ನೀಡಿರುವುದು ಕಾನೂನು ಬದ್ಧ ನೋಟೀಸ್ ಅಲ್ಲ : ಡಿ.ಕೆ. ಶಿವಕುಮಾರ್

ಕನಕಪುರ (hairamanagara.in) : ಪಾದಯಾತ್ರೆ ಮಾಡಬಾರದು ಎಂದು ನೋಟೀಸ್ ನೀಡಿದ್ದು ನಿಜ. ಅದು ಕಾನೂನು ಬದ್ಧ ನೋಟೀಸ್ ಅಲ್ಲ. ಸೆಕ್ಷನ್ 144 ಅನ್ನು ಯಾವ ರೀತಿ ಜಾರಿಗೊಳಿಸಬೇಕು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ನಮ್ಮ ಪಾದಯಾತ್ರೆ ನಿಲ್ಲಿಸಲು ಈ ರೀತಿ ನಿಯಮ ಮಾಡಿದ್ದಾರೆ. ಈ ಪಾದಯಾತ್ರೆಗೆ ಯಾರೆಲ್ಲ ಬಂದಿದ್ದಾರೋ ಅವರ ವೋಟರ್ ಐಡಿ ನೀಡುತ್ತೇನೆ, ವಿಡಿಯೋ ಕಳುಹಿಸಿಕೊಡುತ್ತೇನೆ. ಕೇವಲ ರಾಮನಗರ ಮಾತ್ರವಲ್ಲ, ಬೆಂಗಳೂರಿನಲ್ಲಿ ಬಿಜೆಪಿ ನಾಯಕರು ಓಡಾಡಿರುವ ವಿಡಿಯೋ ಕೂಡ ಕೊಡುತ್ತೇನೆ. ಅವರ ಮೇಲೂ ಪ್ರಕರಣ ದಾಖಲಿಸಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದರು.
ಕನಕಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಆರೋಗ್ಯ ಹಿನ್ನೆಲೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಇಂದು ಸಂಜೆ ಬರುವುದಾಗಿ ತಿಳಿಸಿದರು. ನಾನೇ ಅವರಿಗೆ ವಿಶ್ರಾಂತಿ ಪಡೆದು ನಾಳೆ ಬರುವಂತೆ ಹೇಳಿದೆ ಎಂದು ತಿಳಿಸಿದರು.

ಕಾಲು ಜಾರಿದ ಬಗ್ಗೆ ಬಿಜೆಪಿಗರ ಲೇವಡಿ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ನಾನು ಕೂತರು, ನಿಂತರು, ಮಲಗಿದರೂ ಬಿಜೆಪಿಯವರಿಗೆ ಖುಷಿ. ನನ್ನ ಬಗ್ಗೆ ಮಾತನಾಡದಿದ್ದರೆ ಅಶ್ವಥ್ ನಾರಾಯಣ್ ಅವರು ಹೇಳಿರುವಂತೆ ಶಕ್ತಿ ಬರುವುದಿಲ್ಲವಂತೆ. ಹೀಗಾಗಿ ಅವರು ನನ್ನ ವಿಚಾರದ ಬಗ್ಗೆ ಮಾತನಾಡುತ್ತಾರೆ’ ಎಂದರು.

ಉಳಿದ 9 ದಿನಗಳ ಪಾದಯಾತ್ರೆಗೆ ಸರ್ಕಾರ ಅವಕಾಶ ನೀಡುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಅವರು ಏನಾದರೂ ಮಾಡಲಿ, ನಮ್ಮ ನಿರ್ಧಾರ ಅಚಲ. ನಿನ್ನೆ ಬಸ್ ವ್ಯವಸ್ಥೆ ಇಲ್ಲದಿದ್ದರೂ ಜನ ಬಂದಿದ್ದಾರೆ’ ಎಂದರು.

ಎರಡನೇ ದಿನದ ಪಾದಯಾತ್ರೆಯ ಉತ್ಸಾಹ ಹೇಗಿದೆ ಎಂಬ ಪ್ರಶ್ನೆಗೆ, ‘ನಿನ್ನೆ ಕರ್ಫ್ಯೂನಿಂದ ವಾಹನಗಳಿಗೆ ಅವಕಾಶ ಇರಲಿಲ್ಲ. ಆದರೂ ಹಲವು ಕಡೆಗಳಿಂದ ಹುಡುಗರು ಹೇಗೆ ಬಂದರೊ ಗೊತ್ತಿಲ್ಲ. ನಿನ್ನೆ ಕಾಡಿನ ಮಧ್ಯೆ ಒಂದೇ ಮಾರ್ಗ ಇತ್ತು. ಇಂದು ಎರಡು ಮೂರು ಮಾರ್ಗಗಳಿದ್ದು, ಈಗ ಇಲ್ಲಿಂದ ಪಾದಯಾತ್ರೆ ಆರಂಭವಾಗಲಿದೆ. ಪ್ರತಿಯೊಬ್ಬರನ್ನೂ ಸ್ವಾಗತ ಮಾಡಿದ್ದೇವೆ. ನಮ್ಮ ಮನೆಯವರು ಕೂಡ ನಮ್ಮ ಮನೆಯನ್ನು ನಮ್ಮ ನಾಯಕರು, ಕಾರ್ಯಕರ್ತರಿಗೆ ಬಿಟ್ಟುಕೊಟ್ಟು ಮಗಳ ಮನೆಗೆ ಹೋಗಿದ್ದಾರೆ. ಕೆಪಿಸಿಸಿಯಿಂದ ಯಾವತ್ತು ಯಾವ ಜಿಲ್ಲೆಯ ಜನ ಬರಬೇಕು ಎಂದು ಸಿದ್ಧತೆ ಮಾಡಿದ್ದಾರೆ’ ಎಂದರು.

ಕೋವಿಡ್ ಹೆಚ್ಚಳದ ಬಗ್ಗೆ ಪ್ರಶ್ನೆ ಕೇಳಿದಾಗ, ‘ಮುಖ್ಯಮಂತ್ರಿಗಳಿಗೆ ಗೊತ್ತಿದೆಯೋ ಇಲ್ಲವೋ. ನಿನ್ನೆ ರಾತ್ರಿ ಅಧಿಕಾರಿಗಳು ಬಂದು ನನಗೆ ಕೋವಿಡ್ ಪರೀಕ್ಷೆ ಮಾಡಬೇಕು ಎಂದು ಕೇಳುತ್ತಾರೆ. ವಿಮಾನ ನಿಲ್ದಾಣದಲ್ಲಿ ಬಂದವರನ್ನೆಲ್ಲಾ ಪರೀಕ್ಷೆ ಮಾಡುತ್ತಿದ್ದಾರೆ. ಇಬ್ಬರಿಗೆ ಪರೀಕ್ಷೆ ಮಾಡಿದರೆ ಒಬ್ಬರಿಗೆ ಸೋಂಕು ಎಂದು ಹೇಳುತ್ತಿದ್ದಾರೆ. ಸಂಖ್ಯೆ ಹೆಚ್ಚಿಸಲು ಈ ರೀತಿ ಮಾಡುತ್ತಿದ್ದಾರೆ. ಈ ಬಗ್ಗೆ ಸರ್ಕಾರಿ ಅಧಿಕಾರಿಗಳೇ ಮಾಹಿತಿ ನೀಡುತ್ತಿದ್ದಾರೆ. ಇಲ್ಲಿ ನೂರಾರು ವೈದ್ಯರು ಇದ್ದಾರೆ. ನಮಗೆ ತೊಂದರೆ ಕೊಡುವ ಆಸೆ ನಿಮಗಿದ್ದರೆ ಕೊಡಿ. ಆದರೆ ಜನರಿಗೆ ಯಾಕೆ ತೊಂದರೆ ನೀಡುತ್ತೀರಿ? ಕೋವಿಡ್ ನಿಯಮ ಹಾಕಿ, ಆದರೆ ಕರ್ಫ್ಯೂ ತೆಗೆಯಿರಿ. ಜನರ ವ್ಯಾಪಾರ ಏನಾಗಬೇಕು? ಕೆಎಸ್ ಆರ್ಟಿಸಿ ಪರಿಸ್ಥಿತಿ ಏನಾಗಬೇಕು? ನಿನ್ನೆ ರಾತ್ರಿ ಕರ್ಫ್ಯೂ ಎಲ್ಲಿತ್ತು? ಜನ ಓಡಾಡುತ್ತಿದ್ದರಲ್ಲ. ನಿಮ್ಮ ಪಕ್ಷದವರು ಕಾನೂನು ಉಲ್ಲಂಘಿಸಿದ್ದಾಗ ಯಾವ ಕ್ರಮ ಕೈಗೊಂಡಿದ್ದೀರಿ. ನಿಮ್ಮ ಶಾಸಕ ಮುಸಲ್ಮಾನರ ವಿರುದ್ಧ ಬಾಯಿಗೆ ಬಂದಂತೆ ಮಾತನಾಡಿದಾಗ ಯಾಕೆ ಸುಮ್ಮನಿದ್ದೀರಿ? ಕೇವಲ ನಮ್ಮ ಮೇಲೆ ಯಾಕೆ ಪ್ರಕರಣ ದಾಖಲಿಸುತ್ತೀರಿ?

ವೈದ್ಯಾಧಿಕಾರಿಗಳು ಬಂದಿದ್ದು ಯಾಕೆ? ಎಂಬ ಪ್ರಶ್ನೆಗೆ, ‘ಅವರು ನನ್ನ ಪರೀಕ್ಷೆ ಮಾಡಬೇಕಂತೆ, ಪರೀಕ್ಷೆ ಮಾಡಿ ಪಾಸಿಟಿವ್ ಇದೆ ಅಂತಾ ಹೇಳಲು ಬಂದಿದ್ದಾರೆ. ಡಿಸಿ, ಸಿಇಒಗೆ ಕೋವಿಡ್ ಸೋಂಕು ಎದುರಾಗಿದ್ದು, ಅವರ ಪಕ್ಕದಲ್ಲಿದ್ದ ಸಿಎಂಗೂ ಏನಾದರೂ ಕೋವಿಡ್ ಬಂದಿದೆಯೇ? ನನಗೆ ಸೋಂಕಿನ ಲಕ್ಷಣಗಳಿವೆಯೇ? ನಾನು ಫಿಟ್ ಆಗಿದ್ದು, 15 ದಿನ ನಡೆಯುತ್ತೇನೆ. ಬನ್ನಿ ನನ್ನ ಜತೆ, ನೋಡಿ’ ಎಂದರು.

ಪಾದಯಾತ್ರೆ ಬಗ್ಗೆ ಸಚಿವರ ಟೀಕೆ, ಕೋವಿಡ್ ಹೆಚ್ಚಳವಾದರೆ ಕಾಂಗ್ರೆಸ್ ಕಾರಣ ಎಂಬ ಬಗ್ಗೆ ಕೇಳಿದ ಪ್ರಶ್ನೆಗೆ, ‘ಅವರ ಉದ್ದೇಶವೇ ನಮ್ಮ ಮೇಲೆ ಗೂಬೆ ಕೂರಿಸಲು ಕಾಯುತ್ತಿದ್ದಾರೆ. ಅವರು ಲಂಚ ಹೊಡೆದಿದ್ದನ್ನು ಯಾರೂ ಮರೆತಿಲ್ಲ. 10 ಸಾವಿರ ಬೆಡ್ ತಂದು, ಔಷಧಿ, ವೈದ್ಯಕೀಯ ಸಲಕರಣೆ ಖರೀದಿಯಲ್ಲಿ ಎಷ್ಟು ದುಡ್ಡು ಹೊಡೆದಿದ್ದಾರೆ. ಹೆಣದ ಮೇಲೆ ಹಣ ಮಾಡಿದರಲ್ಲಾ ಅದು ಲೆಕ್ಕಕ್ಕೆ ಇಲ್ಲವೇ? 4 ಲಕ್ಷ ಜನ ಸತ್ತಾಗ ಕೇವಲ 40 ಸಾವಿರ ಜನ ಸತ್ತಿದ್ದಾರೆ ಎಂದು ಹೇಳಿದರಲ್ಲಾ, ಸದನದಲ್ಲಿ ಗಲಾಟೆ ಮಾಡಿದಾಗ, ಕೆಲವರಿಗೆ 1 ಲಕ್ಷ ಕೊಡುವುದಾಗಿ ಹೇಳಿದ್ದಾರೆ. ಈ ಮೊದಲು ನಾವೇ ನಿಯಂತ್ರಣ ಮಾಡಿದ್ದೇವೆ ಎಂದರಲ್ಲಾ, ಮಾಡಲಿ. ಬೋಗಸ್ ನಂಬರ್ ಕೊಟ್ಟು ಜನರಿಗೆ ತೊಂದರೆ ಯಾಕೆ ಕೊಡುತ್ತಾರೆ? ರಾಜಕಾರಣ ಮಾಡಿ, ಆದರೆ ಜನರಿಗೆ ತೊಂದರೆ ಕೊಡುತ್ತಿರುವುದೇಕೆ? ತರಕಾರಿ ಮಾರಾಟವಾಗದೆ ಎಷ್ಟು ಜನ ಉಚಿತವಾಗಿ ಹಂಚಿದ್ದಾರೆ ಗೊತ್ತಿದೆಯೇ’ ಎಂದರು.

ಕಾಂಗ್ರೆಸ್ ಕಿವಿ ಹಿಡಿದು ಕ್ಷಮೆ ಕೋರಬೇಕು ಎಂಬ ಗೃಹಸಚಿವ ಅರಗ ಜ್ಞಾನೇಂದ್ರ ಅವರ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ, ‘ನಾನ್ಯಾಕೆ ಕ್ಷಮೆ ಕೇಳಲಿ? ಅಜ್ಞಾನದ ಜ್ಞಾನೇಂದ್ರನ ಮಾತನ್ನು ಬಹಳ ಗೌರವದಿಂದ ಸ್ವೀಕಾರ ಮಾಡುತ್ತೇನೆ. ಅವರು ಮಂತ್ರಿಗಿರಿ ಆರಂಭಿಸಿದ್ದೆ, ನಾವು ಅವರನ್ನು ರೇಪ್ ಮಾಡುತ್ತಿದ್ದೇವೆ ಎಂದು ಹೇಳುವ ಮೂಲಕ’ ಎಂದು ಛೇಡಿಸಿದರು.

ಯಾವ ಜಿಲ್ಲೆಗಳಿಂದ ಜನ ಬರಲಿದ್ದಾರೆ ಎಂಬ ಪ್ರಶ್ನೆಗೆ, ‘ಕೇವಲ ಕಾವೇರಿ ಜಲಾನಯನ ಪ್ರದೇಶದವರಿಗೆ ಮಾತ್ರ ಒಂದೊಂದು ದಿನ ಎಂದು ನಿಗದಿ ಮಾಡಿದ್ದೇವೆ. ಎಲ್ಲ ಜಿಲ್ಲೆಯ ಜನ ಎಲ್ಲ ದಿನಗಳಲ್ಲೂ ಬರಬಹುದು’ ಎಂದರು.

Leave a Reply

Your email address will not be published. Required fields are marked *