ದೇವೇಗೌಡರಿಗಾಗಿ ನನ್ನ ರಾಜಕೀಯ ಜೀವನ ತ್ಯಾಗ ಮಾಡಿದ್ದನ್ನು ಜೆಡಿಎಸ್ ನಾಯಕರು ಅರಿತು ಕೊಳ್ಳಬೇಕು – ಬಾಲಕೃಷ್ಣ

ರಾಮನಗರ : ಬಿಜೆಪಿಯಲ್ಲಿದ್ದಾಗ ನನ್ನ ಅಕ್ಕ ಪಕ್ಕ ಕೂರುತ್ತಿದ್ದ ಸದಾನಂದ ಗೌಡ ಹಾಗೂ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಗಳಾದರು. ಕಾಗೇರಿಯವರು ಸ್ಪೀಕರ್ ಆಗಿದ್ದಾರೆ. ಅಂದು ಬಿ.ಎಸ್.ಯಡಿಯೂರಪ್ಪ ಅವರ ಮಾತನ್ನು ಪಾಲಿಸಿದ್ದರೆ ಇಂದು ನನ್ನ ರಾಜಕೀಯ ಸ್ಥಾನ-ಮಾನ ಬೇರಯದ್ದೇ ಆಗಿರುತ್ತಿತ್ತು. ಆದರೆ, ದೇವೇಗೌಡ ಅವರಿಗಾಗಿ ನನ್ನ ರಾಜಕೀಯ ಜೀವನ ತ್ಯಾಗ ಮಾಡಿದ್ದನ್ನು ಜೆಡಿಎಸ್ ನಾಯಕರು ಅರಿಯಬೇಕು ಎಂದು ಮಾಜಿ ಶಾಸಕ ಎಚ್ .ಸಿ.ಬಾಲಕೃಷ್ಣ ತಿಳಿಸಿದರು.
ಬಿಡದಿ ಬಳಿ ಇರುವ ಖಾಸಗಿ ರೆಸಾರ್ಟ್‍ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾತನೂರು ವಿಧಾನಸಭಾ ಕ್ಷೇತ್ರದಿಂದ ಡಿ.ಕೆ.ಶಿವಕುಮಾರ್, ಎಚ್.ಡಿ.ದೇವೇಗೌಡರ ವಿರುದ್ದ ಸ್ಪರ್ಧಿಸುವಂತೆ ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ ಹೇಳಿದ್ದರು. ಆದರೆ ಎಚ್.ಡಿ.ದೇವೇಗೌಡರ ಮೇಲಿದ್ದ ಗೌರವದಿಂದ ನಾನು ಸ್ಪರ್ಧಿಸಲಿಲ್ಲ ಎಂದರು.
ಎಚ್.ಡಿ.ಕುಮಾರಸ್ವಾಮಿಯವರು ರಾಜಕೀಯಕ್ಕೆ ಬರುವ ಮುನ್ನ ನಾನು ಶಾಸಕನಾಗಿದ್ದೆ. ನಾನು ಬಿಜೆಪಿ ತೊರೆದು ಜೆಡಿಎಸ್ ಸೇರಿದ ವೇಳೆ ಮಾಗಡಿ ಕ್ಷೇತ್ರದಲ್ಲಿ ಜಾತ್ಯಾತೀತ ಜನತಾ ದಳಕ್ಕೆ ನೆಲೆ ಇರಲಿಲ್ಲ. ಎಚ್.ಡಿ.ದೇವೇಗೌಡರು ಲೋಕಸಭೆಗೆ ಸ್ಪರ್ಧಿಸಿದಾಗ ಮಾಗಡಿ ಕ್ಷೇತ್ರದಲ್ಲಿ 11 ಸಾವಿರ ಲೀಡ್ ಕೊಡಿಸಿದ್ದೇನೆ. ಬಿಜೆಪಿಯಲ್ಲಿದ್ದ ಎಂ.ಶ್ರೀನಿವಾಸ್ ಅವರನ್ನು ಜೆಡಿಎಸ್‍ಗೆ ಕರೆತಂದಿದ್ದೆ ನಾನು. ಆದರೆ, ದೇವೇಗೌಡರು ಗೆದ್ದ ನಂತರ ಶ್ರೀನಿವಾಸ್ ಅವರನ್ನು ಮೂಲೆಗುಂಪು ಮಾಡಿದರು ಎಂದು ಬೇಸರ ವ್ಯಕ್ತಪಡಿಸಿದರು.
ಕುಮಾರಸ್ವಾಮಿ ಮಗ್ಗಲು ಚೂರಿ : ಮಾಜಿ ಸಿಎಂ ಕುಮಾರಸ್ವಾಮಿ ಸ್ಲೋ ಪಾಯಿಸನ್ ಇದ್ದಂತೆ ಅವರು ಜೊತೆಯಲ್ಲಿದ್ದವರಿಗೆ ಮಗ್ಗಲು ಚೂರಿ. ಅವರು ಚುಚ್ಚೋದೆ ಗೋತ್ತಾಗುವುದಿಲ್ಲ. ಪಕ್ಷದ ಮುಖಂಡರ ಏಳಿಗೆಯನ್ನೇ ಅವರು ಸಹಿಸುವುದಿಲ್ಲ. ಪಕ್ಕದಲ್ಲಿ ಇರುವವರಿಗೆ ಮೊದಲು ಕುಮಾರಸ್ವಾಮಿ ಚುಚ್ಚುತ್ತಾರೆ. ನಾನೂ ಕೂಡ ಅವರಿಂದ ಚುಚ್ಚಿಸಿಕೊಂಡಿದ್ದೇನೆ ಎಂದು ಟೀಕಿಸಿದರು.

ಈಗಾಗಲೇ ಹಲವು ನಾಯಕರನ್ನು ನಂಬಿಸಿ, ವಂಚಿಸಿದ್ದಾರೆ. ಅವರ ವಂಚನೆಗೆ ಬಲಿಯಾದವರಲ್ಲಿ ನಾನು ಒಬ್ಬ. ನನ್ನ ತಮ್ಮನಿಗೆ ಜಿಪಂ ಟಿಕೆಟ್ ಕೊಟ್ಟು, ಮುಖಂಡರಿಗೆ ಮತ ಹಾಕಿಸಬೇಡಿ ಎಂದು ಕುಮಾರಸ್ವಾಮಿ ಹೇಳಿದ್ದರು. ಈಗ ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ಕನಕಪುರದ ನಿಷ್ಠಾವಂತ ಜೆಡಿಎಸ್ ಮುಖಂಡ ಡಿ.ಎಂ. ವಿಶ್ವನಾಥ್ ಗೆ ಮತ ಹಾಕಬೇಡಿ ಎಂದು ಸಂದೇಶ ನೀಡಿದ್ದಾರೆ. ಎಂದು ಆರೋಪಿಸಿದರು.
ನನ್ನಂತೆಯೇ ಹಲವರಿಗೆ ಅವರು ಪಕ್ಕದಲ್ಲಿಟ್ಟುಕೊಂಡೇ ಬೆನ್ನಿಗೆ ಚೂರಿ ಹಾಕಿದ್ದಾರೆ. ಇದಕ್ಕೆ ಪರಿಷತ್ ಚುನಾವಣೆಯಲ್ಲಿ ಮತದಾರರು ತಕ್ಕ ಬುದ್ಧಿ ಕಲ್ಪಿಸಿದ್ದಾರೆ.. ಇನ್ನು ಅವರೊಂದಿಗಿರುವ ಮಂದಿಯೂ ಪಕ್ಷ ಬಿಟ್ಟು ಹೊರ ಬರಲಿದ್ದು, ಅವರು ಮತ್ಯಾವ ಸರ್ಕಾರ ರಚಿಸುವ ಕನಸು ಕಾಣುತ್ತಿದ್ದಾರೆ ಎಂದು ಕುಮಾರಸ್ವಾಮಿ ಅವರನ್ನು ಕುಟುಕಿದರು.
ಈಗಾಗಲೇ ಹಲವು ಶಾಸಕರು ಜೆಡಿಎಸ್ ಬಿಟ್ಟಿದ್ದಾರೆ.. ಮುಂದಿನ ದಿನಗಳಲ್ಲಿ ಇನ್ನಷ್ಟು ಶಾಸಕರು ಕಾಂಗ್ರೆಸ್ ಸೇಲಿದ್ದಾರೆ. ಶಾಸಕರಾದ ಪುಟ್ಟರಾಜು, ಶಿವಲಿಂಗೇಗೌಡ ಸೇರಿದಂತೆ ಹಲವು ಶಾಸಕರು ಪಕ್ಷ ಬಿಡುತ್ತಾರೆ ಎಂದು ಬಾಲಕೃಷ್ಣ ಭವಿಷ್ಯ ನುಡಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಗಾಣಕಲ್ ನಟರಾಜು, ಅಬ್ಬನಕುಪ್ಪೆ ರಮೇಶ್, ಬೆಟ್ಟಸ್ವಾಮಿ, ಚಂದ್ರಶೇಖರ್, ಕಾವ್ಯ, ಗಿರಿಧರ್ ಇದ್ದರು.

Leave a Reply

Your email address will not be published. Required fields are marked *