‘ನನ್ನ ಗಂಡಸುತನ ತೋರಿಸಲಾ’ ಎಂದು ಸಚಿವ ಅಶ್ವತ್ಥನಾರಾಯಣರತ್ತ ನುಗ್ಗಿದ ಸಂಸದ ಡಿ.ಕೆ. ಸುರೇಶ್
ರಾಮನಗರ : ನಗರದ ಜಿಲ್ಲಾ ಕಚೇರಿಗಳ ಸಂಕೀರ್ಣದ ಮುಂಭಾಗ ಸೋಮವಾರ ನಡೆದ ಪ್ರತಿಮೆಗಳ ಅನಾವರಣ ಹಾಗೂ ವಿವಿಧ ಕಾಮಗಾರಿಗಳಿಗೆ ಚಾಲನೆ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎನ್. ಅಶ್ವತ್ಥನಾರಾಯಣ ಅವರು ತಮ್ಮ ಭಾಷಣದಲ್ಲಿ ಕೆಲವು ಕಾಂಗ್ರೆಸ್ ಕಾರ್ಯಕರ್ತರು ಅಡ್ಡಿಪಡಿಸಿದ್ದನ್ನು ಪ್ರಸ್ತಾಪಿಸಿದ ಅವರು, ‘ಇವತ್ತು ಏನು ತಪ್ಪಾಗಿದೆ ಎಂದು ನಾಲ್ಕು ಜನರನ್ನು ಸೇರಿಸಿ ಘೋಷಣೆ ಕೂಗುತ್ತೀರಿ. ನಾನೇನು ಯಾರ ಜಮೀನಿಗೂ ಕೈ ಹಾಕಿಲ್ಲ. ಯಾವನೋ ಅವನು ಗಂಡಸು ಅನ್ನೋನು’ ಎಂದು ಏರುದನಿಯಲ್ಲಿ ಮಾತನಾಡಿದರು.
ಇದರಿಂದ ಕುಪಿತಗೊಂಡ ಸುರೇಶ್ ‘ನನ್ನ ಗಂಡಸುತನ ತೋರಿಸಲಾ’ ಎಂದು ಅಶ್ವತ್ಥನಾರಾಯಣರತ್ತ ನುಗ್ಗಿದರು. ಇದರಿಂದ ಗಲಾಟೆ ಜೋರಾಯಿತು. ಬಳಿಕ ಸುರೇಶ್ ವೇದಿಕೆಯಲ್ಲೇ ಧರಣಿ ಕುಳಿತರು.
ವೇದಿಕೆಯಲ್ಲಿ ಅಶ್ವತ್ಥನಾರಾಯಣರ ಮಾತಿನಿಂದ ಕೆರಳಿದ ಸುರೇಶ್ ಅವರತ್ತ ನುಗ್ಗಿದರು. ಅತ್ತ ಅಶ್ವತ್ಥನಾರಾಯಣ ಸಹ ಕೆರಳಿದರು. ನಂತರ ಇಬ್ಬರು ಕೈ ಕೈ ಮಿಲಾಯಿಸಲು ಮುಂದಾದರು. ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಎಸ್. ರವಿ ಮೈಕ್ ಕಿತ್ತೆಸೆದರು. ಇದರಿಂದ ಪರಿಸ್ಥಿತಿ ಇನ್ನಷ್ಟು ವಿಕೋಪಕ್ಕೆ ಹೋಯಿತು.

ಸಂಸದ ಡಿ.ಕೆ. ಸುರೇಶ್ ವೇದಿಕೆಯಲ್ಲೇ ಧರಣಿ ಕುಳಿತರು. ವೇದಿಕೆಯ ಕೆಳಗೂ ಗದ್ದಲ ಏರ್ಪಟ್ಟಿತು. ಮುಖ್ಯಮಂತ್ರಿ ಬೊಮ್ಮಾಯಿ ಅವರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನ ಮಾಡಿದರು. ‘ರಾಜಕೀಯ ಇದ್ದದ್ದೇ. ಆದರೆ ನಾವು ಜನಪರವಾಗಿ ಕೆಲಸ ಮಾಡಬೇಕೇ ಹೊರತು ಭಿನ್ನಾಭಿಪ್ರಾಯವನ್ನೇ ದೊಡ್ಡದು ಮಾಡಬಾರದು’ ಎಂದು ಇಬ್ಬರಿಗೂ ಕಿವಿಮಾತು ಹೇಳಿದರು. ಆಗಿದ್ದನ್ನು ಮರೆತು ಎಲ್ಲರೂ ಒಂದೇ ಮನಸ್ಸಿನಿಂದ ಮುಂದೆ ಹೋಗೋಣ ಎಂದು ಸಮಾಧಾನ ಮಾಡಿದರು.

