ಮುಳುಗುತ್ತಿರುವ ಕಾಂಗ್ರೆಸ್ ಪಕ್ಷ ಸೇರೋಲ್ಲ : ಸಿ.ಪಿ. ಯೋಗೇಶ್ವರ್
ರಾಮನಗರ : ನಾನು ಯಾವುದೇ ಕಾರಣಕ್ಕು ಕಾಂಗ್ರೆಸ್ ಪಕ್ಷ ಸೇರುವ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಂಡರೆ ಸೂಸೈಡ್ ಮಾಡಿಕೊಂಡಂತೆ ಎಂದು ಸಿ.ಪಿ.ಯೋಗೇಶ್ವರ್ ತಿಳಿಸಿದ್ದಾರೆ.
ರಾಮನಗರದ ಹೊರವಲಯದ ಖಾಸಗಿ ಹೋಟೆಲ್ ನಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲ ಮಾಧ್ಯಮಗಳಲ್ಲಿ ಪತ್ರಿಕೆಗಳಲ್ಲಿ ಈ ಬಗ್ಗೆ ವಿಚಾರ ಪ್ರಸ್ತಾಪ ಆಗಿತ್ತು. ನಾನು ಬಹಳ ಹಿಂದೆಯೇ ಪಕ್ಷಾಂತರ ಮಾಡಿ ಪಕ್ಷಾಂತರಿ ಆಗಿದ್ದೇನೆ. ನಾನು ಭಾರತೀಯ ಜನತಾ ಪಾರ್ಟಿಯಲ್ಲೇ ಇರ್ತಿನಿ ಎಂದು ತಿಳಿಸಿದರು.
ಪಕ್ಷ ಬಿಡುವ ಯಾವುದೇ ಚಿಂತನೆ ಇಲ್ಲ. ನಾನು ರಾಜಕೀಯ ಆರಂಭ ಮಾಡಿ 25 ವರ್ಷಗಳೇ ಕಳೆದಿದೆ. ಕಾಂಗ್ರೆಸ್ ಪಕ್ಷದಿಂದಲೇ ನಾನು ರಾಜಕಾರಣ ಆರಂಭ ಮಾಡಿದ್ದೇನೆ. ನಾನು ಕಾಂಗ್ರೆಸ್ ಪಕ್ಷದಲ್ಲಿದ್ದ ಸಂಧರ್ಭದಲ್ಲೇ ಡಿ.ಕೆ. ಶಿವಕುಮಾರ್ ನನ್ನ ಬೆಳವಣಿಗೆ ಸಹಿಸಿರಲಿಲ್ಲ. ನಂತರದ ದಿನಗಳಲ್ಲಿ ನಾನು ಬಿಜೆಪಿ ಪಕ್ಷ ಸೇರ್ಡೆಯಾದೆ. ಡಿಕೆ ಶಿವಕುಮಾರ್ ಅವರ ನಿರಂತರವಾದ ಕಿರುಕುಳದಿಂದ ನಾನು ಮತ್ತೆ ಬೇರೆ ಪಕ್ಷದಿಂದ ಚುನಾವಣೆ ಎದುರಿಸಿದ್ದೇನೆ ಎಂದು ತಿಳಿಸಿದರು.
ಇದಲ್ಲದೆ ನಮ್ಮ ರಾಜಕೀಯ ಏಳಿಗೆ, ನನ್ನ ತಾಲ್ಲೂಕಿನ ಅಭಿವೃದ್ಧಿ ಬಗ್ಗೆ ಡಿಕೆಶಿಗೆ ಚಿಂತನೆ ಇಲ್ಲ. ನಾನು ಯಾವುದೇ ಕಾರಣಕ್ಕೂ ಡಿಕೆ ಬ್ರದರ್ಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳಲ್ಲ. ನಾನು ಯಾವುದೇ ಕಾರಣಕ್ಕೂ ಬಿಜೆಪಿ ಬಿಡೊಲ್ಲ. ಬಿಜೆಪಿ ಸರ್ಕಾರದಿಂದ ನನ್ನ ಕ್ಷೇತ್ರಕ್ಕೆ ಸಾಕಷ್ಟು ಅಭಿವೃದ್ಧಿ ಯಾಗಿದೆ. ಬಿಜೆಪಿ ಪಕ್ಷದ ಋಣ ನನ್ನ ತಾಲ್ಲೂಕಿನ ಮೇಲೆ ಇದೆ. ನಾನು ಬಿಜೆಪಿಯಲ್ಲೇ ಮುಂದುವರಿಯುತ್ತೇನೆ. ನಾನು ಡಿಕೆ ಶಿವಕುಮಾರ್ ಅವರ ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಂಡರೆ ಸೂಸೈಡ್ ಮಾಡಿಕೊಂಡಂತೆ ಎಂದು ಸಿ.ಪಿ. ಯೋಗೇಶ್ವರ್ ತಿಳಿಸಿದರು.