ಜೆಡಿಎಸ್-ಕಾಂಗ್ರೆಸ್ ಸದಸ್ಯರ ವಾಕ್ಸಮರ : ಹಳೆಯದನ್ನು ಹಿಡಿದು ಎಳೆದಾಡುವುದು ಬೇಡ : ಮುಂದೇನಾಗಬೇಕು ಎಂಬುದನ್ನು ಯೋಚಿಸಿ : ಎಚ್.ಡಿ. ಕುಮಾರಸ್ವಾಮಿ

ಚನ್ನಪಟ್ಟಣ : ನಗರಸಭೆಯಲ್ಲಿ ಪ್ರಥಮ ಸಾಮಾನ್ಯ ಸಭೆ ನಡೆಯಿತು. ಈ ಸಂದರ್ಭದಲ್ಲಿ ಜೆಡಿಎಸ್-ಕಾಂಗ್ರೆಸ್ ಸದಸ್ಯರ ನಡುವೆ ವಾಕ್ಸಮರ ನಡೆಯಿತು.
ನಗರದಲ್ಲಿ ನನಗೆಗುದಿಗೆ ಬಿದ್ದಿರುವ ಯುಜಿಡಿ ಕಾಮಗಾರಿಯ ಬಗ್ಗೆ ಜಲಮಂಡಳಿ ಅಧಿಕಾರಿಗಳ ವಿರುದ್ಧ ಕಾಂಗ್ರೆಸ್ ಸದಸ್ಯ ವಾಸೀಲ್‍ಆಲಿಖಾನ್ ವಾಗ್ದಾಳಿ ನಡೆಸಿದರು. ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಜೆಡಿಎಸ್ ಸದಸ್ಯ ರಫೀಕ್ ನೀವು 20 ವರ್ಷದಿಂದ ಅಧಿಕಾರದಲ್ಲಿ ಇದ್ದೀರಿ ಆಗ ಏನೂ ಮಾಡದೆ ಇದೀಗ ಬಂದಿದ್ದೀರ ಎಂದು ಆಕ್ಷೇಪ ವ್ಯಕ್ತಪಡಿಸಿದರು. ರಫೀಕ್ ಬೆಂಬಲಕ್ಕೆ ಜೆಡಿಎಸ್‍ನ ಮತ್ತೊಬ್ಬ ಸದಸ್ಯ ಮಂಜುನಾಥ್ ಸಹ ದನಿಗೂಡಿಸಿದರು. ಇದರಿಂದಾಗಿ ಕೆಲಕಾಲ ಸಭೆಯಲ್ಲಿ ಬಿಗುವಿನ ವಾತಾವರಣ ನಿರ್ಮಾಣ ಗೊಂಡಿತ್ತು.
ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಶಾಸಕ ಎಚ್.ಡಿ.ಕುಮಾರಸ್ವಾಮಿ, ಹಳೆಯದನ್ನು ಹಿಡಿದು ಎಳೆದಾಡುವುದು ಬೇಡ, ಹಳೆಯದನ್ನು ಪ್ರಶ್ನೆಮಾಡಿಕೊಂಡು ಕುಳಿತರೆ ಪರಿಹಾರ ಸಿಗುವುದಿಲ್ಲ. 20 ವರ್ಷಗಳ ಹಿಂದೆ ಇದ್ದ ಅಧಿಕಾರಿ ಈಗ ಇಲ್ಲ, ಹಿಂದಿನ ವಿಚಾರಗಳನ್ನು ಬಿಟ್ಟು ಮುಂದೇನಾಗಬೇಕು ಎಂಬುದನ್ನು ಯೋಚಿಸಿ ಅದರಂತೆ ಕೆಲಸ ಮಾಡೋಣ ಎಂದು ಹೇಳುವ ಮೂಲಕ ವಿವಾದಕ್ಕೆ ತೆರೆಎಳೆದರು.
ರಾಮನಗರ ಮತ್ತು ಚನ್ನಪಟ್ಟಣ ನಗರಗಳಲ್ಲಿ ಎದುರಾಗಿರುವ ಕಸದ ಸಮಸ್ಯೆಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಮುಂದಿನವಾರ ಜಿಲ್ಲಾಧಿಕಾರಿ ಹಾಗೂ ಸಂಬಂಧಿಸಿದ ಅಧಿಕಾರಿಗಳ ಜೊತೆ ಸಭೆ ನಡೆಸುವುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಪುಣೆ ಮೂಲದ ಕಂಪನಿಯೊಂದು ವೈಜ್ಞಾನಿವಾಗಿ ಕಸ ವಿಲೇವಾರಿ ಮಾಡುವ ಸಂಬಂಧ ಪ್ರಸ್ತಾವನೆ ಸಲ್ಲಿಸಿದೆ. ಆಸಂಬಂಧ ಚರ್ಚಿಸಿ ಶೀಘ್ರಪರಿಹಾರ ಕಂಡುಕೊಳ್ಳಲಾಗುವುದು ಎಂದರು.
ತ್ಯಾಜ್ಯ ವಿಲೇವಾರಿ ದಿನದಿಂದ ದಿನಕ್ಕೆ ಬಹುದೊಡ್ಡ ಸಮಸ್ಯೆಯಾಗಿದೆ. ಕಣ್ವ ಸಮೀಪ ನೀಡಲಾಗಿದ್ದ ಡಂಪಿಂಗ್‍ಯಾರ್ಡ್ ನಲ್ಲಿ ಕಸ ಸುರಿಯುವುದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದರು. ತಾತ್ಕಾಲಿಕವಾಗಿ ಖಾಸಗಿ ಜಮೀನಿನನ್ನು ಹುಡುಕಿ ಕಸ ವಿಲೇವಾರಿ ಮಾಡಲಾಗುತ್ತಿದೆ. ಆದರೆ, ಅಲ್ಲಿನ ಜನರೂ ವಿರೋಧ ಮಾಡುತ್ತಿದ್ದಾರೆ. ಕಸ ಎಲ್ಲಿ ಸುರಿಯುವುದು ಎಂಬುದೇ ಕಗ್ಗಂಟಾಗಿದೆ ಎಂದು ತ್ಯಾಜ್ಯ ವಿಲೇವಾರಿ ಸಮಸ್ಯೆಯ ಬಗ್ಗೆ ಅವರು ಮಾಹಿತಿ ನೀಡಿದರು.
ಹೊಸ ಪೈಪ್‍ಲೈನ್‍ಗೆ ಚಿಂತನೆ: ಕೋರ್ಟ್ ಸಮೀಪದ ಕುಡಿಯುವ ನೀರಿನ ಟ್ಯಾಂಕ್‍ನಲ್ಲಿ ಮಹಿಳೆ ಅಂಗಾಂಗ ಪತ್ತೆಯಾದ ಹಿನ್ನೆಲೆಯಲ್ಲಿ ಈ ಪೈಪ್‍ಲೈನ್ ಮೂಲಕ ನೀರು ಸರಬರಾಜು ಸ್ಥಗಿತ ಗೊಂಡಿದ್ದು, ಅಲ್ಲಿನ ಜನತೆ ನೀರು ಸರಬರಾಜಾಗುತ್ತಿಲ್ಲ ಎಂದು ದೂರಿದ್ದಾರೆ. ಹೊಸದಾಗಿ ಪೈಪ್‍ಲೈನ್ ಅಳವಡಿಕೆ ಮಾಡಬೇಕಿದೆ. ಕೆಲವರು ಹಳೆ ಪೈಪ್‍ಲೈನ್ ಅನ್ನೇ ಶುಚಿಗೊಳಿಸಿ ನೀರು ಸರಬರಾಜು ಮಾಡಿ ಎಂದು ಒತ್ತಾಯ ಮಾಡುತ್ತಿದ್ದಾರೆ. ಆದರೆ, ಈ ನೀರು ಕುಡಿಯಲು ಜನರಿಗೆ ಮುಜುಗರ ವಾಗುತ್ತದೆ. ಈ ಹಿನ್ನೆಲೆಯಲ್ಲಿ ಹೊಸ ಪೈಪ್‍ಲೈನ್ ಅಳವಡಿಸುವಂತೆ ನಾನು ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಿದ್ದೇನೆ 60 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ಕಾಮಗಾರಿ ಆರಂಭವಾಗಲಿದೆ ಎಂದು ತಿಳಿಸಿದರು.
ಹೊಸ ಪೈಪ್‍ಲೈನ್ ನಿರ್ಮಾಣವಾಗುವ ವರೆಗೆ ಹೊಸದಾಗಿ ನಾಲ್ಕು ಬೋರ್‍ವೆಲ್ ಕೊರೆಸಿ ನೀಡು ಪೂರೈಕೆ ಮಾಡಿ, ಕೆಟ್ಟಿರುವ ಬೋರ್‍ವೆಲ್‍ಗಳನ್ನು ದುರಸ್ಥಿಗೊಳಿಸಿ, ಮುಂದೆ ಬೇಸಿಗೆ ಎದುರಾಗಲಿದ್ದು, ಜನರಿಗೆ ಯಾವುದೇ ಕಾರಣಕ್ಕೂ ನೀರಿನ ಸಮಸ್ಯೆ ಎದುರಾಗದ ರೀತಿಯಲ್ಲಿ ಕೆಲಸ ಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಇದೇ ಸಂದರ್ಭದಲ್ಲಿ ನಗರದಲ್ಲಿ 25 ಶುದ್ಧ ಕುಡಿಯುವ ನೀರಿನ ಘಟಕಗಳ ಪೈಕಿ ಸಾಕಷ್ಟು ಘಟಕಗಳು ನಿರ್ವಹಣೆ ಇಲ್ಲದೆ ಸ್ಥಗಿತಗೊಂಡಿವೆ. ಖಾಸಗಿಯವರು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಈಬಗ್ಗೆ ಗಮನಗರಿಸಿ ನಗರದ ಜನತೆಗೆ ಶುದ್ಧ ಕುಡಿಯುವ ನೀರು ದೊರೆಯುವಂತೆ ಮಾಡಬೇಕು ಎಂದು ಸದಸ್ಯರು ಸಭೆಯಲ್ಲಿ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಚ್‍ಡಿಕೆ, ಜಲಮಂಡಳಿ ಮೂಲಕ ನಿರ್ವಹಣೆಗೆ ಕ್ರಮಕೈಗೊಳ್ಳುವಂತೆ ಸೂಚಿಸಿದರು. ಅಗತ್ಯವಿದ್ದಲ್ಲಿ ಹೆಚ್ಚುವರಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸುವಂತೆ ತಿಳಿಸಿದ ಅವರು, ಪ್ರತಿ ವಾರ್ಡ್‍ಗೂ ಒಂದೊಂದು ಶುದ್ಧ ಕುಡಿಯುವ ನೀರಿನ ಘಟಕ ಇರಲಿ ಎಂದು ಸಲಹೆ ನೀಡಿದರು.
ವಾಕಿಂಗ್ ಪಾಥ್ ಅಭಿವೃದ್ಧಿ: ನಗರವಾಸಿಗಳ ವಾಯುವಿಹಾರಕ್ಕೆ ಸೂಕ್ತ ಸ್ಥಳವಿಲ್ಲದೆ ಹೆದ್ದಾರಿಯನ್ನೇ ಆಶ್ರಯಿಸುವಂತಾಗಿದೆ. ಇದಕ್ಕಾಗಿ ನಗರದ ಶೆಟ್ಟಿಹಳ್ಳಿ ಕೆರೆ ಮತ್ತು ಕುಡಿನೀರು ಕಟ್ಟೆ ಸುತ್ತಲೂ ಸುಸಜ್ಜಿತ ವಾಕಿಂಗ್ ಪಾಥ್ ನಿರ್ಮಾಣಕ್ಕೆ ಕ್ರಿಯಾಯೋಜನೆ ಸಿದ್ದಪಡಿಸುವಂತೆ ಕುಮಾರಸ್ವಾಮಿ ನಗರಸಭಾ ಅಧಿಕಾರಿಗಳಿಗೆ ಸೂಚಿಸಿದರು.
ಗುಣಮಟ್ಟದ ಕೆಲಸವಾಗಲಿ: ನನ್ನ ಅವಧಿಯಲ್ಲಿ ಸಾಕಷ್ಟು ಅನುದಾನ ತಂದಿದ್ದೇನೆ ಆದರೂ ನಿರೀಕ್ಷಿತ ಮಟ್ಟದಲ್ಲಿ ಕೆಲಸ ನಡೆಯುತ್ತಿಲ್ಲ. ಗುಣಮಟ್ಟದ ಕೆಲಸ ನಡೆಯುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ. ನಗರಸಭಾ ಸದಸ್ಯರು ತಮ್ಮ ವಾರ್ಡ್ ವ್ಯಾಪ್ತಿಯಲ್ಲಿ ಖುದ್ದು ನಿಂತು ಕೆಲಸ ಮಾಡಿಸಿ. ನಿಮಗೆ ಎಷ್ಟು ಅನುದಾನ ಬೇಕಾದರೂ ತಂದು ಕೊಡುತ್ತೇನೆ. ಇದರಲ್ಲಿ ಯಾವುದೇ ಅನುಮಾನ ಬೇಡ. ನಿಮ್ಮ ವಾರ್ಡ್‍ನಲ್ಲಿ ನಡೆಯ ಬೇಕಿರುವ ಕಾಮಗಾರಿಗಳ ಪಟ್ಟಿಯನ್ನು ನನಗೆ ನೀಡಿ, ನಾನು ಪಕ್ಷಾತೀತವಾಗಿ ಯಾವುದೇ ತಾರತಮ್ಯ ಮಾಡದೆ ಅನುದಾನ ತಂದು ಕೊಡುತ್ತೇನೆ. ಜನತೆಗೆ ಒಳ್ಳೆ ಕೆಲಸವಾಗಬೇಕು ಎಂದು ಸದಸ್ಯರಿಗೆ ಸಲಹೆ ನೀಡಿದರು.
ಸ್ಲಂಬೋರ್ಡ್ ಹಣ ಬಿಡುಗಡೆಯಾಗಿಲ್ಲ: ನಗರದಲ್ಲಿ ಸ್ಲಂ ಬೋರ್ಡ್‍ವತಿಯಿಂದ ಕೈಗೊಂಡಿರುವ ಹೊಸ ಮನೆಗಳ ನಿರ್ಮಾಣ ಕಾಮಗಾರಿ ಅರ್ಧಕ್ಕೆ ನಿಂತಿದೆ. ಫಲಾನುಭವಿಗಳಿಗೆ ಹಣ ಬಿಡುಗಡೆಯಾಗಿಲ್ಲ. ಮನೆ ಪೂರ್ಣ ಗೊಳ್ಳದೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಕೂಡಲೇ ಈ ಬಗ್ಗೆ ಗಮನಹರಿಸ ಬೇಕು ಎಂದು ಸದಸ್ಯರು ಆಗ್ರಹಿಸಿದರು. ತಕ್ಷಣ ಸ್ಲಂಬೋರ್ಡ್ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಕುಮಾರಸ್ವಾಮಿ, ಕೂಡಲೇ ಹಣ ಬಿಡುಗಡೆ ಮಾಡುವಂತೆ ತಾಕೀತು ಮಾಡಿದರು.
ಸಭೆಯಲ್ಲಿ ವಿವಿಧ ಕಾಮಗಾರಿಗಳು ಹಾಗೂ ಯೋಜನೆಗಳಿಗೆ ಅನುಮೋದನೆ ತೆಗೆದು ಕೊಳ್ಳಲಾಯಿತು. ಸಭೆಯ ಅಧ್ಯಕ್ಷತೆಯನ್ನು ನಗರಸಭಾ ಅಧ್ಯಕ್ಷ ಪ್ರಶಾಂತ್ ವಹಿಸಿದ್ದರು. ಉಪಾಧ್ಯಕ್ಷೆ ಹಸೀನಾ ಫಾರ್ಹೀನ್, ಪೌರಾಯುಕ್ತ ಶಿವನಾಂಕರೇಗೌಡ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *