ಪೊಲೀಸರಿಗೂ ಗೃಹರಕ್ಷಕದಳದವರಿಗೂ ಯಾವುದೇ ವ್ಯತ್ಯಾಸವಿಲ್ಲ : ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಗಿರೀಶ್

ಚನ್ನಪಟ್ಟಣ (hairamanagara.in) : ಕೋವಿಡ್‍ನಂತಹ ಸಂಕಷ್ಟದ ಸಂದರ್ಭದಲ್ಲಿ ಪೊಲೀಸರಂತೆ ತಮ್ಮ ಕುಟುಂಬ ಹಾಗೂ ತಮ್ಮ ಆರೋಗ್ಯವನ್ನು ಲಕ್ಕಿಸದೆ ಕರ್ತವ್ಯ ಮೆರೆದ ಗೃಹರಕ್ಷಕದಳದ ಸೇವೆಯನ್ನು ಎಷ್ಟು ಶ್ಲಾಘನೆ ಮಾಡಿದರು ಸಾಲದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಗಿರೀಶ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲ್ಲೂಕಿನ ಅಕ್ಕೂರು ಗ್ರಾಮದ ಶ್ರೀ ಅನ್ನಪೂರ್ಣೇಶ್ವರಿ ಕಲ್ಯಾಣ ಮಂಟಪದಲ್ಲಿ ಆಯೋಜನೆ ಮಾಡಲಾಗಿದ್ದ, ಜಿಲ್ಲಾ ಗೃಹರಕ್ಷಕ ದಳದ ಸಂಯುಕ್ತಾಶ್ರಯದ ಅಖಿಲ ಭಾರತ ಗೃಹರಕ್ಷಕದಳ ದಿನಾಚರಣೆಯನ್ನು, ದೀಪ ಬೆಳಗಿಸುವುದರ ಮುಖಾಂತರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪೊಲೀಸರಿಗೂ ಗೃಹರಕ್ಷಕದಳದವರಿಗೂ ಯಾವುದೇ ವ್ಯತ್ಯಾಸವಿಲ್ಲದೆ ಪೊಲೀಸರ ಸಮಾನರಾಗಿ ಕರ್ತವ್ಯಪಾಲನೆ ಮಾಡುವ ಗೃಹರಕ್ಷಕದಳದ ಸೇವೆಯ ಪಾರದರ್ಶಕಸೇವೆಯನ್ನು ಮೆಚ್ಚಲೇಬೇಕು, ಭಗವಂತ ನಿಮಗೆ ನೀಡಿರುವ ಗೌರವಯುತ ಸೇವೆಯಾದ ಗೃಹರಕ್ಷಕಪೆದೆ ಹುದ್ದೆಯನ್ನು ಸಮರ್ಪಕವಾಗಿ ಸದುಪಯೋಗಪಡಿಸಿಕೊಳ್ಳುವಲ್ಲಿ ಪಾರದರ್ಶಕತೆ ಮೆರೆಯ ಬೇಕೆಂದು ತಿಳಿಸಿದರು.
ನೂರಾರು ವರ್ಷಗಳಿಂದ ತಮ್ಮದೇ ಆದ ಸೇವೆಯಿಂದ ಗುರುತಿಸಿಕೊಂಡಿರುವ ಗೃಹರಕ್ಷಕದಳದ ಸೇವೆ ಆಧುನಿಕ ಜಗತ್ತಿನಲ್ಲಿಯೂ ನಿರಂತರ ಸೇವೆ ಸಲ್ಲಿಸುತ್ತಿದೆ, ಸಮಾಜದ ಆಸ್ತಿಪಾಸ್ತಿ ಸಾರ್ವಜನಿಕರ ಪ್ರಾಣವನ್ನು ರಕ್ಷಣೆ ಮಾಡುವ ಪೊಲೀಸರ ಕರ್ತವ್ಯವೆಷ್ಟೋ ಅಷ್ಟೆ ರೀತಿಯಲ್ಲಿ ಗೃಹರಕ್ಷದದಳದ ಸೇವೆಯನ್ನು ನೆನೆಯಬೇಕೆಂದರು.
ಅದರಲ್ಲೂ ಜಿಲ್ಲೆಯ ಗೃಹರಕ್ಷಕದಳದ ಸೇವೆಯನ್ನು ಮುಕ್ತಕಂಠದಿಂದ ಪ್ರಶಂಸೆ ವ್ಯಕ್ತಪಡಿಸಿ.ಜಿಲ್ಲಾ ಗೃಹರಕ್ಷಕದಳದ ಜಿಲ್ಲಾ ಸಮಾದೇಷ್ಟ ನಿರಂಜನ ಎಲ್ ರವರು ಗೃಹರಕ್ಷಕದಳ ಪ್ರತಿಯೊಂದು ಸಮಸ್ಯೆಗಳು ಅವರ ಶ್ರೇಯೋಭಿವೃದ್ದಿಗಾಗಿ ನನ್ನ ಬಳಿ ನಿರಂತರವಾಗಿ ಸಂಪರ್ಕದಲ್ಲಿರುವುದು ಗೃಹರಕ್ಷಕದಳದ ಮೇಲೆ ಇರುವ ಅವರ ಕಾಳಜಿಯನ್ನು ಬಿಂಬಿಸಿದೆ ಎಂದರು.
ದಿನದ 24 ತಾಸುಗಳು ಕೂಡ ಪೊಲೀಸರ ಜೊತೆಯಲ್ಲಿ ಮಳೆ,ಚಳಿ,ಬಿಸಿಲು ಎನ್ನದೆ ಗೌರವಧನದ ಆಧಾರದ ಮೇಲೆ ಸೇವೆ ಸಲ್ಲಿಸುವ ಗೃಹರಕ್ಷಕದಳದ ಸಿಬ್ಬಂದಿಯಲ್ಲಿಯೂ ಎಲೆಮರೆಕಾಯಿಯಂತೆ ಪ್ರತಿಭೆಗಳಿದ್ದು ಅಂತಹ ಪ್ರತಿಬೆಗಳನ್ನು ಅನಾವರಣಗೊಳಿಸಿದಾಗ ಮಾತ್ರ ಪ್ರತಿಭೆಗಳಿಗೆ ವೇದಿಕೆ ದೊರೆಯಲು ಅವಕಾಶವಾಗುತ್ತದೆ ಎಂದರು.
ಕೋವಿಡ್ ಎದುರಾಗಿದ್ದ ಸಂದರ್ಭದಲ್ಲಿ ಕೊರೋನಾವಾರಿಯರ್ಸ್ ಆಗಿ ಸೇವೆ ಸಲ್ಲಿಸಿದ್ದ ನಿಮ್ಮಗೆ ಸದಾ ಚಿರಋಣಿಯಾಗರುತ್ತೇವೆ ಈಗಾಗಲೇ ಪೊಲೀಸ್ ಇಲಾಖೆಯಿಂದ ಅಭಿನಂದನೆ ಸಲ್ಲಿಸಲಾಗಿದೆ ಎಂದು ಗೃಹರಕ್ಷಕದಳದ ಸೇವೆಯನ್ನು ಶ್ಲಾಘಿಸಿದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ತಾಲ್ಲೂಕು ಪೊಲೀಸ್ ಉಪವಿಭಾಗಾಧಿಕಾರಿ ಕೆ.ಎನ್.ರಮೇಶ್ ಮಾತನಾಡಿ ಪೊಲೀಸರ ಜೊತೆಯಲ್ಲಿ ಪೊಲೀಸರಾಗಿ ತಮಗೆ ಯಾವುದೇ ರೀತಿಯ ಸಂಕಷ್ಟವಿದ್ದರೂ ಬದಿಗೊತ್ತಿ ಸೇವೆ ಸಲ್ಲಿಸುವ ಗೌರವದ ಹುದ್ದೆ ಹೊತ್ತವರು ಗೃಹರಕ್ಷಕದಳದವರು ಎಂದು ತಿಳಿಸಿದರು.
ಖಾಖಿ ಒಂದೇ, ಸೇವೆ ಒಂದೆ ಅದರೆ ಇಲಾಖೆಗಳು ಬೇರೆಯಾಗಿರುತ್ತದೆ,ಕಾಯಕವೇ ಕೈಲಾಸ ಎಂಬ ರೀತಿಯಲ್ಲಿ ತಮಗೆ ದೊರೆತ್ತಿರುವ ಗೃಹರಕ್ಷಕಪೆದೆಯ ನೌಕರಿಯನ್ನು ಪ್ರಮಾಣಿಕತೆ ಹಾಗೂ ಪಾರದರ್ಶಕತೆಯಿಂದ ಮಾಡುತ್ತಿರುವುದು ಸಾಮಾನ್ಯದ ವಿಚಾರವಲ್ಲ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಗೃಹರಕ್ಷಕ ಸೇವೆ ಸಮಾಜಕ್ಕೆ ಅಗಾಧವಾಗಿದ್ದು, ಬಯಸದೆ ಬಂದಿರುವ ಗೃಹರಕ್ಷಕ ಹುದ್ದೆಯನ್ನು ನಿರ್ವಹಿಸುತ್ತಾ ಸಾರ್ವಜನಿಕರ ಸೇವೆಯಲ್ಲಿ ತಮ್ಮ ಪಾತ್ರವನ್ನು ತೋರಿಸಬೇಕೆಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಗೃಹರಕ್ಷಕದಳದ ಜಿಲ್ಲಾ ಸಮಾದೇಷ್ಠಕ ನಿರಂಜನ್, ಎಲೆಮರೆಕಾಯಿಯಂತೆ ಸೇವೆ ಸಲ್ಲಿಸುತ್ತಿದ್ದ ಗೃಹರಕ್ಷಕದಳದ ಸೇವೆ ಸಮಾಜಕ್ಕೆ ಎಷ್ಟು ಅವಶ್ಯಕ, ಅವರ ಶಕ್ತಿ ಎಷ್ಟೆಂಬುದನ್ನು ಸಮಾಜಕ್ಕೆ ಅನಾವರಣ ಮಾಡುತ್ತಿರುವ ಜಿಲ್ಲೆಯ ದಕ್ಷ ಹಾಗೂ ಪ್ರಮಾಣಿಕ ಅಧಿಕಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಗಿರೀಶ್‍ರವರ ಕರ್ತವ್ಯಕ್ಕೆ ಜಿಲ್ಲಾ ಗೃಹರಕ್ಷಕದ ದಳ ಎಷ್ಟು ಕೃತಜ್ಞತೆ ಸಲ್ಲಿಸಿದರು ಸಾಲದು ಎಂದರು.
ಕಳೆದ 16 ವರ್ಷಗಳಿಂದಲೂ ಗೃಹರಕ್ಷಕರ ಯಾವುದೇ ಕಾರ್ಯಕ್ರಮಗಳಿಗೆ ಬಾರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸಾಲಿನಲ್ಲಿ ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಗಿರೀಶ್ ರವರು ಗೃಹರಕ್ಷಕದಳದ ಸಣ್ಣ ಕಾರ್ಯಕ್ರಮಗಳಿಗೂ ಆಗಮಿಸಿ ಗೃಹರಕ್ಷಕ ಸಿಬ್ಬಂದಿಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ದೈರ್ಯ ತುಂಬಿ, ಗೃಹರಕ್ಷಕರಿಂದ ಸಮಾಜಕ್ಕೆ ಕೊಡುಗೆ ಏನೆಂಬುದನ್ನು ಸಮಾಜಕ್ಕೆ ಮನಗಾಣಿಸುತ್ತಿರುವುದೇ ಅವರಿಗೆ ಗೃಹರಕ್ಷಕದಳದ ಮೇಲಿರುವ ಗೌರವಕ್ಕೆ ಸಾಕ್ಷಿಯಾಗಿದೆ ಎಂದರು.
ಕೋವಿಡ್‍ನಂತಹ ಸಂಕಷ್ಠದ ಸಂದರ್ಭದಲ್ಲಿ ಪ್ರತಿಯೊಂದು ಕ್ಷೇತ್ರದ ಸಮುದಾಯಕ್ಕೂ ಹಾಗೂ ಕೊರೋನಾ ವಾರಿಯರ್ಸ್‍ಗೂ ಆಹಾರದ ಕಿಟ್‍ಗಳನ್ನು ನೀಡಲಾಯಿತು, ಗೌರವದ ವೇತನವನ್ನೇ ನಂಬಿ ಕರ್ತವ್ಯ ನಿರ್ವಹಿಸುವ ಗೃಹರಕ್ಷಕ ಸಿಬ್ಬಂದಿ ಯಾರಕಣ್ಣಿಗೂ ಬೀಳಲಿಲ್ಲ, ಆದರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಗಿರೀಶ್‍ರವರು ಗೃಹರಕ್ಷಕದಳದ ಸಂಕಷ್ಟಕ್ಕೆ ಸ್ಪಂಧನೆ ಮಾಡಿ ಆ ಸಮಯದಲ್ಲಿ ಆಹಾರಕಿಟ್‍ಗಳನ್ನು ವಿತರಣೆ ಮಾಡಿರುವುದನ್ನು ಗೃಹರಕ್ಷಕರು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದರು.
ಈ ಸಂದರ್ಭದಲ್ಲಿ ಗ್ರಾಮಾಂತರ ವೃತ್ತ ನಿರೀಕ್ಷಕ ಬಿ.ಶಿವಕುಮಾರ್,ವ್ಯಂಗ್ಯಚಿತ್ರಕಾರ ರಮೇಶ್‍ಅಕ್ಕೂರ್, ಜಿಲ್ಲಾ ಗೃಹರಕ್ಷಕದಳದ ಅಧೀಕ್ಷಕ ಆರ್.ಕೆ.ರವಿ, ಜಿಲ್ಲಾ ಗೃಹರಕ್ಷಕದಳದ ಜಿಲ್ಲಾ ಭೋಧಕ ಎಸ್.ಆರ್.ಗಾಯಕ್‍ವಾಡ್, ಅಕ್ಕೂರು ಘಟಕದ ಘಟಕಾಧಿಕಾರಿ ವಿ.ಆರ್.ವೆಂಕಟೇಶ್, ಕನಕಪುರದ ವಿಜಯ್‍ಕುಮಾರ್, ಚನ್ನಪಟ್ಟಣ ವೆಂಕಟೇಶ್, ಬಿಡದಿ ಅಧಿಕಾರಿ ಉಲಚಿಪಾಳ್ಯ ವೆಂಕಟೇಶ್,ಸಾತನೂರು ಅಭಿಲಾಸ್.ಮಾಗಡಿ ಶಿವನಂಜಯ್ಯ,ಕುದೂರು ಕೃಷ್ಣಮೂರ್ತಿ, ಕೋಡಳ್ಳಿ ಹನುಮಂತ ಹಾಗೂ ಹಲವಾರು ಮಂದಿ ಹಾಜರಿದ್ದರು.

Leave a Reply

Your email address will not be published. Required fields are marked *