ಅಪಘಾತವಾದ ನಂತರ ರಾತ್ರೋರಾತ್ರಿ ಗುಂಡಿ ಮುಚ್ಚಿದರು !

ರಾಮನಗರ : ವಿಭೂತಿಕೆರೆ ಬಳಿ ಬೈಕ್ ಸವಾರ ಕವಣಾಪುರ ಗ್ರಾಮದ ಅಂದಾನಯ್ಯ ರಸ್ತೆ ಗುಂಡಿಗೆ ಬಿದ್ದು ತೀವ್ರವಾಗಿ ಗಾಯಗೊಂಡ ಘಟನೆ ಶನಿವಾರ ರಾತ್ರಿ 8 ಗಂಟೆ ಸಮಯದಲ್ಲಿ ನಡೆದಿದೆ.
ರಾಮನಗರ-ಕಾಡನಕುಪ್ಪೆ ರಸ್ತೆ ಜಿಲ್ಲಾ ಕೇಂದ್ರದ ಪ್ರಮುಖ ರಸ್ತೆಯಾಗಿದೆ ಎಡೆಬಿಡದೆ ವಾಹನಗಳ ಓಡಾಟ ಈ ರಸ್ತೆಯಲ್ಲಿ ಹೆಚ್ಚಿದೆ ಇಂತಹ ಪ್ರಮುಖ ರಸ್ತೆಯಲ್ಲಿ ಬನ್ನಿಕುಪ್ಪೆ ರಸ್ತೆಯ ವಿಭೂತಿಕೆರೆ ಬಳಿ ಬೋರ್‍ವೆಲ್ ನೀರಿನ ಸಂಪರ್ಕಕ್ಕೆ ತೆಗೆದ ತೆರೆದ ಗುಂಡಿಗೆ ಬಿದ್ದು ಗಾಯಗೊಂಡಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ಅಂದಾನಯ್ಯ ಕೈಲಾಂಚ ಗ್ರಾಮದಲ್ಲಿ ಬೋರ್‍ವೆಲ್ ಮೋಟಾರ್ ರಿಪೇರಿ ಅಂಗಡಿ ನಡೆಸುತ್ತಿದ್ದ ಎಂಬುದಾಗಿ ತಿಳಿದು ಬಂದಿದೆ. ಸದ್ಯ ಈಗ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.
ಅಫಘಾತಕ್ಕೆ ಕಾರಣ : ಸ್ಥಳೀಯ ವ್ಯಕ್ತಿಗಳು ವ್ಯವಸಾಯಕ್ಕೆ ಬಳಸುತ್ತಿದ್ದ ನೀರಿನ ಪೈಪ್ ಹದಗೆಟ್ಟಿದ್ದ ಪರಿಣಾಮ ರಸ್ತೆ ಪಕ್ಕದಲ್ಲೇ ಇದ್ದ ಫೈಪ್‍ಲೈನ್ ಬಗೆದು ರಿಪೇರಿ ಮಾಡಿದ್ದಾರೆ. ಸುಮಾರು 20 ಅಡಿ ಉದ್ದ 4-5 ಅಡಿ ಆಳದ ಗುಂಡಿ ತೆಗೆದು ಗುಂಡಿಯ ಮಣ್ಣನ್ನು ಅರ್ಧ ರಸ್ತೆಗೆ ಸುರಿದು ಎತ್ತರಕ್ಕೆ ಮಣ್ಣು ಸುರಿದು ಗುಂಡಿ ಮುಚ್ಚದೆ ಹಾಗೇ ಬಿಟ್ಟಿದ್ದಾರೆ. ವಾಹನಗಳು ಅರ್ಧ ರಸ್ತೆಯಲ್ಲೇ ಸಂಚರಿಸಬೇಕಾಗಿತ್ತು ಎದುರುಗಡೆ ಬಂದ ವಾಹನದ ಬೆಳಕಿನಿಂದ ರಸ್ತೆಯಲ್ಲಿದ್ದ ಮಣ್ಣು, ಗುಂಡಿ ಕಾಣದೆ ಅಂದಾನಯ್ಯ ಮಣ್ಣಿನ ದಿಬ್ಬದ ಮೇಲೆ ಹೋಗಿ ಗುಂಡಿಗೆ ಬಿದ್ದ ಪರಿಣಾಮ ಅಫಘಾತವಾಗಿದೆ. ಬಿದ್ದ ರಭಸಕ್ಕೆ ತಲೆಗೆ ತೀವ್ರ ಪೆಟ್ಟುಬಿದ್ದಿದೆ ಪರಿಣಾಮ ಸ್ಥಳದಲ್ಲೇ ರಕ್ತಸ್ರಾವವಾಗಿ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದಾರೆ ಕೂಡಲೇ ರಸ್ತೆಯಲ್ಲಿ ಹೋಗುತ್ತಿದ್ದವರು ಆಂಬುಲೆನ್ಸ್ ನಲ್ಲಿ ರಾಮನಗರ ಆಸ್ಪತ್ರೆಗೆ ಕಳುಹಿಸಿದ್ದಾರೆ.
ಸಾರ್ವಜನಿಕರಿಗೆ ತೊಂದರೆ ಆಗುತ್ತದೆ ವಾಹನಗಳ ಓಡಾಟಕ್ಕೆ ಅಡಚಣೆಯಾಗುತ್ತಿರುವುದನ್ನೂ ಮನಗಂಡರೂ ಎಚ್ಚೆತ್ತುಕೊಳ್ಳದೆ ಇಪ್ಪತ್ತೈದು ದಿನಗಳಿಗೂ ಹೆಚ್ಚು ಕಾಲದಿಂದ ಹಾಗೇ ಬಿಟ್ಟು ಗುಂಡಿ ಮುಚ್ಚದೆ ಇದ್ದದ್ದು ಅಫಘಾತಕ್ಕೆ ಕಾರಣವಾಗಿದೆ. ಗುಂಡಿ ಮುಚ್ಚದ ಪರಿಣಾಮ ಅಫಘಾತ ಸಂಭವಿಸಿದೆ. ಅಫಘಾತಕ್ಕೆ ಗುಂಡಿ ಬಗೆದು ರಿಪೇರಿ ಮಾಡಿ ಮುಚ್ಚದವರ ನಿರ್ಲಕ್ಷವೇ ಕಾರಣವಾಗಿದೆ ಎಂದು ವಿಭೂತಿಕೆರೆ ಗ್ರಾಮದ ನವೀನ್‍ಕುಮಾರ್, ಕೇಬಲ್ ಮಹದೇವಸ್ವಾಮಿದೂರುತ್ತಾರೆ.
ಸ್ಥಳಕ್ಕೆ ಪೋಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ರಾಮನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾತ್ರೋ ರಾತ್ರಿ ಮುಚ್ಚಿದ ಗುಂಡಿ : ಒಂದು ತಿಂಗಳಿಂದ ರಿಪೇರಿಗೆ ತೆಗೆದ ಗುಂಡಿ ಅಫಘಾತವಾದ ವ್ಯಕ್ತಿಗೆ ಹೆಚ್ಚಿನ ಪೆಟ್ಟಾಗಿದ್ದು ಪ್ರಜ್ಞಾಹೀನ ಸ್ಥಿತಿಗೆ ತಲುಪಿರುವುದನ್ನು ತಿಳಿದು ಗುಂಡಿ ಮುಚ್ಚಿಲ್ಲ ಎಂಬ ಸಾರ್ವಜನಿಕರಿಂದ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ರಾತ್ರೋ ರಾತ್ರಿಯೇ ಗುಂಡಿ ಮುಚ್ಚಿ ಹೋಗಿದ್ದಾರೆ.
ಸ್ಪಷ್ಟನೆ : ರಸ್ತೆ ಪಕ್ಕದ ಗುಂಡಿ ನೀರಿನ ಪೈಪ್ ನೋಡಿದ ಸಾರ್ವಜನಿಕರು ಗ್ರಾಪಂನವರು ಕುಡಿಯುವ ನೀರಿನ ಸಲುವಾಗಿ ಪೈಪ್ ರಿಪೇರಿಗಾಗಿ ತೆಗೆದ ಗುಂಡಿ ರಿಪೇರಿ ಮಾಡಿ ತಿಂಗಳಾದರೂ ಮುಚ್ಚಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದರು ಆದರೆ ಸ್ಥಳದಲ್ಲಿ ವಸ್ತು ಸ್ಥಿತಿಯೇ ಬೇರೆಯಾಗಿದ್ದು ಖಾಸಗಿ ವ್ಯಕ್ತಿಗಳು ವ್ಯವಸಾಯಕ್ಕೆ ರಸ್ತೆ ಪಕ್ಕ ನೀರಿನ ಪೈಪ್ ತೆಗೆದುಕೊಂಡು ಹೋಗಿದ್ದು ಪೈಪ್ ರಿಪೇರಿ ಇದ್ದ ಕಾರಣ ಗುಂಡಿ ತೆಗೆದು ರಿಪೇರಿ ಮಾಡಿ ಗುಂಡಿ ಮುಚ್ಚದೆ ಹಾಗೆಯೇ ಬಿಟ್ಟ ಪರಿಣಾಮ ತೊಂದರೆ ಉಂಟಾಗಿದೆ ಗ್ರಾಪಂ ನೀರಿನ ಪೈಪ್ ರಿಪೇರಿಗೆ ಆ ಜಾಗದಲ್ಲಿ ಗುಂಡಿ ತೆಗೆದು ಬಿಟ್ಟಿಲ್ಲ ಆ ಜಾಗದಲ್ಲಿ ಗ್ರಾಪಂನ ಯಾವುದೇ ನೀರಿನ ಸಂಪರ್ಕದ ಪೈಪ್‍ಗಳು ಇಲ್ಲ ಅದಕ್ಕೂ ಗ್ರಾಪಂಗೂ ಸಂಭಂಧವಿಲ್ಲ ಎಂದು ಗ್ರಾಪಂ ಅಧಿಕಾರಿಗಳು ಸಾರ್ವಜನಿಕರಿಗೆ ತಿಳಿಸಿ ಸ್ಪಷ್ಟನೆ ನೀಡಿದ್ದಾರೆ.

Leave a Reply

Your email address will not be published. Required fields are marked *