ತಾಲೂಕಿನಲ್ಲೆ ಕಲ್ಯಾ ವಿಎಸ್‍ಎಸ್‍ಎನ್ ನಂ.1 ಸ್ಥಾನದಲ್ಲಿದೆ : ವಿಶ್ವನಾಥ್
ಮಾಗಡಿ : ಕಲ್ಯಾ ವಿಎಸ್‍ಎಸ್‍ಎನ್ ಸಂಘವು ತಾಲೂಕಿನಲ್ಲೆ ಪ್ರಥಮ ಸ್ಥಾನದಲ್ಲಿದ್ದು ಸದಸ್ಯರುಗಳ ಸಹಕಾರದಿಂದ ಲಾಭದಾಯಕವಾಗಿ ನಡೆಯುತ್ತಿದೆ ಎಂದು ಕಲ್ಯಾ ವಿಎಸ್‍ಎಸ್‍ಎನ್ ಅಧ್ಯಕ್ಷ ವಿಶ್ವನಾಥ್ ಹೇಳಿದರು.
ತಾಲೂಕಿನ ಕಲ್ಯಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 2020-21ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಎಲ್ಲೂ ಕೂಡ 2 ಹಂತಸ್ಥಿನ ಭವ್ಯವಾದ ಸ್ವಂತ ಕಟ್ಟಡವನ್ನು ಹೊಂದಿಲ್ಲ, ನಿರ್ದೇಶಕರುಗಳ ಸಹಕಾರದಿಂದ ಅತ್ಯುತ್ತಮ ಕಟ್ಟಡವನ್ನು ಕಟ್ಟಿಸಿದ್ದು ಇನ್ನು ಕೆಲವೇ ತಿಂಗಳಲ್ಲಿ ಉದ್ಘಾಟನೆಗೊಳ್ಳಲಿದೆ, ಸಂಘದಲ್ಲಿ ಯಾವುದೇ ಸಮಾರಂಭ ಮಾಡಿದರೂ ಕೂಡ ನಮ್ಮ ಕಟ್ಟಡದಲ್ಲೆ ಮಾಡುವಂತ ವ್ಯವಸ್ಥೆ ಇದೆ, ಇದು ದೊಡ್ಡ ಸಾಧನೆಯಾಗಿದೆ, 1247 ಸದಸ್ಯರುಗಳಿದ್ದು 7 ಕೋಟಿ 43 ಲಕ್ಷ ಕೆಸಿಸಿ ಸಾಲ ನೀಡಲಾಗಿದೆ, ಸುಮಾರು 83 ರೈತ ಸದಸ್ಯರಿಗೆ 1 ಕೋಟಿ 3 ಲಕ್ಷ ಬಾಕಿ ಬೆಳೆ ಸಾಲ ಬರಬೇಕಾಗಿದೆ, ಸ್ವಸಹಾಯ ಸಂಘಗಳಿಗೆ 26 ಲಕ್ಷ ಸಾಲ ನೀಡಿದ್ದು ಇನ್ನು 7 ಸಂಘಗಳಿಗೆ 34 ಲಕ್ಷ ಸಾಲದ ಪ್ರಸ್ತಾವನೆ ಸಲ್ಲಿಸಲಾಗಿದೆ, 82 ಲಕ್ಷ ಚಿನ್ನಾಭರಣ ಸಾಲ ನೀಡಲಾಗಿದೆ, ಪಡಿತರ ಆಹಾರ ಕೃಷಿ ಉಪಕರಣಗಳು ಮಾರಾಟ ಮಾಡಲಾಗುತ್ತಿದ್ದು 2020-21ನೇ ಸಾಲಿನಲ್ಲಿ 17 ಲಕ್ಷದ 75 ಸಾವಿರ ನಿವ್ವಳ ಲಾಭ ಬಂದಿದ್ದು ತಾಲೂಕಿನಲ್ಲೆ ಉತ್ತಮ ವಹಿವಾಟನ್ನು ಸಂಘ ನಡೆಸುತ್ತಿದ ಎಂದು ತಿಳಿಸಿದರು.
ತಾ.ಪಂ. ಮಾಜಿ ಅಧ್ಯಕ್ಷ ನಾರಾಯಣಪ್ಪ ಮಾತನಾಡಿ, ತಾಲೂಕಿನಲ್ಲೆ ಉತ್ತಮ ಸಂಘ ಎಂಬ ಹೆಸರನ್ನು ಗಳಿಸಿದ್ದು ಅತೀ ಹೆಚ್ಚು ಕೆಸಿಸಿ ಸಾಲವನ್ನು ನಮ್ಮ ಸಂಘದ ವತಿಯಿಂದ ನೀಡಲಾಗುತ್ತಿದೆ, ಸಂಘದ ಲಾಭದಲ್ಲಿ ಉತ್ತಮ ಕಟ್ಟಡವನ್ನು ಕಟ್ಟಲಾಗಿದೆ, ಸ್ವಂತ ಕಟ್ಟಡ ಹೊಂದಿರುವ ಸಾಲಿನಲ್ಲಿ ಕಲ್ಯಾ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ, ಅಧಿಕಾರ ಇದ್ದಾಗ ರೈತರಿಗೆ ಅನುಕೂಲವಾಗುವ ರೀತಿ ಮಾಡಬೇಕು, 2 ಲಕ್ಷದ ವರೆಗೂ ಸಾಲ ಹೆಚ್ಚಿಸುವ ಬಗ್ಗೆ ಬಿಡಿಸಿಸಿ ಬ್ಯಾಂಕ್ ಜೊತೆ ಮಾತನಾಡಲಾಗಿದೆ ಎಂದು ತಿಳಿಸಿದರು.
2021 ನೇ ಸಾಲಿನ ಅಂದಾಜು ಬಜೆಟ್ ಮಂಜೂರಾತಿ ಮಾಡಲಾಯಿತು, ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಯಿತು, ಕಾರ್ಯಕ್ರಮದಲ್ಲಿಸಂಘದುಪಾಧ್ಯಕ್ಷ ಕಮಲಮ್ಮ, ನಿರ್ದೇಶಕರಾದ ಹೆಚ್.ಸಿ.ಪುಟ್ಟಹೊನ್ನಯ್ಯ, ಚಿಕ್ಕೇಗೌಡ, ವೆಂಕಟೇಸ್, ಎಂ.ಎಸ್.ಮಲ್ಲಿಕಾರ್ಜುನಸ್ವಾಮಿ, ಹೆಚ್.ಜಿ.ನೀಲಾಂಭಿಕೆ, ಹೆಚ್.ಡಿ.ಉಟ್ಟಸ್ವಾಮಿ, ಬಿ.ಆರ್.ವಾಸುದೇವಮೂರ್ತಿ, ಮುತ್ತುರಾಜು, ಮುಖ್ಯಕಾರ್ಯನಿರ್ವಹಣಾಧಿಕಾರಿ ಬಿ.ಸ್ವಾಮಿ ಸೇರಿದಂತೆ ಇತರರು ಭಾಗವಹಿಸಿದ್ದರು.