ರಾಮನಗರ ಜಿಲ್ಲೆ ಮಾಡಿದವನು ನಾನು, ಆದರೆ ಇವರಿಬ್ಬರು ಕಿತ್ತಾಡುತ್ತಿದ್ದಾರೆ : ಎಚ್.ಡಿ. ಕುಮಾರಸ್ವಾಮಿ

ಮೈಸೂರು : ರಾಮನಗರ ಜಿಲ್ಲೆಯನ್ನು ಮಾಡಿದವನು ನಾನು, ಜಿಲ್ಲೆಯ ಅಭಿವೃದ್ಧಿ ಮಾಡಿದವನು, ಮಾಡುತ್ತಿರುವವನು ನಾನು ಇಲ್ಲಿದ್ದೀನಿ. ಆದರೆ ಅವರಿಬ್ಬರು ವೇದಿಕೆ ಮೇಲೆ ಕಿತ್ತಾಡುತ್ತಿದ್ದಾರೆ ಎಂದು ಮಾಜಿಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.

ರಾಮನಗರದಲ್ಲಿ ಸಚಿವ ಸಿ.ಎನ್. ಅಶ್ವತ್ಥನಾರಾಯಣ ಹಾಗೂ ಸಂಸದ ಡಿ.ಕೆ. ಸುರೇಶ್ ಅವರ ಕಿತ್ತಾಟದ ವಿಚಾರವಾಗಿ ಮಾತನಾಡಿದ ಅವರು, ನಾನು ಮುಖ್ಯಮಂತ್ರಿಯಾಗಿದ್ದಾಗ ರಾಜೀವ್ ಗಾಂಧಿ ಹೆಲ್ತ್ ಯುನಿವರ್ಸಿಟಿಗೆ ಅನುಮೋದನೆ ಮಾಡಿದ್ದೆ. ರಾಮನಗರ ಜಿಲ್ಲೆಗೆ ನರ್ಸಿಂಗ್ ಮೆಡಿಕಲ್ ಕಾಲೇಜು ಮಂಜೂರು ಮಾಡಿದ್ದೆ. 360 ಕೋಟಿ ರೂ. ಅನುದಾನವನ್ನೂ ಬಿಡುಗಡೆ ಮಾಡಿದ್ದೆ. ನಮ್ಮ ಸರ್ಕಾರ ಇಳಿಯುತ್ತಿದ್ದಂತೆಯೇ ಎಲ್ಲವನ್ನೂ ನಿಲ್ಲಿಸಿಬಿಟ್ಟರು ಎಂದು ತಿಳಿಸಿದರು.

ರಾಜಕೀಯ ಲಾಭಕ್ಕಾಗಿ ಪಾದಯಾತ್ರೆ ಮಾಡಲು ಹೊರಟ್ಟಿದ್ದೀರಿ. ನಾನು ನಿಮ್ಮ ವಿಡಿಯೋಗಳನ್ನು ನೋಡಿದ್ದೇನೆ. ಮದುವೆಗೂ ಮುನ್ನ ಗಂಡು ಹೆಣ್ಣು ಪ್ರಿ ವೆಡ್ಡಿಂಗ್ ಶೂಟ್ ಮಾಡಿಸುತ್ತಾರೆ. ನೀವು ಪ್ರಿ ಪಾದಯಾತ್ರೆ ಫೆÇೀಟೋ ಶೂಟ್ ಮಾಡಿಸಿದ್ದೀರಿ. ಚಾಮರಾಜನಗರದಿಂದ ಕಬ್ಬಿನ ಜ್ಯೂಸ್ ಬರಬೇಕಂತೆ. ಭಾಗವಹಿಸಿದವರಿಗೆ ಸರ್ಟಿಫಿಕೆಟ್ ಕೊಡುತ್ತಾರಂತೆ. ನಿಮ್ಮ ಹೈಟೆಕ್ ಪಾದಯಾತ್ರೆಯನ್ನು ಜನರು ಗಮನಿಸುತ್ತಿದ್ದಾರೆ ಎಂದು ತಿಳಿಸಿದರು.
ಬಂಡೆಗಳನ್ನೇ ಜೀರ್ಣಿಸಿಕೊಂಡವರಿಗೆ ಟೀಕೆಗಳನ್ನು ಜೀರ್ಣಿಸಿಕೊಳ್ಳುವುದು ಯಾವ ಲೆಕ್ಕ. ನೀವು ರಾಮನಗರ ಜಿಲ್ಲೆಯ ಕಲ್ಲು ಬಂಡೆಗಳನ್ನು ಜೀರ್ಣಿಸಿಕೊಂಡವರು. ಮೇಕೆದಾಟು ಯೋಜನೆಗದ ಡಿಪಿಆರ್ ಮಾಡಿಸಿದವನು ನಾನು. ನಿತಿನ್ ಗಡ್ಕರಿ ಅವರಿಗೆ ಡಿಪಿಆರ್ ಸಲ್ಲಿಸಿ ಅನುಮೋದನೆ ಪಡೆದುಕೊಂಡವನು ನಾನು. ಆಗ ನೀವು ನನ್ನೊಟ್ಟಿಗೆ ದೆಹಲಿಗೆ ಬಂದಿದ್ದೀರಾ ಎಂದು ಡಿ.ಕೆ. ಶಿವಕುಮಾರ್ ಅವರನ್ನು ಪ್ರಶ್ನಿಸಿದರು.

Leave a Reply

Your email address will not be published. Required fields are marked *