ರಾಮನಗರದಲ್ಲಿ ಅದ್ಧೂರಿ ಕೋರೆಗಾಂವ್ ವಿಜಯೋತ್ಸವ
ರಾಮನಗರ : 204ನೇ ಭೀಮ ಕೋರೆಗಾಂವ್ ವಿಜಯೋತ್ಸವದ ಅಂಗವಾಗಿ ನಗರದಲ್ಲಿ ಶನಿವಾರ ರಾತ್ರಿ ದಲಿತ ಸಂಘಟನೆಗಳ ಮಹಾ ಒಕ್ಕೂಟದ ವತಿಯಿಂದ ಕೋರೆಗಾಂವ್ ವಿಜಯಸ್ತಂಭದ ಪ್ರತಿಕೃತಿಯ ಮೆರವಣಿಗೆ ನಡೆಯಿತು.

ನಗರದ ಕಾಮನಗುಡಿ ವೃತ್ತದಿಂದ ಮೆರವಣಿಗೆ ಹೊರಟು ಜೂನಿಯರ್ ಕಾಲೇಜು ರಸ್ತೆಯ ವಾಟರ್ ಟ್ಯಾಂಕ್ ವೃತ್ತ(ಡಾ.ಬಿ.ಆರ್.ಅಂಬೇಡ್ಕರ್ ವೃತ್ತ) ನೂರಾರು ಕಾರ್ಯಕರ್ತರು ಮೇಣದ ಹಿಡಿದು ತಮಟೆ ಮತ್ತು ಮಹಿಳಾ ಕೋಲು ಕುಣಿತದೊಂದಿಗೆ ಕಾರ್ಯಕ್ರಮಕ್ಕೆ ಮೆರಗು ನೀಡಿದರು.

ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ದಲಿತ ಮುಖಂಡ ಶಿವಶಂಕರ್ ಕೋರೆಗಾಂವ್ ವಿಜಯದ ಇತಿಹಾಸ ಮತ್ತು ಮಹತ್ವ ಕುರಿತು ಮಾತನಾಡಿದ ಅವರು ‘ಕೋರೆಗಾಂವ್ ಕದನ ಭಾರತದ ಇತಿಹಾಸದಲ್ಲೇ ಮಹತ್ವದ ಸ್ಥಾನ ಪಡೆದಿದೆ. ದಲಿತರ ಆತ್ಮಗೌರವ ಹಾಗೂ ಹಕ್ಕುಗಳಿಗೆ ತಳಕು ಹಾಕಿಕೊಂಡ ಸ್ಥಳವಿದು. 500 ಮಂದಿ ಮಹಾರ್ ಹೋರಾಟಗಾರರು ಆಹಾರ, ನೀರು ಹಾಗೂ ವಿಶ್ರಾಂತಿ ವಿಲ್ಲದೆ 28 ಸಾವಿರ ಮಂದಿಯ ಪೇಶ್ವೆಗಳ ಸೈನ್ಯದ ವಿರುದ್ಧ ನಿರಂತರ 12 ಗಂಟೆ ಕಾದಾಡಿದ ಸ್ಮರಣೀಯ ಕದನವಿದು. ಇದರಲ್ಲಿ ಮಹಾರ್ ಸೈನಿಕರು ಇತಿಹಾಸ ಸೃಷ್ಟಿಸಿದರು’ ಎಂದರು.
ಆ ಯುದ್ಧದಲ್ಲಿ ಪೇಶ್ವೆಗಳು ಬರೀ ಸೋತಿದ್ದಲ್ಲ. ಮಹಾರಾಷ್ಟ್ರದಲ್ಲಿ ಅವರ ಉತ್ತರಾದಾಯಿತ್ವವೇ ಅಂತ್ಯವಾಯಿತು. ಹಲವು ಕಾರಣಗಳಿಗಾಗಿ ಈ ಯುದ್ಧಕ್ಕೆ ಮಹತ್ವ ಇದೆ ಎಂದರು.
ಆತ್ಮಗೌರವ ಮತ್ತು ಹಕ್ಕಿಗಾಗಿ ಹೋರಾಟ: ‘ಮಹಾರ್ ಸೈನಿಕರ ಆತ್ಮಗೌರವ ಹಾಗೂ ಹಕ್ಕುಗಳಿಗಾಗಿ ಯುದ್ಧ ನಡೆಯುತ್ತದೆ. ಅಷ್ಟು ದೊಡ್ಡ ಸಂಖ್ಯೆಯ ಪೇಶ್ವೆ ಪಡೆ ಮಹರ್ ಸೈನಿಕರ ಎದುರು ಮಂಡಿಯೂರುತ್ತದೆ. ಬ್ರಿಟಿಷರಿಗೆ ಮಹತ್ವದ ವಿಜಯ ಲಭಿಸುತ್ತದೆ. ಸೈನಿಕರ ಸಾಹಸ ಬಿಂಬಿಸುವ ಕೋರೆಗಾಂವ್ ವಿಜಯಸ್ತಂಭ ಭಾರತಕ್ಕೆ ಸ್ವಾತಂತ್ರ್ಯ ದೊರೆಯುವ ತನಕ ಇತ್ತು. 22 ಮಹಾರ್ ಸೈನಿಕರ ತ್ಯಾಗದ ಬಗ್ಗೆ ಅದರಲ್ಲಿ ಪ್ರಸ್ತಾವ ಇತ್ತು. ಇಂದಿಗೂ ಆ ಸ್ಮಾರಕ ಅಸ್ಪೃಶ್ಯರ (ಮಹರ್) ವೀರಕಥೆಗೆ ಸಾಕ್ಷಿಯಂತೆ ಇದೆ. ಡಾ.ಬಿ.ಆರ್.ಅಂಬೇಡ್ಕರ್ ಅವರು ಪ್ರತಿವರ್ಷ ಜನವರಿ 1 ರಂದು ಭೀಮಾ ಕೋರೆಗಾಂವ್ಗೆ ಭೇಟಿ ನೀಡಿ, ಗೌರವ ಸಲ್ಲಿಸುತ್ತಿದ್ದರು ಎಂದು ಹೇಳಿದರು.
ವಕೀಲ ಚಾನ್ ಪಾಷಾ ಮಾತನಾಡಿ ಪ್ರಜಾಪ್ರಭುತ್ವ ನಾಶ ಮಾಡಲು, ಸಂವಿಧಾನದ ಮೌಲ್ಯಗಳನ್ನು ಕೊಲೆ ಮಾಡಲು ಹೊರಟಿದೆ ಎಂದರು.
ರಾಜ್ಯದಲ್ಲಿ ಮಸೀದಿಗಳ, ಚರ್ಚ್ ಗಳ ಮೇಲೆ ಅನಗತ್ಯವಾದ ದಾಳಿಯಾಗುತ್ತಿದೆ. ಸಿ ಎ ಎ, ಎನ್ ಆರ್ ಸಿ ಅಂತಹ ಕಾಯ್ದೆಗಳ ಮೂಲಕ ಅಲ್ಪಸಂಖ್ಯಾತರನ್ನು ಸರ್ವನಾಶ ಮಾಡಲು ಹೋರಟಿದೆ ಬಿಜೆಪಿ ಸರ್ಕಾರ ಎಂದು ಆರೋಪಿಸಿದರು.
ಅಹಿಂಧ ಸಂಘದ ರಾಜ್ಯಾಧ್ಯಕ್ಷ ಶೇಖರ್ ಮಾತನಾಡಿ ಈ ದೇಶದ ಸಂವಿಧಾನವೇ ಪ್ರತಿಯೊಬ್ಬರಿಗೂ ಧಾರ್ಮಿಕ ಹಕ್ಕು ಕೊಟ್ಟಿದೆ. ಪ್ರತಿಯೊಬ್ಬರೂ ಅವರಿಗಿಷ್ಟವಾದ ಧರ್ಮವನ್ನು ಆಯ್ಕೆ ಮಾಡಿಕೊಳ್ಳಬಹುದು. ಬಲವಂತ, ಆಮಿಷವೊಡ್ಡಿ ಮತಾಂತರ ಮಾಡಬಾರದು ಎಂದೂ ಹೇಳಿದೆ. ಹೀಗಿರುವಾಗ ರಾಜ್ಯ ಸರ್ಕಾರ ಜನರ ದಿಕ್ಕು ತಪ್ಪಿಸಿ ಕಾಯ್ದೆ ಜಾರಿಗೆ ಹೊರಟಿರುವುದು ಸರಿಯಲ್ಲ,
ಬಿಜೆಪಿ ಸರ್ಕಾರ ಪ್ರಜಾಪ್ರಭುತ್ವ ವಿರೋಧಿ ನಡವಳಿಕೆ ಖಂಡನಾರ್ಹವಾದುದು. ತನ್ನ ಗುಪ್ತ ಕಾರ್ಯಸೂಚಿ ಪ್ರಕಾರ ಕಾಯ್ದೆ ಜಾರಿಗೆ ಹೊರಟಿದೆ. ರಾಜ್ಯದಲ್ಲಿ ಅನೇಕ ಜ್ವಲಂತ ಸಮಸ್ಯೆಗಳಿವೆ. ಅವುಗಳನ್ನು ಬಗೆಹರಿಸಲು ಒತ್ತು ಕೊಡಬೇಕು. ಜಾನುವಾರು ಹತ್ಯೆ ಪ್ರಬಂಧಕ ಕಾಯ್ದೆ ಕೂಡ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಯುವ ಜನತೆ ಭೀಮ ಕೋರಗಾಂವ್ ಇತಿಹಾಸವನ್ನು ತಿಳಿದುಕೊಂಡು ಈ ಜಾತಿಯ ವಿರುದ್ಧ ಸಿಡಿದು ನಿಂತಿದ್ದು, ಇದನ್ನ ಅರಿತ ಮನುವಾದಿ ಜಾತಿ ವ್ಯವಸ್ಥೆಯ ಉನ್ನಾರ ಮಾಡಲು ಹೊರಟಿವೆ ಎಂದು ವಿಷಾಧಿಸಿದರು.
ಸರ್ಕಾರ ಜಾರಿಗೆ ತರಲು ಹೊರಟಿರುವ ಕಾಯಿದೆ ಹಿಂದೆ ಜನರ ಹಿತವೇನೂ ಇಲ್ಲ. ದೇಶದ ಕೋಮು ಸೌಹಾರ್ದ ಹಾಳು ಮಾಡುವುದೇ ಇದರ ಉದ್ದೇಶವಾಗಿದೆ.
ಸಂವಿಧಾನದ ಪ್ರಕಾರ ದೇಶದ ಪ್ರಜೆ ತನ್ನ ಆಸಕ್ತಿ ಹಾಗೂ ಇಚ್ಚೆಗೆ ಸೂಕ್ತವಾದ ಧರ್ಮವನ್ನು ಆರಿಸಿಕೊಳ್ಳುವ, ಪಾಲಿಸುವ ಮತ್ತು ಸಂಭ್ರಮಿಸುವ ಹಕ್ಕು ಇದೆ. ಇದಕ್ಕೆ ವಿರುದ್ಧವಾಗಿ ಸರ್ಕಾರ ಕಾನೂನು, ಕಾಯಿದೆ ತರುವುದು ಸಂವಿಧಾನಬಾಹಿರ. ತಮಗೆ ಬಹುಮತ ಇದೆ ಎನ್ನುವ ಕಾರಣಕ್ಕೆ ಸಂವಿಧಾನದ ಮೇಲೆ ಸವಾರಿ ಮಾಡುವ ಹಾಗೂ ತನಗೆ ಬೇಕಾದ ಕಾಯಿದೆಗಳನ್ನು ಜಾರಿಗೆ ತರುವ ದುಸ್ಸಾಹಸಕ್ಕೆ ಸರ್ಕಾರ ಕೈ ಹಾಕಬಾರದಿತ್ತು ಎಂದು ಕಿಡಿಕಾರಿದರು.
ಸಂದರ್ಭದಲ್ಲಿ ಕಾರ್ಯಕ್ರಮದ ರೂವಾರಿ ದಲಿತ ಸಂಘಟನೆಗಳ ಮಹಾ ಒಕ್ಕೂಟ ಅಧ್ಯಕ್ಷ ಎಂ.ಜಗದೀಶ್, ಎಸ್.ಎಸ್.ಡಿ ವಿದ್ಯಾರ್ಥಿ ಸಂಘದ ರಾಜ್ಯಾದ್ಯಕ್ಷ ಗೋವಿದಯ್ಯ, ಪತ್ರಕರ್ತ ಚೆಲುವರಾಜು, ಜಿಲ್ಲಾ ಉಪಜಾಗೃತಿ ಸದಸ್ಯ ವೆಂಕಟೇಶ್ ಗುಡ್ಡೆ, ದಲಿತ ಮುಖಂಡ ಗುರುಮಲ್ಲಯ್ಯ, ದಲಿತ ಮುಖಂಡ ಶಿವಲಿಂಗಯ್ಯ ಕೇತೊಹಳ್ಳಿ, ಚನ್ನಪಟ್ಟಣದ ದಲಿತ ಮುಖಂಡ ಶಿವಾನಂದ್, ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಗೋವಿಂದ ಕೋತ್ತಿಪುರ, ಅಹಿಂಧ ಸಂಘದ ಕಾರ್ಯದರ್ಶಿ ದಾಸಪ್ಪ, ದಲಿತ ಸಂಘದ ಸಮಿತಿ ಕಾರ್ಯದರ್ಶಿ ಪುನೀತ್, ಭೀಮ್ ಆರ್ಮಿ ಜಿಲ್ಲಾಧ್ಯಕ್ಷ ಪರಮೇಶ್, ಎಸ್.ಡಿ.ಪಿ.ಐ, ಮುಖಂಡ ಅಜಿಜುಲ್ಲಾ ಷರೀಫ್, ಮುಖಂಡರುಗಳಾದ ನವೀನ್, ಚಂದ್ರು, ಅಭಿ, ಅಮ್ಜದ್ ಮುಂತಾದವರು ಇದ್ದರು.