ಮಕ್ಕಳ ಪುಸ್ತಕಗಳ ಪ್ರಕಟಣೆಗೆ ‘ಕಿಂಡರ್ ಕಥಾ’ದಿಂದ ಪ್ರಸ್ತಾವನೆಗಳ ಆಹ್ವಾನ

  • ಪ್ರಸ್ತಾವನೆ ಸಲ್ಲಿಕೆಗೆ ಜನವರಿ ೩೧ ಕೊನೆಯ ದಿನಾಂಕ
  • ಇಪ್ಪತ್ತು ಪುಸ್ತಕಗಳ ಪ್ರಕಟಣೆಯ ಯೋಜನೆ
  • ಮಕ್ಕಳ ಸಾಹಿತಿಗಳು ಹಾಗು ಚಿತ್ರಕಾರರಿಗೆ ಸದವಕಾಶ

ಬೆಂಗಳೂರಿನ ಗ್ಯೋಥೆ ಇನ್ಸ್‌ಟಿಟ್ಯೂಟ್ / ಮ್ಯಾಕ್ಸ್ ಮ್ಯುಲ್ಲರ್ ಭವನ್ ತನ್ನ ‘ಕಿಂಡರ್ ಕಥಾ’ ಕಾರ್ಯಕ್ರಮದಡಿಯಲ್ಲಿ ನವಕರ್ನಾಟಕ ಪ್ರಕಾಶನದ ಸಹಯೋಗದಲ್ಲಿ ಕನ್ನಡದ ಮಕ್ಕಳ ಪುಸ್ತಕಗಳನ್ನು ಹೊರತರಲು ಉದ್ದೇಶಿಸಿದ್ದು, ಆಸಕ್ತ ಲೇಖಕರು ಹಾಗೂ ಚಿತ್ರಕಾರರಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಗ್ಯೋಥೆ ಇನ್ಸ್‌ಟಿಟ್ಯೂಟ್ / ಮ್ಯಾಕ್ಸ್ ಮ್ಯುಲ್ಲರ್ ಭವನ್ ರೂಪಿಸಿರುವ ಕಿಂಡರ್ ಕಥಾ ಯೋಜನೆಯು ಪ್ರಾದೇಶಿಕ ಭಾಷೆಗಳಲ್ಲಿ ಮಕ್ಕಳ ಸಾಹಿತ್ಯ ರಚನೆಯನ್ನು ಪ್ರೋತ್ಸಾಹಿಸುತ್ತಿದೆ. ಈ ಯೋಜನೆಯ ಅಂಗವಾಗಿ ಕಾರ್ಯಾಗಾರ, ವಿಚಾರಗೋಷ್ಠಿ, ಪುಸ್ತಕ ಸಂವಾದಗಳ ಆಯೋಜನೆ, ಹಾಗೂ ಪ್ರಕಾಶಕರಿಗೆ ನೆರವು ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

ಸದ್ಯ ಇದೇ ಯೋಜನೆಯ ಅಂಗವಾಗಿ ಕನ್ನಡದಲ್ಲಿ ಹೊಸ ಮಕ್ಕಳ ಪುಸ್ತಕಗಳನ್ನು ರಚಿಸುವ ಅವಕಾಶಕ್ಕಾಗಿ ಲೇಖಕರು ಮತ್ತು ಚಿತ್ರಕಾರರಿಂದ ಪ್ರಸ್ತಾವನೆಗಳನ್ನು ಆಹ್ವಾನಿಸಲಾಗುತ್ತಿದೆ.

ಈ ಕಾರ್ಯಕ್ರಮದ ಅಡಿಯಲ್ಲಿ ನವಕರ್ನಾಟಕ ಪ್ರಕಾಶನವು ಮಕ್ಕಳಿಗಾಗಿ ಇಪ್ಪತ್ತು ಪುಸ್ತಕಗಳನ್ನು ಪ್ರಕಟಿಸಲಿದೆ. ಈ ಪೈಕಿ ೮-೧೨ ವರ್ಷ ವಯೋಮಾನದ ಮಕ್ಕಳಿಗಾಗಿ ಹತ್ತು ಚಿತ್ರದ ಪುಸ್ತಕಗಳು ಹಾಗೂ ೧೨-೧೬ ವರ್ಷ ವಯೋಮಾನದ ಮಕ್ಕಳಿಗಾಗಿ ಹತ್ತು ಕತೆ ಪುಸ್ತಕಗಳು ಇರಲಿವೆ. ಕನ್ನಡದ ಹೆಸರಾಂತ ಮಕ್ಕಳ ಸಾಹಿತಿಗಳೂ ಈ ಪೈಕಿ ಕೆಲ ಪುಸ್ತಕಗಳನ್ನು ರಚಿಸಲಿದ್ದಾರೆ.

ಮಕ್ಕಳ ಕೃತಿಗಳು ಈವರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕಟವಾಗಿರದ ವಿಷಯಗಳಿಗೆ (ಉದಾ: ಸಾಮಾಜಿಕ ಸಮಸ್ಯೆಗಳು, ಮಕ್ಕಳ ಹಕ್ಕುಗಳು, ವೈವಿಧ್ಯತೆ ಮತ್ತು ಒಳಗೊಳ್ಳುವಿಕೆ, ಶೋಷಿತರ ದನಿ, ಕೃಷಿ, ಪರಿಸರ, ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್, ಗಣಿತ, ಆರೋಗ್ಯ, ಹಾಗೂ ಕರ್ನಾಟಕದ ವೈಶಿಷ್ಟ್ಯಗಳು) ಈ ಕಾರ್ಯಕ್ರಮದಲ್ಲಿ ಆದ್ಯತೆ ಇರಲಿದೆ.

ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಯಸುವ ಲೇಖಕರು ತಾವು ಬರೆಯಲಿರುವ ಪುಸ್ತಕದ ಸಾರಾಂಶ (ಕೃತಿಯ ಹೆಸರು, ವಿಷಯ, ಸಂಕ್ಷಿಪ್ತ ಪರಿಚಯ ಸೇರಿ ಚಿತ್ರದ ಪುಸ್ತಕಗಳಿಗೆ ಗರಿಷ್ಠ ೨೫೦ ಪದ ಹಾಗೂ ಕತೆ ಪುಸ್ತಕಗಳಿಗಾಗಿ ಗರಿಷ್ಠ ೫೦೦ ಪದ) ಹಾಗೂ ಮಕ್ಕಳ ಸಾಹಿತ್ಯದಲ್ಲಿ ತಮ್ಮ ಸಾಧನೆ ವಿವರಿಸುವ ಸ್ವಪರಿಚಯವನ್ನು ಸಲ್ಲಿಸಬೇಕು.

ಪುಸ್ತಕಕ್ಕಾಗಿ ಆರಿಸಿಕೊಳ್ಳಲಾದ ವಿಷಯಗಳನ್ನು ಕತೆಯ ರೂಪದಲ್ಲಿ ಹಾಗೂ ಉದ್ದೇಶಿತ ವಯೋಮಾನಕ್ಕೆ ಸೂಕ್ತವಾದ ರೀತಿಯಲ್ಲಿ ಹೇಳಬೇಕಾದ್ದು ಅಪೇಕ್ಷಣೀಯ. ಈಗಾಗಲೇ ಬೇರೆಡೆ ಪ್ರಕಟವಾದ ಬರಹಗಳಿಗೆ, ಅಥವಾ ಅವುಗಳ ಸಂಕಲನಕ್ಕೆ ಅವಕಾಶ ಇರುವುದಿಲ್ಲ.

ಇದೇ ರೀತಿ, ಚಿತ್ರಕಾರರು ತಾವು ಮಕ್ಕಳಿಗಾಗಿ ಬರೆದ ಕನಿಷ್ಠ ಐದು ಚಿತ್ರಗಳನ್ನು ತಮ್ಮ ಸ್ವಪರಿಚಯದೊಂದಿಗೆ ಕಳುಹಿಸಿಕೊಡಬೇಕು. ಚಿತ್ರಗಳು ಈಗಾಗಲೇ ಬೇರೆಡೆ ಪ್ರಕಟವಾಗಿದ್ದರೆ, ಅವು ಎಲ್ಲಿ ಪ್ರಕಟವಾಗಿದ್ದವೆಂಬ ಮಾಹಿತಿಯನ್ನೂ ನೀಡಬೇಕಾಗುತ್ತದೆ.

ಉದ್ದೇಶಿತ ಕೃತಿಯ ವಿವರಗಳು, ಬರಹ ಹಾಗೂ ಚಿತ್ರಗಳನ್ನು kinderkatha-bangalore@goethe.de ವಿಳಾಸಕ್ಕೆ ಇಮೇಲ್ ಮೂಲಕ ಕಳುಹಿಸಬೇಕು. ಕಳುಹಿಸಲು ಕೊನೆಯ ದಿನಾಂಕ ಜನವರಿ ೩೧, ೨೦೨೨. ಬರಹ ಹಾಗೂ ಚಿತ್ರಗಳ ಡಿಜಿಟಲ್ ಪ್ರತಿಯನ್ನು ಮಾತ್ರ ಕಳುಹಿಸಲು ಅವಕಾಶವಿದೆ.

ಸಲ್ಲಿಸಿದ ಪುಸ್ತಕದ ಸಾರಾಂಶ ಆಯ್ಕೆಯಾದರೆ ಲೇಖಕರು ಮುಂದಿನ ೩೦ ದಿನಗಳಲ್ಲಿ ಪುಸ್ತಕದ ಪೂರ್ಣ ಹಸ್ತಪ್ರತಿಯನ್ನು ಕಳುಹಿಸಬೇಕಾಗುತ್ತದೆ. ಎರಡನೆಯ ಸುತ್ತಿನಲ್ಲಿ ಆಯ್ಕೆಯಾದ ಹಸ್ತಪ್ರತಿಗಳನ್ನು ಚಿತ್ರಕಾರರಿಗೆ ಕಳುಹಿಸಿಕೊಡಲಾಗುವುದು. ಚಿತ್ರರಚನೆಗೂ ೩೦ ದಿನಗಳ ಸಮಯವಿರುತ್ತದೆ. ಪ್ರಕಟಣೆಗೆ ಆಯ್ಕೆಯಾದ ಬರಹ ಹಾಗೂ ಚಿತ್ರಗಳಿಗೆ ಸೂಕ್ತ ಸಂಭಾವನೆ ಇರುತ್ತದೆ.

ಪುಸ್ತಕಗಳ ಆಯ್ಕೆಯಲ್ಲಿ ಸಂಪಾದಕ ಮಂಡಲಿಯ ತೀರ್ಮಾನವೇ ಅಂತಿಮವಾಗಿರುತ್ತದೆ.

ಹೆಚ್ಚಿನ ವಿವರಗಳಿಗೆ: www.goethe.de/bangalore

Leave a Reply

Your email address will not be published. Required fields are marked *