ಚನ್ನಪಟ್ಟಣ : ವೈದ್ಯರು ಸೇರಿದಂತೆ ಮೂವರಿಗೆ ಕೋವಿಡ್ ಸೋಂಕು
ರಾಮನಗರ (hairamanagara.in) : ಚನ್ನಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ವೈದ್ಯರು ಸಿಬ್ಬಂದಿ ಸೇರಿದಂತೆ ಮೂವರಿಗೆ ಕೋವಿಡ್ ಸೋಂಕು ತಗುಲಿರುವುದು ಆತಂಕಕ್ಕೆ ಕಾರಣವಾಗಿದೆ.
ಆಸ್ಪತ್ರೆಯಲ್ಲಿ ಕೀಲು ಮತ್ತು ಮೂಳೆ ತಜ್ಞರಾಗಿ ಸೇವೆ ಸಲ್ಲಿಸುತ್ತಿರುವ ಡಾ. ರಾಜ್ಕುಮಾರ್ ಎಂಬುವವರಿಗೆ ಜ.6 ರಂದು ಸೋಂಕು ದೃಢವಾಗಿತ್ತು. ಇದರ ಹಿಂದೆಯೇ ಆಸ್ಪತ್ರೆಯಲ್ಲಿ ಮೂಳೆ ತಜ್ಞರಾಗಿ ಹೊರಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ಡಾ. ಅವಿನಾಶ್ರವರಿಗೂ ಸೋಂಕು ತಗುಲಿತ್ತು. ಇದೀಗ, ಆಸ್ಪತ್ರೆಯ ಡಿ ಗ್ರೂಪ್ ನೌಕರ ಪ್ರಕಾಶ್ ಎಂಬುವವರಿಗೆ ಭಾನುವಾರ ಸೋಂಕು ದೃಢಪಟ್ಟಿದೆ. ಈ ಮೂಲಕ ಆಸ್ಪತ್ರೆಯ ಮೂವರಿಗೆ ಸೋಂಕುತಗುಲಿದಂತಾಗಿದೆ.
ಡಿಗ್ರೂಪ್ ನೌಕರರಾದ ಪ್ರಕಾಶ್ ಎಂಬುವವರು ಆಸ್ಪತ್ರೆಯ ರೋಗಿಗಳಿಗೆ ಊಟ ತಯಾರಿಸುವ ಆಡುಗೆ ತಯಾರಕರಾಗಿದ್ದು, ಪ್ರತಿನಿತ್ಯ ತಾವೇ ಆಡುಗೆ ತಯಾರಿಸಿ ಆಸ್ಪತ್ರೆಯ ಒಳರೋಗಿಗಳಿಗೆ ವಿತರಿಸುವ ಕೆಲಸ ಮಾಡುತ್ತಿದ್ದಾರೆ. ಎಂದಿನಂತೆ ಕರ್ತವ್ಯ ನಿರ್ವಹಿಸುತ್ತಿದ್ದ ಅವರು ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದರು. ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟಿದೆ. ಇದು ಸಹಜವಾಗಿ ಆಸ್ಪತ್ರೆಯಲ್ಲಿ ಆತಂಕ ಸೃಷ್ಠಿಯಾಗಲು ಕಾರಣವಾಗಿದೆ. ಇದರೊಂದಿಗೆ ಸೋಂಕು ತಗುಲಿರುವ ಇಬ್ಬರು ವೈದ್ಯರು ಸಹ ಕರ್ತವ್ಯ ನಿರ್ವಹಿಸಿದ್ದರು, ಈ ವೇಳೆ ಹಲವರು ಅವರ ಸಂಪರ್ಕಕ್ಕೆ ಬಂದಿದ್ದರು. ಇದೀಗ ಅವರುಗಳಿಗೂ ಆತಂಕ ಶುರುವಾಗಿದೆ. ಕೋವಿಡ್ ಮೂರನೇ ಅಲೆ ನಿರ್ವಹಣೆಗೆ ಸಜ್ಜಾಗುತ್ತಿರುವ ಆರೋಗ್ಯ ಇಲಾಖೆಗೆ ತಮ್ಮ ಸಿಬ್ಬಂದಿಗಳೇ ಸೋಂಕಿಗೆ ಒಳಗಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.