ನಗರಸಭೆಯಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸಿ : ಇ-ಖಾತೆ ಮಾಡಿಕೊಡಲು ಅಧಿಕಾರಿಗಳಿಂದ ವಿಳಂಬದ ಬಗ್ಗೆ ನಗರಸಭೆ ಸದಸ್ಯರ ಆರೋಪ

ರಾಮನಗರ (hairamanagara.in) : ಇಲ್ಲಿನ ನಗರಸಭೆಯ ಸಭಾಂಗಣದಲ್ಲಿ ನಗರಸಭೆ ಅಧ್ಯಕ್ಷೆ ಬಿ.ಸಿ. ಪಾರ್ವತಮ್ಮ ಅವರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು.
ನಗರಸಭೆಯಲ್ಲಿ ಇ–ಖಾತೆ ಮಾಡಿಕೊಡಲು ಮಧ್ಯವರ್ತಿಗಳನ್ನು ಬಳಸಿಕೊಳ್ಳಲಾಗುತ್ತಿದ್ದು, ಇದಕ್ಕೆ ತಡೆಹಾಕಬೇಕು. ನಗರಸಭೆ ಅಧಿಕಾರಿಗಳು ಇ–ಖಾತೆಯನ್ನು ಮಾಡಿಕೊಡುವಲ್ಲಿ ವಿಳಂಬ ಮಾಡುತ್ತಿದ್ದಾರೆ. ಮಧ್ಯವರ್ತಿಗಳ ಹಾವಳಿಯಿಂದಾಗಿ ಸಾಮಾನ್ಯ ಜನರಿಗೆ ಇ–ಖಾತೆ ಮಾಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇ–ಖಾತೆಗೆ ಲಂಚ ಪಡೆಯಲಾಗುತ್ತಿದೆ ಎಂದು ಸದಸ್ಯರಾದ ಅಮ್ಜದ್, ಕೆ.ಶೇಷಾದ್ರಿ ಸೇರಿದಂತೆ ಕೆಲವು ಸದಸ್ಯರ ಗಂಭೀರವಾಗಿ ಆರೋಪಿಸಿದರು.
ನಗರಸಭೆಗೆ ಮಧ್ಯವರ್ತಿಗಳು ಬರುವುದನ್ನು ತಡೆಯಬೇಕು. ಸಂಬಂಧಪಟ್ಟವನ್ನು ಹೊರತುಪಡಿಸಿ ಬೇರೆಯವರು ಬರಬಾರದು. ಯಾವುದೇ ಭ್ರಷ್ಟಾಚಾರಕ್ಕೆ ಆಸ್ಪದ ನೀಡಬಾರದು. ಒಮ್ಮೆ ಇ–ಖಾತೆಗೆ ದಾಖಲೆ ನೀಡಿದರೆ, ಮತ್ತೊಮ್ಮೆ ಸಿಬ್ಬಂದಿಗಳು ಪರಿಶೀಲನೆಯ ನೆಪದಲ್ಲಿ ಮತ್ತೆ ಮತ್ತೆ ದಾಖಲೆಗಳನ್ನು ನೀಡುವಂತೆ ಸೂಚನೆ ನೀಡುತ್ತಿದ್ದಾರೆ. ಈ ಹಿಂದೆ ನೀಡಿರುವ ದಾಖಲೆಗಳು ಏನಾಗುತ್ತಿದೆ ಎಂದು ಪ್ರಶ್ನಿಸಿದ ಅವರು, ಕಳೆದ ಎರಡೂವರೇ ವರ್ಷಗಳಿಂದ ನಗರಸಭೆ ವ್ಯಾಪ್ತಿಯಲ್ಲಿ ಮಾಡಲಾಗಿರುವ ಇ–ಖಾತೆ ಬಗ್ಗೆ ಮಾಹಿತಿ ನೀಡಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ಉತ್ತರ ನೀಡಿದ ಪೌರಾಯುಕ್ತ ನಂದಕುಮಾರ್ ಮಾತನಾಡಿ ಕಳೆದ ಎರಡೂವರೇ ವರ್ಷಗಳಿಂದ ನಗರಸಭೆ ವ್ಯಾಪ್ತಿಯಲ್ಲಿ 9 ಸಾವಿರ ಇ–ಖಾತೆಗಳನ್ನು ಮಾಡಲಾಗಿದೆ. ಸರಿಯಾದ ಮಾಹಿತಿ ನೀಡದೇ ಹಾಗೂ ದಾಖಲೆಗಳನ್ನು ಒದಗಿಸದವರ ಇ–ಖಾತೆಗಳಿಗೆ ತಡೆ ನೀಡಲಾಗಿದೆ. ಮುಂದಿನ ದಿನದಲ್ಲಿ ಯಾವುದೇ ಸಮಸ್ಯೆಗೆ ಆಸ್ಪದ ನೀಡದಂತೆ ಕಾರ್ಯನಿರ್ವಹಿಸಲಾಗುವುದು ಎಂದು ತಿಳಿಸಿದರು.
ನಗರ ನಿವಾಸಿಗಳಿಗೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆ ಮಾಡುತ್ತಿಲ್ಲ. ಜೊತೆಗೆ ವಾರ್ಡ್‌ಗಳಲ್ಲಿ ಹಲವಾರು ಸಮಸ್ಯೆಗಳಿದ್ದು ಇದರ ಬಗ್ಗೆ ಚರ್ಚಿಸಲು ಪ್ರತ್ಯೇಕವಾದ ಸಭೆ ಆಯೋಜನೆ ಮಾಡುವಂತೆ ಸದಸ್ಯರು ಆಗ್ರಹಿಸಿದರು.
ಇದಕ್ಕೆ ಉತ್ತರಿಸಿದ ನಗರಸಭೆ ಅಧ್ಯಕ್ಷೆ ಪಾರ್ವತಮ್ಮ ಮಾತನಾಡಿ ಶೀಘ್ರವಾಗಿ ಪ್ರತ್ಯೇಕ ಸಭೆ ಆಯೋಜನೆ ಮಾಡಲಾಗುವುದು ಎಂದರು.
ನಗರಸಭೆ ವ್ಯಾಪ್ತಿಯಲ್ಲಿನ ಪುಟ್‌ಪಾತ್ ಒತ್ತುವರಿ ತೆರೆವುಗೊಳಿಸಬೇಕು. ಜೆಸಿಬಿ ಯಂತ್ರ ಸೇರಿದಂತೆ ಅಗತ್ಯ ಪರಿಕರಗಳನ್ನು ತೆಗೆದುಕೊಳ್ಳಬೇಕು. ಕೋವಿಡ್‌ನಿಂದ ಮೃತಪಟ್ಟ ಕುಟುಂಬಕ್ಕೆ ಪರಿಹಾರ ನೀಡಬೇಕು. ನಗರದಲ್ಲಿ ಉಂಟಾಗಿರುವ ಟ್ರಾಫಿಕ್ ಸಮಸ್ಯೆಯನ್ನು ಪರಿಹರಿಸಬೇಕು ಮತ್ತಿತರ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.

Leave a Reply

Your email address will not be published. Required fields are marked *