ಶತಮಾನದ ದೈತ್ಯ ಪ್ರತಿಭೆ ಕುವೆಂಪು : ಬಿ.ಟಿ. ನಾಗೇಶ್

ಚನ್ನಪಟ್ಟಣ: ಈ ದೇಶದ ಸಮಕಾಲೀನ ಸೃಜನಶೀಲತೆಯ ಉತ್ಕರ್ಷದ ಕವಿ ರಸಋಷಿ ಕುವೆಂಪು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ಟಿ. ನಾಗೇಶ್ ಅಭಿಪ್ರಾಯಪಟ್ಟರು.
ನಗರದ ಗಾಂಧಿಭವನದ ಬಳಿ ರಾಮನಗರ ಜಿಲ್ಲಾ ಕಸಾಪ ಹಮ್ಮಿಕೊಂಡಿದ್ದ ಕುವೆಂಪು ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಕುವೆಂಪು ಪ್ರತಿಮೆಗೆ ಪುಷ್ಪಹಾರ ಹಾಕಿ ಮಾತನಾಡಿದ ಅವರು ಮೌಢ್ಯಾಚರಣೆ, ಕಂದಾಚಾರ, ವಾಮಾಚಾರ ಇವುಗಳ ವಿರುದ್ಧ ಸಮರ ಸಾರಿದ ಇವರು ವಿಶ್ವ ಮಾನವತೆಯ ಸಂದೇಶ ಸಾರಿದವರು. ಎಲ್ಲರೂ ಒಂದೇ ಎನ್ನುವ ತತ್ತ್ವದಡಿ ಬಾಳಬೇಕು ಎಂಬ ಅಭಿಲಾಷೆ ಇಟ್ಟುಕೊಂಡಿದ್ದವರು. ಇಪ್ಪತ್ತನೆಯ ಶತಮಾನದ ದೈತ್ಯ ಪ್ರತಿಭೆ ಕುವೆಂಪು ಕಾವ್ಯದಲ್ಲಿ ಕಾಣುವ ಮೃದು ಮಧುರ ಪದಬಂಧ, ಬಗೆಯ ಭಾವದ ಐಸಿರಿ, ಭಾವದ ರಸಪ್ರವಾಹ, ಕಾವ್ಯಾಲಂಕಾರ, ಉಕ್ತಿ ಚಮತ್ಕಾರಗಳ ವೈಭವವು ಸಹೃದಯರನ್ನು ರೋಮಾಂಚನಗೊಳಿಸುತ್ತದೆ ಎಂದು ತಿಳಿಸಿದರು.
ಮಾವು ಬೆಳಗಾರರ ಸಂಘದ ಜಿಲ್ಲಾಧ್ಯಕ್ಷ ಧರಣೀಶ್ ರಾಂಪುರ ಮಾತನಾಡಿ, ಕುವೆಂಪುರವರು ಮೂಲತಃ ಕ್ರಾಂತಿಕವಿ. ಸಾಮಾಜಿಕ ಅನ್ಯಾಯಗಳ ಬಗ್ಗೆ ಮೊದಲಿನಿಂದಲೂ ನಿರ್ಭಯವಾಗಲಿ ಪ್ರತಿಭಟಿಸಿದ ಕವಿ. ಇವರು ಅಂದು ಮಾಡಿದ ಮಂತ್ರ ಮಾಂಗಲ್ಯ ಇಂದು ಕೊರೋನಾ ಲಾಕ್‍ಡಾನ್ ಸಮಯದಲ್ಲಿ ಜಾರಿಗೆ ಬಂತು. ಆಡಂಬರಗಳಿಗೆ ಅಂತ್ಯವಾಡಿ ಸರಳತೆಗೆ ಪ್ರಾಮುಖ್ಯತೆ ಕೊಡಿ ಎನ್ನುವ ಮಾತನ್ನು ಇಂದು ಅನುಸರಿಸುತ್ತಿದ್ದಾರೆ ಎಂದು ಹೇಳಿದರು.
ನಿವೃತ್ತ ಅಧ್ಯಾಪಕ ಎ.ಅಂಕಯ್ಯ ನಾಗವಾರ ಮಾತನಾಡಿ ಆಧುನಿಕ ಕನ್ನಡ ಸಾಹಿತ್ಯದಲ್ಲಿ ಕುವೆಂಪು ಅಲಂಕರಿಸದ ಸಾಹಿತ್ಯ ಪ್ರಕಾರವಿಲ್ಲ. ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿಯೂ ಒಂದೇ ಬಗೆಯಾದ ಯಶಸ್ಸನ್ನು ಗಳಿಸಿದ ಕವಿ. ಆ ಬಗೆಯ ವಿರಳರ ಪಂಕ್ತಿಯಲ್ಲಿ ಕನ್ನಡದ ಕುವೆಂಪು ಒಬ್ಬರು ಎಂದು ತಿಳಿಸಿದರು.
ತಾಲ್ಲೂಕು ಕಸಾಪ ಮಾಜಿ ಅಧ್ಯಕ್ಷ ಎಂ.ಶಿವಮಾದು ಮಾತನಾಡಿ, ಯಾವುದೇ ವ್ಯಕ್ತಿ ಜಾತಿಯಿಂದ ಮುಖ್ಯನಾಗಬಾರದು, ನೈತಿಕ ವ್ಯಕ್ತಿತ್ವದಿಂದ ಮುಖ್ಯನಾಗಬೇಕು ಎಂದಿದ್ದ ಕುವೆಂಪು ರಚಿಸಿರುವ ಮಹಾಕಾವ್ಯ, ಕಾದಂಬರಿ, ನಾಟಕ, ಕವಿತೆಗಳಲ್ಲಿ ಬಹುತೇಕ ಪಾತ್ರಗಳು ಅರಣ್ಯಾನುಭವಗಳೇ. ಕುವೆಂಪುರವರಲ್ಲಿ ಅದಮ್ಯವಾದ ನಿಸರ್ಗ ಪ್ರೀತಿ ಅವರ ಬರಹದಲ್ಲಿ ಹಾಸುಹೊಕ್ಕಾಗಿದೆ. ರೈತರ ಮೇಲಿದ್ದ ಕಾಳಜಿ ಎಂದು ಹೇಳಿದರು.
ಅಧ್ಯಾಪಕ ಸಿ.ಚನ್ನವೀರೇಗೌಡ ಮಾತನಾಡಿ ಕುವೆಂಪು ರವರು ಒಂದು ಸಣ್ಣ ವಸ್ತುವನ್ನು ಸಹ ಪ್ರೀತಿಸುತ್ತಿದ್ದರು. ಇವರು ಗೊಬ್ಬರದ ಮೇಲೆ ಕವಿತೆ ರಚಿಸಿದಾಗ ಕೆಲವರು ನಕ್ಕರು. ಗೊಬ್ಬರದ ಮೇಲೆ ಕವಿತೆ ರಚನೆ ಮಾಡಿದ್ದಾರೆ. ಒಂದು ವಸ್ತುವಿಗೆ ಆಗಲಿ, ಒಂದು ಸಸ್ಯಕ್ಕೆ ಆಗಲಿ ಜೀವ ತುಂಬುವ ಶಕ್ತಿ ಕವಿತೆಗಿದೆ ಎಂದ ಮೇಲೆ ಎಲ್ಲವನ್ನು ಒಪ್ಪಿಕೊಳ್ಳಬೇಕು ಎಂಬುದು ಇವರ ಅಭಿಪ್ರಾಯವಾಗಿತ್ತು ಎಂದು ಹೇಳಿದ್ದರು ಎಂದರು.
ಈ ಸಂದರ್ಭದಲ್ಲಿ ಪತ್ರಕರ್ತರಾದ ಲಕ್ಷ್ಮೀಪತಿ ಮಂಗಳವಾರಪೇಟೆ, ರಾಜೇಶ್ ಕೊಂಡಾಪುರ, ಕೃಷ್ಣಮೂರ್ತಿ, ನಿವೃತ್ತ ಪ್ರಾಂಶುಪಾಲ ಬಿ.ಪುಟ್ಟಲಿಂಗಯ್ಯ, ಲೇಖಕ ಶ್ರೀನಿವಾಸ ರಾಂಪುರ, ಕವಿಗಳಾದ ಮತ್ತೀಕೆರೆ ಬಿ.ಚಲುವರಾಜು, ಸೀಬನಹಳ್ಳಿ ಪಿ.ಸ್ವಾಮಿ, ಸಿ.ಎಸ್.ಸಿದ್ದಲಿಂಗಯ್ಯ, ಕೂರಣಗೆರೆ ಕೃಷ್ಣಪ್ಪ, ಮಂಜೇಶ್ ಬಾಬು, ಸಂದೇಶ್‍ಕುಂಬಾರ್, ಎಂ.ಟಿ.ನಾಗರಾಜು, ಶಿಕ್ಷಕ ಬಸವರಾಜು, ಎಲೆಕೇರಿ ಡಿ.ರಾಜಶೇಖರ್ ಮುಖಂಡರಾದ ಬಿ.ಟಿ.ದಿನೇಶ್, ನಾಗವಾರ ರಂಗಸ್ವಾಮಿ, ಮಂಗಳವಾರಪೇಟೆ ಅರುಣ್‍ಕುಮಾರ್, ರಾಮಚಂದ್ರು, ಬಿ.ಎನ್.ಕಾಡಯ್ಯ, ಪೂರ್ಣಚಂದ್ರ ಕೀಕರ್, ಚೌಡೇಗೌಡ, ಎಚ್.ಆರ್.ರಮೇಶ್, ಟಿ.ಎಂ.ಕೆಂಚೇಗೌಡ, ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಎಚ್.ಎಂ.ವೀಣಾ ಇನ್ನು ಮುಂತಾದವರು ಇದ್ದರು.
ಚೌ.ಪು.ಸ್ವಾಮಿ, ಚಕ್ಕೆರೆ ಲೋಕೇಶ್ ಕುವೆಂಪು ಗೀತೆಗಳನ್ನು ಹಾಡಿದರು.

Leave a Reply

Your email address will not be published. Required fields are marked *