ಸರ್ಕಾರಿ ನೌಕರರ ಸಂಘದಲ್ಲಿ ಪ್ರಾಮಾಣಿಕವಾಗಿ ಹಾಗೂ ಪಾರದರ್ಶಕವಾಗಿ ಕಾರ್ಯನಿರ್ವಹಿಸುತ್ತೇನೆ : ಕೆ. ಸತೀಶ್
ರಾಮನಗರ (hairamanagara.in) : ಸಂಘದ ಹಣ ದೇವರ ಹುಂಡಿಯ ಹಣ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ನೂತನ ಅದ್ಯಕ್ಷರಾದ ಕೆ. ಸತೀಶ್ ಅಭಿಪ್ರಾಯ ಪಟ್ಟರು.
ನಗರದ ಸ್ಪೂರ್ತಿ ಭವನದ ಮರಿದೇವರು ಸಭಾಂಗಣದಲ್ಲಿ ಏರ್ಪಡಿಸಿದ್ದ ನೂತನ ಅದ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಈ ಹಿಂದಿನ ಪ್ರಭಾರ ಅದ್ಯಕ್ಷರಾದ ಕೃಷ್ಣೇಗೌಡ ಅವರಿಂದ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ಸಂಘದ ಹಣವನ್ನ ದೇವರ ಹುಂಡಿಯ ಹಣವೆಂದು ಪರಿಭಾವಿಸಿ ಒಂದು ರುಪಾಯಿ ನಗದು ಹಣ ದುರುಪಯೋಗ ವಾಗದಂತೆ ನೊಡಿಕೊಂಡು ಪಾರದರ್ಶಕ ವಾಗಿ ಸಂಘ ಮತ್ತು ಸಂಘಟನೆಯನ್ನ ಮುನ್ನಡೆಸುವುದಾಗಿ ಪ್ರಮಾಣ ಮಾಡಿದರು .

ದಿವಂಗತ ಮರಿದೇವರು ಮತ್ತು ನಿಕಟಪೂರ್ವ ಅದ್ಯಕ್ಷರಾದ ಆರ್.ಕೆ. ಬೈರಲಿಂಗಯ್ಯ ಅವರುಗಳು ನಡೆದ ಮತ್ತು ಹಾಕಿಕೊಟ್ಟ ಮಾರ್ಗದಲ್ಲಿ ನೌಕರರ ಹಿತಕಾಪಾಡುವ ಜೊತೆಗೆ ಜನಸ್ನೇಹಿ ಯಶಸ್ವಿ ಕಾರ್ಯಕ್ರಮ ಗಳನ್ನ ಮಾಡುವ ಮೂಲಕ ನನಗೆ ತಾವು ಕೊಟ್ಟಿರುವ ಈ ಸ್ಥಾನ ಮಾನಕ್ಕೆ ಎಂದೂ ಚ್ಯುತಿ ಬಾರದ ರೀತಿಯಲ್ಲಿ ನ್ಯಾಯ ಒದಗಿಸಿ ಕೊಡುವುದಾಗಿ ತಿಳಿಸಿದರು.
ರಾಜ್ಯಾದ್ಯಕ್ಷರಾದ ಷಡಾಕ್ಷರಿ ಅವರ ಸಲಹೆ ಯಂತೆ ರಾಜ್ಯ ಸರ್ಕಾರಿ ನೌಕರರಿಗೆ, ಕೇಂದ್ರ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರ ನೀಡುವ ವೇತನಕ್ಕೆ ಸರಿ ಸಮಾನವಾಗಿ ನಮ್ಮ ರಾಜ್ಯದ ಸರ್ಕಾರಿ ನೌಕರರಿಗೆ ವೇತನ ನೀಡಲು ರಾಜ್ಯ ಸರ್ಕಾರ ವನ್ನ ಒತ್ತಾಯಿಸಿ ಮೊದಲ ಹಂತವಾಗಿ ಸ್ಥಳೀಯ ಜನ ಪ್ರತಿನಿಧಿಗಳಿಗೆ ಮನವಿ ಪತ್ರವನ್ನ ಕೊಡುವ ದಿನಾಂಕ ದಂದು ಎಲ್ಲಾ ಇಲಾಖೆಯ ನೌಕರರು, ಸಂಘದ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದು ಜಿಲ್ಲಾ ಸಂಘಕ್ಕೆ ಶಕ್ತಿಯನ್ನು ತುಂಬ ಬೇಕಿದೆ ಎಂದರು.

ಇದೇ ಸಂದರ್ಭದಲ್ಲಿ ಮೈಸೂರಿನ ಶರಣು ವಿಶ್ವ ವಚನ ಫೌಂಡೇಷನ್ ನೀಡುವ ‘ವಚನ ಕೋಗಿಲೆ’ ಪ್ರಶಸ್ತಿಗೆ ಭಾಜನರಾಗಿರುವ ರಾಮನಗರ ತಾಲ್ಲೂಕಿನ ಕೂಟಗಲ್ ಹೋಬಳಿಯ ದೊಡ್ಡಗಂಗವಾಡಿ ಗ್ರಾಮದ ಡಿ.ವಿ. ಪರಿಣಿತಮೂರ್ತಿ ಅವರನ್ನು ಸನ್ಮಾನಿಸಲಾಯಿತು. ನೂತನ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಚನ್ನಪಟ್ಟಣ ತಾಲ್ಲೂಕು ಅದ್ಯಕ್ಷ ಚಂದ್ರ ಶೇಖರ್, ಕನಕಪುರ ತಾಲ್ಲೂಕು ಅದ್ಯಕ್ಷ ಚಿಕ್ಕೆಂಪೇಗೌಡ, ಮಾಗಡಿ ಅದ್ಯಕ್ಷ ಶಿವರಾಮಯ್ಯ , ರಾಜ್ಯ ಪರಿಷತ್ ಸದಸ್ಯ ಸುರೇಂದ್ರ.ಬಿ.ಎಲ್. ಪ್ರಚಾರ ಸಮಿತಿ ಕಾರ್ಯದರ್ಶಿ ಶಿವಸ್ವಾಮಿ, ಪಾದರಹಳ್ಳಿ ಸತೀಶ್. ಕೊಶಾದ್ಯಕ್ಷರಾದ ನರಸಯ್ಯ.ಉಪಾಧ್ಯಕ್ಷರಾದ ಚಂದ್ರಹಾಸ, ದೊಡ್ಡಾಲಹಳ್ಳಿ ಪುಟ್ಟಸ್ವಾಮಿಗೌಡ, ಎಲ್ಲಾ ಇಲಾಖೆಯ ನಿರ್ದೇಶಕರು, ಪದಾಧಿಕಾರಿಗಳು ಹಾಜರಿದ್ದರು.