ಕುವೆಂಪು ಆದರ್ಶಗಳು ಯುವ ಜನಾಂಗಕ್ಕೆ ದಾರಿ ದೀಪವಾಗಬೇಕು : ಶಿವರಾಮೇಗೌಡ ನಾಗವಾರ

ಚನ್ನಪಟ್ಟಣ : ಕುವೆಂಪುರವರು ಕನ್ನಡದ ಸತ್ವವನ್ನು ಹೆಚ್ಚಿಸಿ ಕನ್ನಡಕ್ಕೆ ಹಿರಿಮೆ ಗರಿಮೆಯನ್ನು ತಂದ ಮಹಾಕವಿ ,ಅವರ ಬದುಕಿನ ಆಚಾರ, ವಿಚಾರಗಳು, ಆದರ್ಶಗಳು ಇಂದಿನ ಯುವ ಜನಾಂಗಕ್ಕೆ ದಾರಿ ದೀಪವಾಗಬೇಕು ಎಂದು ನಿವೃತ್ತ ಪ್ರಾಂಶುಪಾಲ ಶಿವರಾಮೇಗೌಡ ನಾಗವಾರ ಅಭಿಪ್ರಾಯಪಟ್ಟರು .
ಪಟ್ಟಣದ ಚಂದ್ರು ಡಯಾಗ್ನೋಸ್ಟಿಕ್ ಸೆಂಟರ್ ನ ಸಭಾಂಗಣದಲ್ಲಿ ಅನಿಕೇತನ ಕನ್ನಡ ಸಾಂಸ್ಕೃತಿಕ ಬಳಗ ,ಭಾರತ ವಿಕಾಸ ಪರಿಷತ್ ಕಣ್ವಶಾಖೆ ಚನ್ನಪಟ್ಟಣ ,ಲಯನ್ಸ್ ಸಂಸ್ಥೆ ಚನ್ನಪಟ್ಟಣ,ಶುಭೋದಯ ಸಾಂಸ್ಕೃತಿಕ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ರಸಋಷಿ ಕುವೆಂಪುರವರ 117 ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಕುವೆಂಪು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು , ಅಸಹಿಷ್ಣುತೆ, ಕೋಮುಗಲಭೆ, ಮತೀಯ ಸಂಘರ್ಷಗಳು ಮತೀಯ ಸಂಘರ್ಷಗಳು ಹೊಗೆಯಾಡುತ್ತಿರುವ ಇಂದಿನ ದಿನಗಳಲ್ಲಿ ಕುವೆಂಪುರವರ ಸಾಹಿತ್ಯದ ವೈಚಾರಿಕ ಮೌಲ್ಯಗಳು ಎಂದೆಂದಿಗೂ ಪ್ರಸ್ತುತ ಹಾಗೂ ಮೌಲ್ಯಯುತವಾದವು ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಸಿಂ. ಲಿಂ. ನಾಗರಾಜು ಮಾತನಾಡಿ ಮಹಾಕವಿಯಾಗಿ, ದಾರ್ಶನಿಕರಾಗಿ, ಶಿಕ್ಷಣ ತಜ್ಞರಾಗಿ ವಿವಿಧ ರಂಗಗಳಲ್ಲಿ ಅಮೂಲ್ಯ ಸೇವೆ ಸಲ್ಲಿಸಿರುವ ರಾಷ್ಟ್ರಕವಿ ಕುವೆಂಪುರವರು ಮನುಜಮತ ವಿಶ್ವಪಥ ಎಂಬ ಘೋಷಣೆಯ ಮೂಲಕ ಜಗತ್ತಿಗೆ ವಿಶ್ವಮಾನವ ಸಂದೇಶ ಸಾರಿದರು . ಅವರ ಆದರ್ಶ ಬದುಕನ್ನು ಅನುಸರಿಸುವುದೇ ನಾವು ಅವರಿಗೆ ಸಲ್ಲಿಸುವ ಗೌರವ ಎಂದರು .
ಲಯನ್ಸ್ ಸಂಸ್ಥೆ ಅಧ್ಯಕ್ಷ ವಿ.ಸಿ. ಚಂದ್ರೇಗೌಡ ಮಾತನಾಡಿ ಕುವೆಂಪು ಭಾರತದ ನೈಸರ್ಗಿಕ ಕವಿ .ಅವರಲ್ಲಿ ಸೌಂದರ್ಯದ ಅನ್ವೇಷಣೆ, ಸಾಮಾಜಿಕ ಹಾಗೂ ವೈಜ್ಞಾನಿಕ ಮನೋಭಾವನೆ ಅಗಾಧವಾಗಿ ಬೇರೂರಿದ್ದವು. ತಮ್ಮ ಸಾಹಿತ್ಯದ ಮೂಲಕ ಸಮಾಜಕ್ಕೆ ಎಚ್ಚರಿಕೆಯ ಸಂದೇಶವನ್ನು ನೀಡಿದ್ದಾರೆ .ಮನುಜ ಮತ ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿ, ವಿಶ್ವಮಾನವ ಸಂದೇಶವನ್ನು ಜಗತ್ತಿಗೆ ತಮ್ಮ ಕಾಣಿಕೆಯಾಗಿ ಕೊಟ್ಟ ಕುವೆಂಪು, ತಮ್ಮ ಮೇರುಕೃತಿಗಳಿಂದಲೇ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ ಎಂದರು.
ಭಾರತ ವಿಕಾಸ ಪರಿಷತ್ ಕಣ್ವ ಶಾಖೆ ಅಧ್ಯಕ್ಷ ವಸಂತಕುಮಾರ್ ಮಾತನಾಡಿ ಕುವೆಂಪು ಅವರ ಚಿಂತನೆಗಳು ಸಾರ್ವಕಾಲಿಕವಾದವುಗಳಾಗಿದ್ದು, ಸಮಾಜದಲ್ಲಿ ಅಳವಾಗಿ ಬೇರೂರಿದ್ದ ಮೌಢ್ಯತೆ, ಅಂಧ ವಿಶ್ವಾಸಗಳು, ಪುರೋಹಿತಶಾಹಿ ವ್ಯವಸ್ಥೆಯ ಕರಾಳ ಮುಖಗಳನ್ನು ಕಿತ್ತೆಸೆದು, ಜನರಲ್ಲಿ ವೈಚಾರಿಕ ಪ್ರಜ್ಞೆ ಮೂಡಿಸುವಲ್ಲಿ ಕುವೆಂಪು ಅವರ ಪಾತ್ರ ಹಿರಿದಾದುದು. ಅವರು ತಮ್ಮ ಕೃತಿಗಳ ಮೂಲಕ ಸಾಮಾಜಿಕ ಆಂದೋಲನಕ್ಕೆ ಮುನ್ನುಡಿ ಬರೆದರು ಎಂದರು .
ಶುಭೋದಯ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಎಂ. ಶಿವಮಾದು ಮಾತನಾಡಿದರು. ಅನಿಕೇತನ ಕನ್ನಡ ಸಾಂಸ್ಕತಿಕ ಬಳಗದ ಅಧ್ಯಕ್ಷ ಯೋಗೇಶ್ ಚಕ್ಕೆರೆ ಕಾರ್ಯಕ್ರಮವನ್ನು ನಿರೂಪಿಸಿದರು. ಭಾರತ ವಿಕಾಸ ಪರಿಷತ್ ಕಣ್ವ ಶಾಖೆಯ ಕಾರ್ಯದರ್ಶಿ ಬಿ .ಎನ್. ಕಾಡಯ್ಯ ಸ್ವಾಗತಿಸಿದರು. ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಗುರುಮಾದಯ್ಯ ವಂದಿಸಿದರು .ಗಾಯಕರಾದ ಶಾರದಾ ನಾಗೇಶ್ , ಸಿದ್ಧರಾಮೇಶ್ವರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಿ.ಸಿ .ಸುರೇಶ್, ಕುಂತೂರುದೊಡ್ಡಿ ಪುಟ್ಟರಾಜು, ದಶವಾರ ಮಹೇಶ್ ಕುವೆಂಪು ವಿರಚಿತ ಗೀತೆಗಳ ಗಾಯನ ನಡೆಸಿಕೊಟ್ಟರು .
ಭಾರತ ಸೇವಾದಳದ ತಾಲ್ಲೂಕು ಅಧ್ಯಕ್ಷ ಗೋವಿಂದಯ್ಯ ,ಎಸ್ .ಡಿ.ಎಂ.ಸಿ ಸಮನ್ವಯ ವೇದಿಕೆಯ ರಾಜ್ಯ ಉಪಾಧ್ಯಕ್ಷ ನಾಗವಾರ ಶಂಭುಗೌಡ , ಲಿಪಿಕ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಪ್ರಶಾಂತ್ ಶರ್ಮಾ, ಸರ್ಕಾರಿ ನೌಕರರ ಒಕ್ಕೂಟದ ಅಧ್ಯಕ್ಷ ಸಿದ್ದಲಿಂಗಯ್ಯ, ಕೆ .ಎನ್. ರಮೇಶ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮಧುಸೂದನ, ತಾಲ್ಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷೆ ಸುಧಾ , ಕವಿಗಳಾದ ಕೂರಣಗೆರೆ ಕೃಷ್ಣಪ್ಪ ,ಶಿಕ್ಷಕರಾದ ದೇವರಾಜು, ಕೆಂಚೇಗೌಡ, ರಾಮಚಂದ್ರ, ಕರಿಯಪ್ಪ, ವಿ. ಟಿ. ರಮೇಶ್ ,ಎಂ. ಎನ್ .ಕೃಷ್ಣಕುಮಾರ್ ,ರಂಗಭೂಮಿ ಕಲಾವಿದರಾದ ನಟರಾಜು , ಚಂದನ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *