ಸಿದ್ದರಾಮಯ್ಯರನ್ನು ರಾಜಕೀಯವಾಗಿ ಮುಗಿಸಲು ಡಿ.ಕೆ. ಶಿವಕುಮಾರ್ ಪ್ರಯತ್ನ : ಸಿ.ಪಿ. ಯೋಗೇಶ್ವರ್

ರಾಮನಗರ : ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಮುಗಿಸಲು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರಯತ್ನ ಮಾಡ್ತಿದ್ದಾರೆ. ಅವರು ಮಾಡುವ ಮೀಟಿಂಗ್ ಎಲ್ಲ ನೋಡಿದ್ರೆ.
ನಾನೇ ಮುಂದಿನ ಕಾಂಗ್ರೆಸ್ ಅಧಿಪತಿ ಅನ್ನೋ ರೀತಿ ಬಿಂಬಿಸಿಕೊಳ್ತಿದ್ದಾರೆ ಎಂದು ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ತಿಳಿಸಿದರು.
ರಾಮನಗರದ ಹೊರವಲಯದ ಖಾಸಗಿ ಹೋಟೆಲ್ ನಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಕೂಡ ಇಷ್ಟು ದಿನ ಈ ಬಗ್ಗೆ ಮಾತನಾಡದೆ ಸುಮ್ಮನೆ ಇದ್ದೆ. ನಮ್ಮ ಪಕ್ಷದ ಕೆಲವರು ಡಿಕೆ ಶಿವಕುಮಾರ್ ಅವರಿಗೆ ಬೆಂಬಲ ಕೊಡ್ತಿದ್ದ ವಿಚಾರವೆಲ್ಲವು ಕೂಡ ಸೂಕ್ಷವಾಗಿ ನಮ್ಮ ಹೈಕಮಾಂಡ್ ಗೆ ಗೊತ್ತಿದೆ. ಮುಂದಿನ ದಿನಗಳಲ್ಲಿ ನಮ್ಮ ಜಿಲ್ಲೆಯಲ್ಲಿ ಬಿಜೆಪಿ ಬೆಳೆಯುವುದರಲ್ಲಿ ಯಾವುದೇ ಅನುಮಾನ ಇಲ್ಲ. ಇದೆಲ್ಲಾ ಡಿಕೆ ಬ್ರದರ್ಸ್ ಗೆ ಆತಂಕ ಮೂಡುತ್ತಿದೆ ಎಂದು ತಿಳಿಸಿದರು.
ರಾಮನಗರ ಜಿಲ್ಲೆಯಲ್ಲಿ ಬಿಜೆಪಿ ಸಂಘಟನೆ ಕುಂಠಿತ ವಿಚಾರಕ್ಕೆ ಸಂಬಂಧಿಸಿದಂತೆ ಪಕ್ಷ ನನಗೆ ಒಂದು ಜವಾಬ್ದಾರಿ ನೀಡಬೇಕು. ಜನವರಿ 15 ರ ನಂತರ ಏನೆಲ್ಲಾ ಆಗುತ್ತೆ ನೋಡೋಣ. ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಸುಧೀರ್ಘವಾಗಿ ಜಿಲ್ಲೆಯಲ್ಲಿ ರಾಜಕಾರಣ ಮಾಡ್ತಿದ್ದಾರೆ. ಜಿಲ್ಲೆಗೆ ಕುಮಾರಸ್ವಾಮಿ ಹಾಗೂ ಡಿ.ಕೆ. ಶಿವಕುಮಾರ್ ಕೆಲವೊಂದು ಅಭಿವೃದ್ಧಿ ಮಾಡಿದ್ದಾರೆ. ಅದನ್ನೇ ದೊಡ್ಡ ರೀತಿಯಲ್ಲಿ ಬಿಂಬಿಸುವ ಅವಶ್ಯಕತೆ ಇಲ್ಲ. ಸಚಿವ ಅಶ್ವಥ್ ನಾರಾಯಣ ಅವರು ರಾಮನಗರ ಜಿಲ್ಲೆಯವರು. ಸಾರ್ವಜನಿಕ ಜೀವನದಲ್ಲಿ ಬಹಳ ಕ್ರೀಯಾಶೀಲವಾಗಿ ಕೆಲಸ ಮಾಡ್ತಿದ್ದಾರೆ ಎಂದು ತಿಳಿಸಿದರು.
ಇದಲ್ಲದೆ ಕಳೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆ ವಿಚಾರಕ್ಕೆ ಸಂಬಂಧಿಸಿದಂತೆ ನಮ್ಮ ಪಕ್ಷದಿಂದ ಸುಮಾರು 300 ಜನರು ಬಿಜೆಪಿ ಬೆಂಬಲಿತರಿದ್ದರು. ನಮಗೆ ಸಮರ್ಥ ಅಭ್ಯರ್ಥಿ ಸಿಗದೇ ಇರುವ ಕಾರಣ ಹಿನ್ನಡೆಯಾಗಿದೆ. ನಮಗೆ ಜಿಲ್ಲೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸಮಾನ ಬದ್ದ ವೈರಿಗಳು ಎಂದು ಅವರು ಹೇಳಿದರು.

Leave a Reply

Your email address will not be published. Required fields are marked *