ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯಬೇಕು : ಟಿ. ತಿಮ್ಮೇಗೌಡ
ರಾಮನಗರ: ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ ದೊರಕಬೇಕು ಎಂದು ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಟಿ.ತಿಮ್ಮೇಗೌಡ ತಿಳಿಸಿದರು.
ರಾಮನಗರದ ಹೊರ ವಲಯದ ಜಾನಪದ ಲೋಕದಲ್ಲಿ ಕರ್ನಾಟಕ ಜಾನಪದ ಪರಿಷತ್ತು, ಜಾನಪದ ಲೋಕ ಸಹಯೋಗದಲ್ಲಿ ನಾಡೋಜ ಜಿ.ನಾರಾಯಣ ಅವರ ನೆನಪಿನ ಕಾರ್ಯಕ್ರಮ ಗ್ರಾಮೀಣ ಆಟಗಳ ಉತ್ಸವ 2021 ಕ್ರೀಡಾ ಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಭಾರತ ಗ್ರಾಮಗಳಿಂದ ಕೂಡಿದ್ದು, ಹಲವು ವೈವಿಧ್ಯತೆಗಳಿಗೆ ಸಾಕ್ಷಿಯಾಗಿದೆ. ಇಂದು ಗ್ರಾಮೀಣ ಆಟಗಳಾದ ಹಳ್ಳಿಗುಳಿ ಮನೆ, ಕಣ್ಣಾಮುಚ್ಚಾಲೆ, ಲಗೋರಿ, ಚಿನ್ನಿದಾಂಡು, ಕುಂಟೋಬಿಲ್ಲೆ, ಹಗ್ಗ ಜಗ್ಗಾಟ, ಚಕ್ರ ಬಂಡಿ ಇನ್ನು ಮುಂತಾದ ಆಟಗಳು ಜನಮಾನಸದಿಂದ ಮರೆಯಾಗುತ್ತಿವೆ. ಗ್ರಾಮೀಣ ಆಟಗಳು ಭಾರತೀಯ ಸಂಸ್ಕøತಿಯ ಪ್ರತೀಕವಾಗಿವೆ. ಇವುಗಳನ್ನು ಮುಂದಿನ ಪೀಳಿಗೆಗೆ ಉಳಿಸಬೇಕಾಗಿದ್ದು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ದಿಸೆಯಲ್ಲಿ ಜಾನಪದ ಲೋಕ ಪ್ರತಿ ವರ್ಷ ನಾಡೋಜ ಜಿ.ನಾರಾಯಣ ಅವರ ಹೆಸರಿನ ಜ್ಞಾಪಕಾರ್ಥವಾಗಿ ಗ್ರಾಮೀಣ ಆಟಗಳ ಉತ್ಸವವನ್ನು ಆಯೋಜಿಸುತ್ತಾ ಬಂದಿದೆ.
ಗ್ರಾಮೀಣ ಆಟಗಳಿಗೆ ಸರಕಾರ ಪ್ರೋತ್ಸಾಹ ನೀಡುವ ಸಲುವಾಗಿ ಗ್ರಾಮ ಪಂಚಾಯಿತಿ ನಿಯಮಗಳಲ್ಲಿ ಬದಲಾವಣೆ ಮಾಡಿ ಗ್ರಾಮೀಣ ಆಟಗಳ ಆಯೋಜನೆಗೆ ಅವಕಾಶ ಮಾಡಿಕೊಟ್ಟಿದೆ. ಗ್ರಾಮ ಮಟ್ಟದಲ್ಲಿ ಸಹಕಾರ ನೀಡಲು ಮುಂದಾಗಿದೆ. ಯುವಕರು ಶಾಲಾ ವಿದ್ಯಾರ್ಥಿಗಳು, ಯುವತಿಯರು ಗ್ರಾಮೀಣ ಆಟಗಳಲ್ಲಿ ಪಾಲ್ಗೊಂಡು ಸರಕಾರದ ಸವಲತ್ತು ಪಡೆದುಕೊಂಡು ಮುಂದಿನ ಪೀಳಿಗೆಗೆ ಗ್ರಾಮೀಣ ಆಟಗಳನ್ನು ಪರಿಚಯಿಸಲು ಮುಂದಾಗಬೇಕು. ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗ್ರಾಮೀಣ ಕ್ರೀಡೆಗಳ ಸ್ವರ್ಧೆ ಆಯೋಜಿಸಬೇಕು ಎಂದು ಒತ್ತಾಯಿಸಿದರು.
ಕ್ರೀಡೆಯಲ್ಲಿ ಸೋಲು- ಗೆಲುವು ಮುಖ್ಯವಲ್ಲ, ಕ್ರೀಡೆಯಲ್ಲಿ ಭಾಗವಹಿಸುವುದೆ ಅತಿಮುಖ್ಯ, ಗ್ರಾಮೀಣ ಆಟಗಳಲ್ಲಿ ಸೋತರು ಸಹ ಬೇಸರ ಉಂಟಾಗುವುದಿಲ್ಲ. ಆ ಆಟಗಳಲ್ಲಿ ಭಾಗವಹಿಸುವುದೆ ಸಂತೋಷ ವಿಚಾರ, ಗ್ರಾಮೀಣ ಕ್ರೀಡೆಗಳು ಕೇವಲ ಜಾನಪದ ಲೋಕಕ್ಕೆ ಸೀಮಿತವಾಗಬಾರದು, ಇಲ್ಲಿ ಆಟ ಆಡಿದ ಮಕ್ಕಳು ತಮ್ಮ ಗ್ರಾಮಗಳಲ್ಲಿಯೂ ಆಟವಾಡುವ ಮೂಲಕ ಈ ಕ್ರೀಡೆಗಳನ್ನು ಜೀವಂತವಾಗಿಡಬೇಕು ಎಂದು ತಿಳಿಸಿದರು.
ಅಖಿಲ ಭಾರತ ಜಾನಪದ ಮತ್ತು ಬುಡಕಟ್ಟು ಪರಿಷತ್ತು ಅಧ್ಯಕ್ಷ ನಿರ್ಮಲ್ ವೈದ್ಯ ಮಾತನಾಡಿ, ಜಾನಪದ ಲೋಕ ಜಾನಪದ ಕಲಾವಿದರಿಗೆ ಪ್ರೋತ್ಸಾಹ ನೀಡುವಲ್ಲಿ ಮುಂಚೂಣಿಯಲ್ಲಿದೆ. ಗ್ರಾಮೀಣ ಕೀಡಾ ಕೂಟಗಳು ಗ್ರಾಮಗಳಲ್ಲಿಯೂ ನಡೆಯಬೇಕು. ಗ್ರಾಮೀಣ ಪ್ರದೇಶದಲ್ಲಿ ಜನಿಸಿದವರು ದೇಶದ ಆಡಳಿತ ಚುಕ್ಕಾಣಿ ಹಿಡಿದಿದ್ದಾರೆ. ಗ್ರಾಮಗಳ ಅಭಿವೃದ್ಧಿ ಬಗ್ಗೆ ಅವರಿಗೆ ಕಾಳಜಿ ಇದೆ. ಭಾರತ ಶೇ.80 ರಷ್ಟು ಗ್ರಾಮೀಣ ಪ್ರದೇಶಗಳಿಂದ ಕೂಡಿದ್ದು, ಗ್ರಾಮೀಣ ಪ್ರದೇಶಗಳು ಅಭಿವೃದ್ಧಿಯಾದರೆ ಇಡೀ ಭಾರತ ದೇಶ ಅಭಿವೃದ್ಧಿಯಾದಂತೆ ಎಂಬುದು ಅವರಿಗೆ ತಿಳಿದಿದೆ ಎಂದರು.
ಕರ್ನಾಟಕ ಸಾಹಸ ಕಲಾ ಅಕಾಡೆಮಿ ಸಂಸ್ಥಾಪಕ ಕಾರ್ಯದರ್ಶಿ ಹಾಸನ ರಘು ಮಾತನಾಡಿ, ರಾಮನಗರ ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ರಾಜ್ಯ ಮಟ್ಟದ ಗ್ರಾಮೀಣ ಕ್ರೀಡಾ ಕೂಟ ಆಯೋಜನೆ ಮಾಡುವ ಉದ್ದೇಶವಿದೆ. ಕುದುರೆ ಓಟ, ಕಂಬಳ ಹಾಗೂ ಕೆಸರುಗದ್ದೆ ಓಟದ ಸ್ಫರ್ದೆ ಆಯೋಜಿಸುವ ಆಲೋಚನೆ ಇದ್ದು, ಕಣ್ವ ಡ್ಯಾಮ್ ಬಳಿ ಉತ್ತಮ ಜಾಗವಿದ್ದು, ಈ ಕ್ರೀಡೆಗಳನ್ನು ಆಯೋಜಿಸಬಹುದಾಗಿದೆ. ಜಾನಪದ ಲೋಕ ಇದಕ್ಕೆ ನೆರವಾಗಬೇಕು ಎಂದು ಮನವಿ ಮಾಡಿದರು.
ವೇದಿಕೆಯಲ್ಲಿ ಜಾನಪದ ಲೋಕದ ಅಧ್ಯಕ್ಷ ಟಿ.ತಿಮ್ಮೇಗೌಡ, ಇಗ್ಗಲೂರು ಸರ್ಕಾರಿ ಶಾಲಾ ಮಕ್ಕಳ ಕಣ್ಣಾ ಮುಚ್ಚಾಲೆ ಆಟಕ್ಕೆ ಚಾಲನೆ ನೀಡುವ ಮೂಲಕ ಗ್ರಾಮೀಣ ಆಟಗಳ ಉತ್ಸವಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ನಾಡೋಜ ಜಿ.ನಾರಾಯಣ ಅವರ ಸುಪುತ್ರ ಡಾ.ಎನ್ ರಾಘವೇಂದ್ರ, ಜಿಲ್ಲಾ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಸು.ತಾ.ರಾಮೇಗೌಡ, ಅಖಿಲ ಕರ್ನಾಟಕ ಜಾನಪದ ಕಲಾವಿದರ ಒಕ್ಕೂಟದ ಅಧ್ಯಕ್ಷ ಜೋಗಿಲ ಸಿದ್ದರಾಜು, ಜಾನಪದ ಲೋಕದ ಕ್ಯೂರೇಟರ್ ಡಾ.ಯು.ಎಂ.ರವಿ, ರಂಗ ಸಹಾಯಕ ಎಸ್. ಪ್ರದೀಪ್ ಇದ್ದರು.
ಮಕ್ಕಳ ಜೊತೆ ಬೆರೆತ ತಿಮ್ಮೆಗೌಡ : ಚಕ್ರ ಬಂಡಿ ಹೊಡೆಯುವ ಆಟದ ಸ್ಫರ್ದೆಯಲ್ಲಿ ಭಾಗವಹಿಸಿದ ಮಕ್ಕಳ ಜೊತೆ ತಾವು ಒಬ್ಬರಾಗಿ ಚಕ್ರ ಬಂಡಿ ಹೊಡೆಯುವ ಮೂಲಕ ಮಕ್ಕಳಿಗೆ ಹುರಿದುಂಬಿಸುತ್ತಾ ಅವರ ಜೊತೆ ಚಕ್ರ ಬಂಡಿ ಹೊಡೆದು ಆಟದಲ್ಲಿ ತಲ್ಲೀನರಾದರು. ನಂತರ ಹಳ್ಳಿಗುಳಿ ಮನೆ, ಅಣ್ಣೆ ಕಲ್ಲಾಟ, ಲಗೋರಿ ಮುಂತಾದ ಆಟಗಳ ಸ್ಫರ್ದೆಗಳ ಬಳಿ ಹೋಗಿ ಮಕ್ಕಳ ಜೊತೆ ಆಟವಾಡಿದರು.

