ವಿದ್ಯಾರ್ಥಿಗಳೇ ನೀವು ಜನಿಸಿರುವುದು ಇತಿಹಾಸ ಓದುವುದಕ್ಕಲ್ಲ, ಇತಿಹಾಸ ನಿರ್ಮಿಸಲು ಎಂಬುದನ್ನು ಅರಿತುಕೊಳ್ಳಿ : ಡಿವೈಎಸ್‍ಪಿ ಕೆ.ಎನ್. ರಮೇಶ್
ಚನ್ನಪಟ್ಟಣ (hairamanagara.in) : ಪ್ರತಿಯೊಬ್ಬ ವಿದ್ಯಾರ್ಥಿಯೂ ಜ್ಞಾನದ ಹಸಿವನ್ನು ನೀಗಿಸಿಕೊಳ್ಳಲು ಶ್ರಮಿಸಬೇಕು ಎಂದು ಪೊಲೀಸ್ ಉಪ ಅಧೀಕ್ಷ ಕೆ.ಎನ್.ರಮೇಶ್ ತಿಳಿಸಿದರು.
ಪಟ್ಟಣದ ಶತಮಾನೋತ್ಸವ ಭವನದಲ್ಲಿ ಕೆ. ಎನ್ ರಮೇಶ್ ಚಾರಿಟಬಲ್ ಟ್ರಸ್ಟ್ ವತಿಯಿಂದ ನಗರ ವ್ಯಾಪ್ತಿಯ ಪ್ರೌಢಶಾಲೆಗಳಲ್ಲಿ ಓದುತ್ತಿರುವ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ವಿಶೇಷ ತರಗತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಎಸ್ಸೆಸ್ಸೆಲ್ಸಿ ಪರೀಕ್ಷೆ ಜೀವನದ ಅತ್ಯಮೂಲ್ಯ ಘಟ್ಟವಾಗಿದ್ದು , ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯಬೇಕು .ಈ ನಿಟ್ಟಿನಲ್ಲಿ ಚನ್ನಪಟ್ಟಣ ತಾಲ್ಲೂಕಿಗೆ ಉತ್ತಮ ಫಲಿತಾಂಶ ತರುವ ನಿಟ್ಟಿನಲ್ಲಿ ತಮ್ಮ ಟ್ರಸ್ಟ್ ವತಿಯಿಂದ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗಾಗಿ ವಿಶೇಷ ಕಾರ್ಯಾಗಾರವನ್ನು ಹಮ್ಮಿಕೊಂಡಿದ್ದು ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ತಿಳಿಸಿದಡಿರು.
ವಿದ್ಯಾರ್ಥಿಗಳೇ ನೀವು ಜನಿಸಿರುವುದು ಇತಿಹಾಸ ಓದುವುದಕ್ಕಲ್ಲ, ಇತಿಹಾಸ ನಿರ್ಮಿಸಲು ಎಂಬುದನ್ನು ಜ್ಞಾಪಿಸಿಕೊಳ್ಳಿ , ಆತ್ಮವಿಶ್ವಾಸ ಮೈಗೂಡಿಸಿಕೊಳ್ಳಿ , ನಿರ್ಮಲವಾದ ಮನಸ್ಸೇ ಏಕಾಗ್ರತೆಯ ಮೂಲಮಂತ್ರ ಹಾಗಾಗಿ ಓದಿನಲ್ಲಿ ಏಕಾಗ್ರತೆ ಬರಬೇಕಾದಲ್ಲಿ ಅಧ್ಯಯನಕ್ಕೆ ಒಂದು ಸೂಕ್ತವಾದ ವಾತಾವರಣವನ್ನು ನಿರ್ಮಿಸಿಕೊಳ್ಳಬೇಕು, ಸೂಕ್ತ ವೇಳಾಪಟ್ಟಿಯನ್ನು ಹಾಕಿಕೊಳ್ಳಬೇಕು, ವಿದ್ಯಾರ್ಥಿಜೀವನದ ಗುರಿ ಏನು ಎಂಬುದನ್ನು ನಿರ್ಧರಿಸಿಕೊಳ್ಳಬೇಕು, ಟಿ.ವಿ. ಲ್ಯಾಪ್ಟಾಪ್, ಮೊಬೈಲ್ – ಮುಂತಾದ ಎಲೆಕ್ಟ್ರಾನಿಕ್ ಉಪಕರಣಗಳನ್ನು ನಿಮ್ಮ ಅಧ್ಯಯನದ ಅವಧಿಯಲ್ಲಿ ದೂರವಿಡಿ, ಯಾವುದೇ ಕಾರಣಕ್ಕೂ ಋಣಾತ್ಮಕ ಯೋಚನೆಗಳು ನಿಮ್ಮ ಮನಸ್ಸಿಗೆ ಬಾರದಂತೆ ನೋಡಿಕೊಳ್ಳಿ, ಯೋಗ, ಧ್ಯಾನದ ಅಭ್ಯಾಸ ರೂಡಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು .
ಸಾರ್ವಜನಿಕ ವಿದ್ಯಾಸಂಸ್ಥೆಯ ನಿವೃತ್ತ ಉಪಪ್ರಾಂಶುಪಾಲ ದೊಡ್ಡೇಗೌಡ ಕಾರ್ಯಕ್ರಮವನ್ನು ಉದ್ಘಾಟಿಸಿ ವಿಜ್ಞಾನ ವಿಷಯದಲ್ಲಿ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯಲು ಅನುಸರಿಸಬೇಕಾದ ಕ್ರಮಗಳ ಕುರಿತು ಮಾಹಿತಿ ಮಾರ್ಗದರ್ಶನ ನೀಡಿದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಕ್ಷೇತ್ರ ಸಮನ್ವಯಾಧಿಕಾರಿ ಕುಸುಮಲತಾ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು . ಸಂಪನ್ಮೂಲ ವ್ಯಕ್ತಿಗಳಾದ ಹರೀಶ್, ಪೂಜಾ ಹನುಮಯ್ಯ ,ಲಕ್ಷ್ಮಿ ಮೊದಲಾದವರು ವಿದ್ಯಾರ್ಥಿಗಳಿಗೆ ಆಂಗ್ಲಭಾಷೆ ಮತ್ತು ವಿಜ್ಞಾನ ವಿಷಯದ ಬಗ್ಗೆ ವಿಶೇಷ ತರಗತಿಗಳನ್ನು ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಶಿಕ್ಷಣ ಸಂಯೋಜಕ ಯೋಗೇಶ್ ಚಕ್ಕೆರೆ , ಕೆ.ಎನ್. ರಮೇಶ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮಧುಸೂದನ , ಸಮಾಜ ಸೇವಕ ರವಿಕುಮಾರ್ ಗೌಡ ,ಪ್ರಶಾಂತ್ ಶರ್ಮಾ , ಸಾರ್ವಜನಿಕ ವಿದ್ಯಾಸಂಸ್ಥೆ ನಿರ್ದೇಶಕಿ ಮಾಲಿನಿ ರಮೇಶ್, ಫಿಲಿಪ್ ರಾಜೇಂದ್ರ, ಪ್ರಕಾಶ್ ಮೂರ್ತಿ, ರಾಘವೇಂದ್ರರಾವ್, ಶಿಕ್ಷಕಿಯರಾದ ನೇತ್ರಾವತಿ, ಶಾರದಾನಾಗೇಶ್, ಸಮಾಜ ಸೇವಕ ಪೈಲ್ವಾನ್ ಅಕ್ರಂ ಪಾಷಾ, ಗಾಯಕಿ ಮಾಲತಿ ಸುರೇಶ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು .