ಮುಖ್ಯಮಂತ್ರಿ ಸಮಾರಂಭದಲ್ಲಿ ಗದ್ದಲ ಎಬ್ಬಿಸಿದ 9 ಮಂದಿ ವಿರುದ್ಧ ಪ್ರಕರಣ ದಾಖಲು

ರಾಮನಗರ : ಪ್ರತಿಮೆಗಳ ಅನಾವರಣ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವ ಮುಖ್ಯಮಂತ್ರಿಗಳ ಕಾರ್ಯಕ್ರಮದ ವೇಳೆ ನಡೆದ ಗದ್ದಲಕ್ಕೆ ಸಂಬಂಧಿಸಿದಂತೆ ರಾಮನಗರ ಟೌನ್ ಪೊಲೀಸರು 9 ಮಂದಿ ವಿರುದ್ಧ ಎರಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮುಖ್ಯಮಂತ್ರಿಗಳು ಉಪಸ್ಥಿತಿಯಿದ್ದ ವೇದಿಕೆಗೆ ನುಗ್ಗಲೆತ್ನಿಸಿದ ಆರೋಪದ ಮೇಲೆ ರಾಂಪುರ ನಾಗೇಶ್, ಕುಮಾರ ಅಲಿಯಾಸ್ ಕೋಟೆ ಕುಮಾರ, ಗುಡ್ಡೆ ವೆಂಕಟೇಶ್, ಗೌಸ್ ಪಾಷ, ಗೋವಿಂದಯ್ಯ ಅವರ ವಿರುದ್ದ ಐಪಿಸಿ 1860 (ಯು/ಎಸ್ 143, 147, 152, 149) ಪ್ರಕಾರ ಎಫ್.ಐ.ಆರ್. ದಾಖಲಾಗಿದೆ.
ಇವರೆಲ್ಲರು ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಪುಷ್ಪಾರ್ಚನೆಗೆಂದು ಕ್ರೇನ್ನಲ್ಲಿ ಕರೆದಕೊಂಡು ಹೋಗಲು ಸಂಸದ ಡಿ.ಕೆ.ಸುರೇಶ್ ಅವರಿಗೆ ಅವಕಾಶ ಮಾಡಿಕೊಡಲಿಲ್ಲ ಎಂದು ಘೋಷಣೆಗಳನ್ನು ಕೂಗಿದ್ದರು. ಅಲ್ಲದೆ, ಕಪ್ಪು ಪಟ್ಟಿ ಪ್ರದರ್ಶಿಸಿದ್ದು, ವೇದಿಕೆಗೆ ನುಗ್ಗಲೆತ್ನಿಸಿದ್ದರು.
ಎರಡನೇ ಪ್ರಕರಣದಲ್ಲಿ ಇದೇ ದಿನ ಅಕ್ರಮ ಗುಂಪು ಕಟ್ಟಿಕೊಂಡು ಇತರರನ್ನು ದೊಂಬಿ, ಗಲಾಟೆ ಮಾಡುವಂತೆ ಉದ್ರೇಕಿಸಿ ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿ ರಸ್ತೆಯ ವಿಭಜಕದಲ್ಲಿ ಅಳವಡಿಸಿದ್ದ ಮುಖ್ಯಮಂತ್ರಿಗಳು, ಹಾಗೂ ಸಚಿವರಿದ್ದ ಪ್ಲೆಕ್ಸ್ ಗಳನ್ನು ಹರಿದು ಹಾಕಿದ ಆರೋಪದಲ್ಲಿ 5 ಮಂದಿ ವಿರುದ್ದ ಎಫ್.ಐ.ಆರ್. ದಾಖಲಿಸಲಾಗಿದೆ.
ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾದ ಅನಿಲ್ ಜೋಗಿಂದರ್, ವಿನಯ್, ವಾಸಿಂ, ಸಮದ್ ಮತ್ತು ಇತರರ ವಿರುದ್ದ ಐಪಿಸಿ 1860 (ಯು/ಎಸ್ 143, 147, 427, 149) ಪ್ರಕಾರ ಎಫ್.ಐ.ಆರ್. ದಾಖಲಿಸಲಾಗಿದೆ.

Leave a Reply

Your email address will not be published. Required fields are marked *