂತವಾಗಿದೆ. ಆದರೆ ಈಗ ಮತ್ತೆ ನಾವು ಬಂದ್ ಮಾಡಿ ಕೆದಕುವುದು ಬೇಡವೆಂದು ಮನವಿ ಮಾಡಿದರು.
ಜನವರಿಯಲ್ಲಿ ಸಿಎಂ ಬೊಮ್ಮಾಯಿ ಬದಲಾವಣೆ ವಿಚಾರದ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ ಸೋಮಶೇಖರ್,
ಈಗಾಗಲೇ ಪಕ್ಷದ ರಾಜ್ಯಾಧ್ಯಕ್ಷ ಕಟೀಲ್ ರವರು, ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರು ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಇಲ್ಲ ಎಂದಿದ್ದಾರೆ.
2023 ರ ಚುನಾವಣೆ ಕೂಡ ಬೊಮ್ಮಾಯಿ ಅವರ ನೇತೃತ್ವದಲ್ಲಿ ನಡೆಯಲಿದೆ ಎಂದರು.
ಅವರು ಹೇಳಿದ ಮೇಲೆ ಅದೇ ಸುಪ್ರೀಂ. ಹಾಗಾಗಿ ಈ ವಿಚಾರದ ಬಗ್ಗೆ ಗೊಂದಲ ಬೇಡವೆಂದರು. ನಾನು ಬಿಜೆಪಿಯಲ್ಲಿಯೇ ಇದ್ದೇನೆ : ಪಕ್ಷ ಬಿಡುವ ಬಗ್ಗೆ ಸ್ಪಷ್ಟನೆ ನೀಡಿದ ಎಸ್.ಟಿ. ಸೋಮಶೇಖರ್, ಸದ್ಯ ನಾನು ಬಿಜೆಪಿಯಲ್ಲಿ ಇದ್ದೇನೆ, ಮುಂದೆಯೂ ಇರುತ್ತೇನೆ. ನಾನು ಬಿಜೆಪಿ ಪಕ್ಷ ಬಿಡುವ ಸಂದರ್ಭ ಇಲ್ಲವೆಂದರು. ಕಾರಣಾಂತರದಿಂದ ಕಾಂಗ್ರೆಸ್ ಬಿಡಬೇಕಾಯ್ತು. ಆದರೆ ಮತ್ತೆ ಕಾಂಗ್ರೆಸ್ ಗೆ ಹೋಗುವ ಪ್ರಮೇಯ ಇಲ್ಲ. ನನಗೆ ಬಿಜೆಪಿ ಪಕ್ಷ ಶಾಸಕನಾಗಿ ಮಾಡಿದೆ, ಮಂತ್ರಿ ಮಾಡಿದೆ ಎಂದರು. ಡಿ.ಕೆ.ಶಿವಕುಮಾರ್ ರವರು ನಮಗೆ ಆತ್ಮೀಯ ಸ್ನೇಹಿತರು. ನಮ್ಮ ಅವರ ವಯಕ್ತಿಕ ವಿಶ್ವಾಸ ಚೆನ್ನಾಗಿದೆ. ಆದರೆ ರಾಜಕೀಯ ವಿಶ್ವಾಸ ನಮಗೆ ಇಲ್ಲ. ನನ್ನ ರಾಜಕೀಯ ಬೆಳವಣಿಗೆಗೆ ಅವರು ಸಹಾಯ ಮಾಡಿದ್ದಾರೆ.
ಅವರು ನನಗೆ ಕಾಂಗ್ರೆಸ್ ಬಾರಯ್ಯ ಎಂದು ಕರೆದಿಲ್ಲ. ನಾನು ಸಹ ಬರ್ತೇನೆಂದು ಎಲ್ಲೂ ಹೇಳಿಲ್ಲವೆಂದು ಸ್ಪಷ್ಟಪಡಿಸಿದರು.