ಭಾರತೀಯ ಸಂಸ್ಕøತಿಯಲ್ಲಿ ಗುರುವಿಗೆ ಮಹತ್ವದ ಸ್ಥಾನವಿದೆ : ಕೆ.ಎನ್. ರಮೇಶ್
ಚನ್ನಪಟ್ಟಣ :- ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಮಹತ್ವದ ಸ್ಥಾನವಿದ್ದು ,ಅಂಧಕಾರ ಹೋಗಲಾಡಿಸಿ ಸುಜ್ಞಾನ ತುಂಬಿ ಸತ್ಪ್ರಜೆಗಳನ್ನಾಗಿ ರೂಪಿಸುವ ಗುರುಗಳನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಆರಕ್ಷಕ ಉಪಾಧೀಕ್ಷಕ ಕೆ .ಎನ್.ರಮೇಶ್ ತಿಳಿಸಿದರು .
ತಾಲ್ಲೂಕಿನ ಅಬ್ಬೂರುದೊಡ್ಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾರತ ವಿಕಾಸ್ ಪರಿಷತ್ ಕಣ್ವ ಶಾಖೆ ಹಮ್ಮಿಕೊಂಡಿದ್ದ ‘ಗುರುವಂದನಾ ಛಾತ್ರಾಭಿನಂದನಾ’ ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕಿ ಎಂ.ಸಿ.ನಾಗಮಣಿ ರವರನ್ನು ಗೌರವಿಸಿ ಅವರು ಮಾತನಾಡಿದರು .ಶಿಕ್ಷಕರ ವೃತ್ತಿ ಅತ್ಯಂತ ಪವಿತ್ರವಾದದ್ದು ಸುವ್ಯವಸ್ಥಿತ ಸಮಾಜ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರ ಬಹಳ ದೊಡ್ಡದು ,ಕತ್ತಲೆಯನ್ನು ಕಳೆದು ಸುಜ್ಞಾನದ ಬೆಳಕನ್ನು ಮೂಡಿಸಿ ಮಾರ್ಗದರ್ಶನ ಮಾಡುವ ಗುರುಗಳನ್ನು ಸದಾ ಕಾಲ ಸ್ಮರಿಸಿ ಗೌರವಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಹಾಗಾಗಿ ಭಾರತ
ವಿಕಾಸ್ ಪರಿಷತ್ತಿನ ವತಿಯಿಂದ ಸಾರ್ಥಕ ಸೇವೆ ಸಲ್ಲಿಸಿ ನಿವೃತ್ತಿ ಅಂಚಿನಲ್ಲಿರುವ ಶಿಕ್ಷಕಿ ಎಂ.ಸಿ.ನಾಗಮಣಿ ರವರನ್ನು ಸನ್ಮಾನಿಸಿ ಗೌರವಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು .
ಭಾವಿಪ ಪ್ರಾಂತ ಸಂಚಾಲಕ ಗುರುಮಾದಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ ಸಂಪರ್ಕ ಸಹಯೋಗ ಸಂಸ್ಕಾರ ಸೇವೆ ಸಮರ್ಪಣೆ ಧ್ಯೇಯಗಳೊಂದಿಗೆ ಕಾರ್ಯನಿರ್ವಹಿಸುತ್ತಿರುವ ಭಾರತ ವಿಕಾಸ ಪರಿಷತ್ತು ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೆ ಪಸರಿಸುವ ಕೆಲಸವನ್ನು ಮಾಡಿಕೊಂಡು ಬರುತ್ತಿದೆ .ಅದರ ಭಾಗವಾಗಿ ಗುರುವಂದನೆ ಕಾರ್ಯಕ್ರಮವನ್ನು ಹಮ್ಮಿಕೊಂಡು ಶ್ರೇಷ್ಠ ಗುರುಗಳನ್ನು ಗೌರವಿಸಲಾಗುತ್ತಿದೆ, ಜಗತ್ತಿನಲ್ಲಿಯೇ ಸ್ವಾರ್ಥ ಮನೋಭಾವ ಇಲ್ಲದ ವೃತ್ತಿ ಎಂದರೆ ಶಿಕ್ಷಕ ವೃತ್ತಿ.ಶಿಕ್ಷಕರು ಮಕ್ಕಳ ಸೇವಕರಂತೆ ಸೇವೆ ಸಲ್ಲಿಸಬೇಕು,ಕಲಿಯುವವನಿಗೆ ಸತ್ಯ ದರ್ಶನ ಮಾಡಿಸುವ ಮೂಲಕ ಸನ್ಮಾರ್ಗವನ್ನು ತೋರಿಸುವ ಕೆಲಸ ಮಾಡಬೇಕು,ಆಗ ಮಾತ್ರ ವಿದ್ಯಾರ್ಥಿಗಳು ಉತ್ತಮವಾದ ಮೌಲ್ಯಧಾರಿತ ಜೀವನವನ್ನು ನಡೆಸಲು ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಭಾವಿಪ ಕಣ್ವ ಶಾಖೆಯ ಅಧ್ಯಕ್ಷ ವಸಂತಕುಮಾರ್ ರವರು ಮಾತನಾಡಿ ಭಾ.ವಿ.ಪ ಶಾಖೆಯಿಂದ ಪ್ರತಿವರ್ಷ ಒಬ್ಬ ಸರ್ಕಾರಿ ಶಾಲೆಯ ಉತ್ತಮ ಶಿಕ್ಷಕರಿಗೆ ಸನ್ಮಾನ ಮಾಡುತ್ತಿದ್ದೇವೆ, ಅದರಲ್ಲೂ ಈ ವರ್ಷ ಕ್ರಿಯಾಶೀಲತೆ ಮತ್ತು ವೃತ್ತಿಬದ್ಧತೆಯನ್ನು ಅಳವಡಿಸಿಕೊಂಡಿರುವ , ಸರಳ ಸೌಜನ್ಯದ ವ್ಯಕ್ತಿತ್ವವನ್ನು ಹೊಂದಿರುವ , ಸುಮಾರು ಮೂವತ್ತೈದು ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿರುವ ವಿದ್ಯಾರ್ಥಿಗಳ ಮೆಚ್ಚಿನ ಶಿಕ್ಷಕಿಯಾಗಿರುವ ಅಬ್ಬೂರು ದೊಡ್ಡಿ ಸರ್ಕಾರಿ ಶಾಲೆಯ ಶಿಕ್ಷಕಿ ನಾಗಮಣಿ ರವರಿಗೆ ಗುರುವಂದನೆ ಮಾಡುತ್ತಿರುವುದು ನಮ್ಮ ಶಾಖೆಗೆ ಹೆಮ್ಮೆಯ ವಿಷಯ ಎಂದರು .
ಭಾ.ವಿ.ಪ.ಕಾರ್ಯದರ್ಶಿಗಳಾದ ಬಿ. ಎನ್.ಕಾಡಯ್ಯ ಎಲ್ಲರನ್ನೂ ಸ್ವಾಗತಿಸಿದರು . ಶಿಕ್ಷಕಿ ನಾಗಮಣಿ ಅವರನ್ನು ಭಾ.ವಿ.ಪ.ವತಿಯಿಂದ ಸನ್ಮಾನಿಸಲಾಯಿತು .ಶಾಲೆಯ ಮಕ್ಕಳು ಗುರುಗಳಿಗೆ ಪುಷ್ಪಾರ್ಚನೆ ಮಾಡಿ ವಂದಿಸಿದರು.
ಶಿಕ್ಷಣ ಸಂಯೋಜಕ ಯೋಗೇಶ್ ಚಕ್ಕೆರೆ ಕಾರ್ಯಕ್ರಮ ನಿರೂಪಿಸಿದರು .ಕ್ಷೇತ್ರ ಸಮನ್ವಯಾಧಿಕಾರಿ ಕುಸುಮಲತಾ , ಬಿ.ಆರ್ .ಪಿ ಜಯರಾಮಯ್ಯ,ಸಮೂಹ ಸಂಪನ್ಮೂಲ ವ್ಯಕ್ತಿ ಕೃಷ್ಣಪ್ಪ ,ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅಪ್ಪಾಜಿ ,ಸರ್ಕಾರಿ ನೌಕರರ ಸಂಘದ ನಿರ್ದೇಶಕ ಧನಂಜಯ , ಭಾ.ವಿ.ಪ. ಪ್ರಾಂತ ಸಂಚಾಲಕರಾದ ಗೋವಿಂದಯ್ಯ ,ಖಜಾಂಚಿ ತಿಪ್ರೇಗೌಡ, ಸದಸ್ಯರಾದ ಬೆಸ್ಕಾಂ ಶಿವಲಿಂಗಯ್ಯ, ವಿ. ಟಿ .ರಮೇಶ್, ಗ್ರಾಮ ಪಂಚಾಯಿತಿ ಸದಸ್ಯರಾದ ಮರಿಸ್ವಾಮಿ, ತಾಲ್ಲೂಕು ಲಿಪಿಕ ನೌಕರರ ಸಂಘದ ಅಧ್ಯಕ್ಷ ಪ್ರಶಾಂತ್ ಶರ್ಮಾ, ಕೆ ಎನ್ .ರಮೇಶ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮಧುಸೂದನ, ಶಿಕ್ಷಕಿ ನೇತ್ರಾವತಿ ಹಾಗೂ ಶಾಲೆಯ ಶಿಕ್ಷಕ ವೃಂದದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.