ಒಡಂಬಡಿಕೆಯಂತೆ ರಾಜೀನಾಮೆ ನೀಡದೆ ಹೋದರೆ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ : ಎಚ್ಚರಿಕೆ
ಚನ್ನಪಟ್ಟಣ : ಪ್ರಾಥಮಿಕ ಕೃಷಿ ಮತ್ತು ಭೂ ಅಭಿವೃದ್ಧಿ ಬ್ಯಾಂಕ್(ಪಿಎಲ್‍ಡಿ) ಅಧ್ಯಕ್ಷ ಸ್ಥಾನಕ್ಕೆ ಗೋವಿಂದಹಳ್ಳಿ ನಾಗರಾಜು ಅವರು ರಾಜೀನಾಮೆ ನೀಡದೆ ಅಧಿಕಾರಕ್ಕೆ ಅಂಟಿಕೊಂಡು ಕೂತಿದ್ದು, ಅವರು ಒಡಂಬಡಿಕೆಯಂತೆ ತಕ್ಷಣ ರಾಜೀನಾಮೆ ನೀಡದೇ ಹೋದರೆ, ನಮ್ಮ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇವೆ ಎಂದು ಬ್ಯಾಂಕ್‍ನ 4 ಮಂದಿ ಜೆಡಿಎಸ್ ಬೆಂಬಲಿತ ನಿರ್ದೇಶಕರು ಎಚ್ಚರಿಕೆ ನೀಡಿದ್ದಾರೆ.
ಖಾಸಗಿ ಹೋಟೆಲ್‍ನಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ನಿರ್ದೇಶಕರು, ಅಧ್ಯಕ್ಷಸ್ಥಾನದ ಚುನಾವಣೆಯ ವೇಳೆ ಜೆಡಿಎಸ್ ಪಕ್ಷದ ನಾಲ್ಕು ಮಂದಿ ನಿರ್ದೇಶಕರು ಆಕಾಂಕ್ಷಿಗಳಾಗಿದ್ದವು. ಪಕ್ಷದ ಹಿರಿಯ ಮುಖಂಡರ ಮಾತಿಗೆ ಬೆಲೆ ನೀಡಿ 2 ವರ್ಷಗಳ ಅವಧಿಗೆ ಗೋವಿಂದಹಳ್ಳಿ ನಾಗರಾಜು ಅವರಿಗೆ ಅಧ್ಯಕ್ಷಸ್ಥಾನ ನೀಡಲಾಗಿತ್ತು. ಆದರೆ, ಅವರು ಅಧ್ಯಕ್ಷರಾಗಿ ಮೂರುವರ್ಷ ನಾಲ್ಕು ತಿಂಗಳು ಕಳೆದಿದೆಯಾದರೂ ಇನ್ನೂ ರಾಜೀನಾಮೆ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೊಡ್ಡವರಿಗೆ ಮಾತಿಗೆ ಬೆಲೆ ನೀಡಿದ್ದೇ ತಪ್ಪೇ?:
ಪಕ್ಷದ ಹಿರಿಯ ಮುಖಂಡರು ಮತ್ತು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ಮಾತಿಗೆ ಬೆಲೆ ನೀಡಿ ಗೋವಿಂದಹಳ್ಳಿ ನಾಗರಾಜು ಅವರನ್ನು ಅಧ್ಯಕ್ಷರನ್ನಾಗಿ ಮಾಡಿದೆವು. ತಾಲೂಕು ಜೆಡಿಎಸ್ ಅಧ್ಯಕ್ಷರು ಹಾಗೂ ಕೆಲ ಮುಖಂಡರ ಸಮ್ಮುಖದಲ್ಲಿ ನಡೆದ ಮಾತುಕತೆಯ ವೇಳೆ ಎರಡು ವರ್ಷ ನಾಗರಾಜು ಅವರಿಗೆ, ಉಳಿದ ಅವಧಿ ಇನ್ನು ಮೂರು ಮಂದಿಗೆ ಎಂದು ತೀರ್ಮಾನಿಸಲಾಗಿತ್ತು. ದೊಡ್ಡವರ ಮಾತಿಗೆ ಬೆಲೆನೀಡಿ ಅವರಿಗೆ ಸ್ಥಾನ ಬಿಟ್ಟಿಕೊಟ್ಟಿದ್ದೇ ತಪ್ಪೇ ಎಂದು ಪ್ರಶ್ನಿಸಿದರು.
ಈ ಗಾಗಲೇ ಹೆಚ್ಚುವರಿಯಾಗಿ ಒಂದುವರ್ಷ ನಾಲ್ಕು ತಿಂಗಳು ಅಧಿಕಾರ ಅನುಭವಿಸಿದ್ದಾರೆ. ರಾಜೀನಾಮೆ ನೀಡುವಂತೆ ಕೇಳಿದೆ ಸಂಪೂರ್ಣ ಸಾಲ ವಸೂಲಿ ಮಾಡಿಸಿ ಅಧಿಕಾರ ಬಿಟ್ಟು ಕೊಡುತ್ತೇನೆ ಎಂದು ಇಲ್ಲದ ಸಬೂಬು ಹೇಳುತ್ತಿದ್ದಾರೆ. ಈಬಗ್ಗೆ ಕ್ಷೇತ್ರದ ಶಾಸಕರಾಗಿರುವ ಎಚ್.ಡಿ.ಕುಮಾರಸ್ವಾಮಿ ಅವರ ತೋಟದಮನೆಗೆ ಹೋಗಿ ಈ ಬಗ್ಗೆ ಮಾಹಿತಿ ನೀಡಿದ್ದೇವೆ. ಸ್ಥಳೀಯ ಮುಖಂಡರ ಗಮನಕ್ಕೂ ತಂದಿದ್ದೇವೆ, ತಾಲೂಕು ಅಧ್ಯಕ್ಷರು ಸೇರಿದಂತೆ ಯಾರೂ ನಮ್ಮ ಸಮಸ್ಯೆಯ ಬಗ್ಗೆ ಗಮನಹರಿಸುತ್ತಿಲ್ಲ ಎಂದು ತಮ್ಮ ಅಸಮಾಧಾನವನ್ನು ತೋಡಿಕೊಂಡರು.
15 ದಿನ ಗಡುವು:
ಗೋವಿಂದಹಳ್ಳಿ ನಾಗರಾಜು ಅವರು ಮಾತುಕತೆಯಂತೆ ಇನ್ನೊಂದು ವಾರದೊಳಗೆ ರಾಜೀನಾಮೆ ನೀಡಬೇಕು. ಕ್ಷೇತ್ರದ ಶಾಸಕರಾಗಿರುವ ಎಚ್.ಡಿ.ಕುಮಾರಸ್ವಾಮಿ ಹಾಗೂ ಪಕ್ಷದ ಮುಖಂಡರು ಅವರಿಗೆ ಹೇಳಿ ರಾಜೀನಾಮೆ ಕೊಡಿಸುವ ಕೆಲಸ ಮಾಡಬೇಕು. ನಾವು ಪಕ್ಷಕ್ಕಾಗಿ ದುಡಿದಿದ್ದೇವೆ. ಪಕ್ಷದಲ್ಲೇ ಇದ್ದೇವೆ. ಪಕ್ಷದ ವರೀಷ್ಟರು ನಮ್ಮನ್ನು ಕಡೆಗಣಿಸಿದರೆ ನಾವು ಮುಂದಿನ ದಿನಗಳಲ್ಲಿ ಏನು ಮಾಡಬೇಕು ಎಂಬುದನ್ನು ನಿರ್ಧರಿಸುತ್ತೇವೆ ಎಂದು ಎಚ್ಚರಿಕೆಯ ಸಂದೇಶ ರವಾನಿಸಿದರು.
ಬರಿ ನಾಲ್ಕು ಮಂದಿ ಸಾಕೇ..?:
ಪತ್ರಿಕೆಗೆ ಪ್ರತಿಕ್ರಿಯಿಸಿದ ಕೆಲ ನಿರ್ದೇಶಕರು ಕ್ಷೇತ್ರದ ಶಾಸಕರಾಗಿರುವ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಹಣ ಬಲ ಹೊಂದಿರುವ ನಾಲ್ಕೈದು ಮಂದಿಗೆ ಮಾತ್ರ ಪ್ರಾಶಸ್ತ್ಯ ನೀಡುತ್ತಿದ್ದಾರೆ. ಅವರು ಮಾತ್ರ ಎಲ್ಲಾ ಅಧಿಕಾರ ಅನುಭವಿಸುತ್ತಿದ್ದಾರೆ.ಪಕ್ಷದಕ್ಕಾಗಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ದುಡಿದಿರುವ ಪ್ರಾಮಾಣಿಕ ಕಾರ್ಯಕರ್ತರು ಕಾರ್ಯಕರ್ತರಾಗೇ ಉಳಿದು ಕೊಂಡಿದ್ದಾರೆ. ಹೀಗೆ ಮುಂದುವರೆದರೆ ಪಕ್ಷ ಅವನತಿಯ ಹಾದಿ ಹಿಡಿಯುತ್ತದೆ. ಇದನ್ನು ಗಂಭೀರವಾಗಿ ಪರಿಗಣಿಸ ಬೇಕು ಎಂದರು.
ಸುದ್ದಿಗೋಷ್ಟಿಯಲ್ಲಿ ಪಿಎಲ್‍ಡಿ ಬ್ಯಾಂಕ್ ನಿರ್ದೇಶಕರಾದ ಗಂಗರಾಜು, ಬೈರನರಸಿಂಹಯ್ಯ, ಕೃಷ್ಣಪ್ಪ, ಹೊಂಬಾಳಮ್ಮ ಉಪಸ್ಥಿತರಿದ್ದರು.