ಕಾಡಾನೆ ದಾಳಿಗೆ ವರ್ಷದ ಕೂಳು ಹಾಳು : ಕಣ್ಣೀರು ಹಾಕಿದ ರೈತರು
ರಾಮನಗರ (hairamanagara.in) : ಕಾಡಾನೆ ದಾಳಿ ನಿರಂತರವಾಗಿ ರೈತರು ಬೆಳೆದ ಬೆಳೆಗಳ ಮೇಲೆ ನಡೆಯುತ್ತಿದೆ. ಆನೆ ದಾಳಿಗೆ ರೈತರು ಬೆಳೆದ ವರ್ಷದ ಕೂಳು ಹಾಳಾಗಿ, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಚನ್ನಪಟ್ಟಣ ತಾಲ್ಲೂಕಿನ ಮಲ್ಲುಂಗೆರೆ ಮತ್ತು ದೊಡ್ಡನಹಳ್ಳಿ ಗ್ರಾಮದ ರೈತರ ಜಮೀನಿನಲ್ಲಿ ಬೆಳೆದಿದ್ದ ರೋಗಿ ಫಸಲನ್ನು ಕಾಡಾನೆಗಳು ದಾಳಿ ಮಾಡಿ ಹಾಳು ಮಾಡಿವೆ. ರೈತರು ಸಾಲ ಮಾಡಿ ವರ್ಷದ ಅನ್ನಕ್ಕಾಗಿ ಬೆಳೆಯುವ ರಾಗಿ ಹಾಗೂ ಇನ್ನಿತರ ಕೃಷಿ ಉತ್ಪನ್ನಗಳನ್ನು ಕಾಡಾನೆಗಳು ಹಾಳು ಮಾಡಿ ಹೋಗುತ್ತಿರುವುದು ಪ್ರತಿ ವರ್ಷವೂ ನಡೆಯುತ್ತಿದೆ. ಮಕ್ಲುಂಗೆರೆ ಗ್ರಾಮದ ಬೆಟ್ಟೇಗೌಡರ ಜಮೀನಿಗೆ ದಾಳಿಯಿಟ್ಟ ಕಾಡಾನೆಗಳ ಗುಂಪೊಂದು ಒಕ್ಕಣೆ ಮಾಡಲು ಹಾಕಿದ್ದ ರಾಗಿ ಮೆದೆಯನ್ನು ಹಾಗೂ ತೆಂಗಿನ ಮರಗಳನ್ನು ಉರುಳಿಸಿ ಲಕ್ಷಾಂತರ ರೂಪಾಯಿ ನಷ್ಟ ಮಾಡಿವೆ.

ಪ್ರತಿವರ್ಷವೂ ಇದೇ ಆಗುತ್ತಿದ್ದರೆ ರೈತನು ಆತ್ಮಹತ್ಯೆಯ ಮಾರ್ಗ ಹಿಡಿಯದೆ ಇನ್ನೇನು ಮಾಡುವನು.ಇದಕ್ಕೆ ಪರಿಹಾರವೇನು?ರೈತರ ಕಷ್ಟ ಕೇಳುವವರ್ಯಾರು? ಎಂದು ಗ್ರಾಮಸ್ಥರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಅರಣ್ಯ ಇಲಾಖೆ ಒಂದಿಷ್ಟು ಪರಿಹಾರ ನೀಡಿ ಸುಮ್ಮನೆ ಆಗುತ್ತದೆ. ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಿದರೆ ರೈತರು ನಿರಾತಂಕವಾಗಿ ಉಸಿರಾಡಬಹುದು ಎಂದು ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ. ರೈತರ ಜಮೀನುಗಳ ಮೇಲೆ ಆನೆಗಳು ದಾಳಿ ಮಾಡಿ ರೈತರ ಬದುಕನ್ನು ಮೂರಾಬಟ್ಟೆ ಮಾಡಿವೆ.
ವರದಿ : ಶೃತಿ ಹರೀಶ್ ಗೌಡ
ಮೊ: 9632008128